ramesh sogemane
ಸುದ್ದಿಗಳು

ಮಾಧ್ಯಮಗಳಿಗೆ ಕಳುಹಿಸುವ ಮೊದಲು ನ್ಯಾಯಾಲಯಕ್ಕೆ ಉತ್ತರಗಳನ್ನು ಸಲ್ಲಿಸಿ: ಸಿಜೆಐ ಎನ್‌ ವಿ ರಮಣ

ಕರ್ನಾಟಕದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಮತ್ತು ರಫ್ತು ಮೇಲಿನ ನಿಷೇಧ ಹಿಂತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Bar & Bench

ನ್ಯಾಯಾಲಯದ ಮುಂದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕೃತ ಉತ್ತರಗಳನ್ನು ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ಬಿಡುಗಡೆ ಮಾಡುವುದಕ್ಕೂ ಮೊದಲು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಸೋಮವಾರ ತಾಕೀತು ಮಾಡಿದ್ದಾರೆ.

ಕರ್ನಾಟಕದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಮತ್ತು ರಫ್ತಿನ ಮೇಲಿನ ನಿಷೇಧ ಹಿಂತೆಗೆದುಕೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಹೀಗೆ ತಮ್ಮ ಅಸಮಾಧಾನ ಹೊರ ಹಾಕಿದರು.

ಪ್ರಕರಣದಲ್ಲಿ ಕೇಂದ್ರ ಉಕ್ಕು ಸಚಿವಾಲಯದ ಪ್ರತಿಕ್ರಿಯೆ ಮೇರೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ ಅವರನ್ನು ಉದ್ದೇಶಿಸಿ ಸಿಜೆಐ "ದಯವಿಟ್ಟು ಮೊದಲು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಿ ನಂತರ ಮಾಧ್ಯಮಗಳಿಗೆ ನೀಡಿ. ಈ ಪ್ರತಿಕ್ರಿಯೆ ನಿನ್ನೆಯೇ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ ಎಂದು ನನ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ" ಎಂದರು.

ಆಗ ಎಎಸ್‌ಜಿ “ನಮ್ಮ ಕಡೆಯಿಂದ ಅಂತಹ ಅಚಾತುರ್ಯ ಆಗುವುದಿಲ್ಲ” ಎಂದರು. ಅಂತಿಮವಾಗಿ ಪ್ರಕರಣವನ್ನು ಮುಂದೂಡಲಾಯಿತು.