ಭಾರತ ಸರ್ಕಾರ ಲೋಕಸಭೆಯಲ್ಲಿ ಇತ್ತೀಚೆಗೆ ಮಂಡಿಸಿದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಮಸೂದೆ 2023 ಕುರಿತು ಅಧ್ಯಯನ ಮಾಡಲು ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ತನ್ನ ವರದಿಯನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು.
ವರದಿಯ ಮುಖ್ಯಾಂಶಗಳ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ವರದಿಯನ್ನು ಪರಿಶೀಲಿಸಿ, ಸರ್ಕಾರ ತನ್ನ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವರಿಗೆ ತಿಳಿಸಲಿದೆ. ತಾವು ಗೃಹ ಸಚಿವರನ್ನು ಭೇಟಿಯಾಗುವ ಸಂದರ್ಭದಲ್ಲಿಯೂ ಈ ವಿಷಯ ಕುರಿತು ಚರ್ಚಿಸುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲ ಅವರು ಸಮಿತಿಯು 10 ಸಭೆಗಳನ್ನು ನಡೆಸಿ, ಮೂರೂ ಮಸೂದೆಗಳ ಪ್ರತಿಯೊಂದು ಸೆಕ್ಷನ್ ಕುರಿತೂ ಸವಿವರವಾಗಿ ಅಧ್ಯಯನ ನಡೆಸಿ, ಚರ್ಚಿಸಿ, ವರದಿ ರೂಪಿಸಿದೆ ಎಂದು ತಿಳಿಸಿದರು.
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ, ಕಾನೂನು, ನ್ಯಾಯ ಮತ್ತು ಮಾನವಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಎಂ. ಹಿರೇಮಠ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಕಾರ್ಯದರ್ಶಿ ಶ್ರೀಧರ್ ಜಿ., ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ವಿಶೇಷ ಕಾರ್ಯದರ್ಶಿ ಹಾಗೂ ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕ ಎಚ್ ಕೆ ಜಗದೀಶ್, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಪರ ಕಾರ್ಯದರ್ಶಿ ಶ್ರೀಮತಿ ಶೀಲಾ ಬಿ.ಎಂ., ನಿವೃತ್ತ ಪ್ರೊಫೆಸರ್ ಚಿದಾನಂದ ಪಾಟೀಲ, ವಕೀಲರಾದ ಶಶಿಕಾಂತ್ ಕರೋಶಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎನ್ ಎಸ್ ಮೇಘರಿಖ್, ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಗೆ (ಎನ್ಎಲ್‌ಎಸ್‌ಐಯು) ಪ್ರೊಫೆಸರ್ ಎಸ್ ವಿ ಜೋಗರಾವ್, ಕಾನೂನು, ನ್ಯಾಯ ಮತ್ತು ಮಾನವಹಕ್ಕುಗಳ ಇಲಾಖೆಯ ನಿವೃತ್ತ ಅಪರ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಮೊದಲಾದವರು ಸಮಿತಿಯ ಸದಸ್ಯರಾಗಿದ್ದರು.