ಅರಾವಳಿ ಕುರಿತ ತನ್ನದೇ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್

ಗಿರಿ ಶ್ರೇಣಿಯ ಕುರಿತು ಸಮಿತಿ ಮಾಡಿದ್ದ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದ ಬೆನ್ನಿಗೇ ಪ್ರತಿಭಟನೆಗಳು ಆರಂಭವಾಗಿದ್ದವು. ಹೀಗಾಗಿ ಸ್ವಯಂಪ್ರೇರಿತ ವಿಚಾರಣೆಗೆ ಪೀಠ ಮುಂದಾಗಿತ್ತು.
Supreme Court of India
Supreme Court of India
Published on

ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಹಬ್ಬಿರುವ ಅರಾವಳಿ ಪರ್ವತ ಶೇಣಿಗೆ ಸಂಬಂಧಿಸಿದಂತೆ ತಾನು ಅನುಮೋದಿಸಿದ್ದ ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ಅಗತ್ಯವಿದೆ ಎಂದು ತಿಳಿಸಿರುವ ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ತಾನು ನೀಡಿದ್ದ ತೀರ್ಪಿಗೆ ಸೋಮವಾರ ತಾತ್ಕಾಲಿಕ ತಡೆ ನೀಡಿದೆ.

ಜೊತೆಗೆ, ಬಹುತೇಕ ಅಧಿಕಾರಿಗಳನ್ನು ಒಳಗೊಂಡಿದ್ದ ಹಿಂದಿನ ಸಮಿತಿಯ ಶಿಫಾರಸುಗಳಿಂದ ಉಂಟಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

Also Read
ಅರಾವಳಿ ಕುರಿತ ವ್ಯಾಖ್ಯಾನ: ಇಂದು ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

ಗಣಿಗಾರಿಕೆ ಉದ್ದೇಶಕ್ಕಾಗಿ ಅರಾವಳಿ ಶ್ರೇಣಿಯನ್ನು ವ್ಯಾಖ್ಯಾನಿಸಲು ರಚಿಸಲಾದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ನೀಡಲಾಗಿದ್ದ ಇತ್ತೀಚಿನ ತೀರ್ಪಿಗೆ ಸಿಜೆಐ ಸೂರ್ಯ ಕಾಂತ್‌, ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಹಾಗೂ ಎ ಜೆ ಮಸೀಹ್‌ ಅವರಿದ್ದ ಪೀಠ ತಡೆ ನೀಡಿತು.

ಅರಾವಳಿ ಪರ್ವತ ಕುರಿತು ಸುಪ್ರೀಂ ಕೋರ್ಟ್‌ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಈ ಆದೇಶ ನೀಡಿದೆ.

ಸಮಿತಿ ನೀಡಿರುವ ಶಿಫಾರಸುಗಳು ಹಾಗೂ ಸುಪ್ರೀಂ ಕೋರ್ಟ್‌ನ ಈ ಹಿಂದಿನ ಅವಲೋಕನಗಳು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಈ ಪ್ರಕರಣವನ್ನು 2026ರ ಜನವರಿ 21ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯದ ಆದೇಶಗಳು, ಸರ್ಕಾರದ ಪಾತ್ರ ಸೇರಿದಂತೆ ಹಲವು ವಿಷಯಗಳಲ್ಲಿ ತಪ್ಪು ಕಲ್ಪನೆಗಳು ಉಂಟಾಗಿದ್ದವು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಿ, ಅದು ನೀಡಿದ್ದ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದೆ ಎಂದರು.

Also Read
ರಿಯಲ್‌ ಎಸ್ಟೇಟ್‌: ಅರಾವಳಿಗೆ ಕೊಡಲಿ ಪೆಟ್ಟು ನೀಡಲು ಮುಂದಾದ ಡಿಎಲ್‌ಎಫ್‌, ಪಿಐಎಲ್‌ ದಾಖಲಿಸಿದ ಹರ್ಯಾಣ ಹೈಕೋರ್ಟ್‌

ಸಿಜೆಐ ಸೂರ್ಯ ಕಾಂತ್, ಅರಾವಳಿ ಪರ್ವತಗಳಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು, ವಿಶೇಷವಾಗಿ ಬೆಟ್ಟಗಳು ಮತ್ತು ಶ್ರೇಣಿಗಳ ವ್ಯಾಖ್ಯಾನ ಕುರಿತು ಸ್ವತಂತ್ರ ತಜ್ಞರ ಅಭಿಪ್ರಾಯ ಅಗತ್ಯವಿದೆ ಎಂದು ಹೇಳಿದರು.

ಕಳೆದ ತಿಂಗಳು ಅಂಗೀಕರಿಸಲಾದ ನಿರ್ಬಂಧಿತ ಗುರುತಿಸುವಿಕೆಯ ನಿರ್ಧಾರದಿಂದ ಗಣಿಗಾರಿಕೆಯಂತಹ ಚಟುವಟಿಕೆಗಳಿಗೆ ಅನುಮತಿ ದೊರಕುವ ಪ್ರದೇಶಗಳ ವ್ಯಾಪ್ತಿ ಹೆಚ್ಚಾಗಬಹುದೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪೀಠ ತಿಳಿಸಿತು.

ಹೊಸ ವ್ಯಾಖ್ಯಾನದಡಿ ಗುರುತಿಸಲಾದ ಅರಾವಳಿ ಪ್ರದೇಶದಲ್ಲಿ ನಡೆಸಲಾಗುವ ನಿಯಂತ್ರಿತ ಅಥವಾ ಸ್ಥಿರ ಗಣಿಗಾರಿಕೆಯು ಪರಿಸರಕ್ಕೆ ಹಾನಿಕಾರಕ ಪರಿಣಾಮ ಉಂಟುಮಾಡಬಹುದೇ ಎಂಬುದನ್ನೂ ಪರಿಶೀಲಿಸಬೇಕಿದೆ ಎಂದು ಸಿಜೆಐ ಹೇಳಿದರು. ಈ ಸಂಬಂಧ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದ ಪೀಠ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಹಿಂದೆ ನ್ಯಾಯಾಲಯ ನೀಡಿದ್ದ ನಿರ್ದೇಶನಗಳು ಮತ್ತು ಸಮಿತಿಯ ಶಿಫಾರಸುಗಳನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಆದೇಶಿಸಿತು.

Kannada Bar & Bench
kannada.barandbench.com