Justice Prathiba M. Singh 
ಸುದ್ದಿಗಳು

ಬೌದ್ಧಿಕ ಆಸ್ತಿ ಕಾನೂನಿನಡಿ ಜಾಹೀರಾತು ಪ್ರಚಾರಾಂದೋಲನದ ವಿಶಿಷ್ಟ ಅಂಶಗಳಿಗೆ ರಕ್ಷಣೆ ನೀಡಬಹುದು: ದೆಹಲಿ ಹೈಕೋರ್ಟ್

ವಿಶಿಷ್ಟತೆ ಸಾಬೀತು ಪಡಿಸುವ ಮಿತಿ ತುಂಬಾ ಹೆಚ್ಚಾಗಿದ್ದು ವಂಚನೆ ಅಥವಾ ಗೊಂದಲದ ಸಾಧ್ಯತೆ ಇದ್ದಾಗ ಮಾತ್ರ ಪ್ರತಿವಾದಿಗಳ ವಿರುದ್ಧ ತಡೆಯಾಜ್ಞೆ ನೀಡಬಹುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಬೌದ್ಧಿಕ ಆಸ್ತಿ ಕಾನೂನಿನ ಅಡಿಯಲ್ಲಿ ಜಾಹೀರಾತು ಪ್ರಚಾರಾಂದೋಲನಗಳಲ್ಲಿನ ವಿಶಿಷ್ಟ ಅಂಶಗಳನ್ನು ನ್ಯಾಯಾಲಯಗಳು ರಕ್ಷಿಸಬಹುದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. [ಬ್ರೈಟ್ ಲೈಫ್‌ಕೇರ್ ಪ್ರೈವೇಟ್ ಲಿಮಿಟೆಡ್ ಮತ್ತು ವಿನಿ ಕಾಸ್ಮೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆನ್‌ಆರ್].

“ವಿಶಿಷ್ಟತೆ ಸಾಬೀತು ಪಡಿಸುವ ಮಿತಿ ತುಂಬಾ ಹೆಚ್ಚಾಗಿದ್ದು ವಂಚನೆ ಅಥವಾ ಗೊಂದಲದ ಸಾಧ್ಯತೆ ಇಲ್ಲದೇ ಹೋದರೆ ಪ್ರತಿವಾದಿಗಳ ವಿರುದ್ಧ ತಡೆಯಾಜ್ಞೆ ನೀಡಲು ಸಾಧ್ಯವಲ್ಲ ಏಕೆಂದರೆ ಇದು ಸೃಜನಶೀಲತೆಯನ್ನು ಹಾಳುಗೆಡವುತ್ತದೆ” ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಪೀಠ ತಿಳಿಸಿತು.

"ಆದ್ದರಿಂದ, ಕಾನೂನಿನಲ್ಲಿ, ಜಾಹೀರಾತು ಪ್ರಚಾರಾಂದೋನವೊಂದು ಮೂಲವನ್ನು ಸಂಕೇತಿಸಿದ್ದರೆ ಮತ್ತು ಫಿರ್ಯಾದಿಯ ವಿಶಿಷ್ಟತೆಯನ್ನು ಹೊಂದಿದ್ದರೆ, ರಕ್ಷಣೆ ನೀಡಬಹುದು" ಎಂದು ನ್ಯಾಯಾಲಯ ಹೇಳಿತು.

ಬ್ರೈಟ್ ಲೈಫ್‌ಕೇರ್ ಪ್ರೈವೇಟ್ ಲಿಮಿಟೆಡ್‌ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ನ್ಯಾಯಾ;ಲಯ ಈ ತೀರ್ಪು ನೀಡಿತು. ʼಮಸಲ್‌ಬ್ಲೇಜ್‌ʼ ವಾಣಿಜ್ಯಚಿಹ್ನೆಯಡಿ ಮಾರಾಟವಾಗುವ ಬ್ರೈಟ್ ಲೈಫ್‌ಕೇರ್‌ನ ಪ್ರೋಟಿನ್‌ ಉತ್ಪನ್ನ ಅತ್ಯಂತ ಜನಪ್ರಿಯ.

ಔಷಧ, ಆಯುರ್ವೇದ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ವಿನಿ ಕಾಸ್ಮೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ವಿರುದ್ಧ ಅದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದು ಫಾಗ್, ಒಸ್ಸಮ್ ಮತ್ತು ವೈಟ್‌ಟೋನ್‌ನಂತಹ ಸುಗಂಧ ದ್ರವ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

ಜಾಹೀರಾತು ಪ್ರಚಾರಾಂದೋಲನದಲ್ಲಿ ತಾನು ಬಳಸಿದ್ದ ಜಿದ್‌ ಮತ್ತು ಜಿದ್ದಿ ಪದಗಳನ್ನು ವಿನಿ ಕಾಸ್ಮೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಜಾಹೀರಾತುಗಳಿಗೆ ಬಳಸಿಕೊಂಡಿದೆ. ಅದರ ಎರಡು ಜಾಹೀರಾತುಗಳಲ್ಲಿ ಬಳಸಲಾದ ಆ ಪದಗಳು ಪರಿಕಲ್ಪನಾತ್ಮಕವಾಗಿ ಮತ್ತು ದೃಗ್ಗೋಚರವಾಗಿ ತಾವು ಬಳಸಿದ ಪದಗಳಂತೆಯೇ ಇವೆ. ಇದು ತಮ್ಮ ವಾಣಿಜ್ಯ ಚಿಹ್ನೆಗೆ ಮೋಸಮಾಡುತ್ತದೆ ಎಂದು ಬ್ರೈಟ್ ಲೈಫ್‌ಕೇರ್ ಪ್ರೈವೇಟ್ ಲಿಮಿಟೆಡ್‌ ವಾದ ಮಂಡಿಸಿತ್ತು.

ಜಾಹೀರಾತಿನ ಸ್ಕ್ರೀನ್‌ಶಾಟ್‌ಗಳನ್ನು ಗಮನಿಸಿದ ನ್ಯಾಯಮೂರ್ತಿಗಳು, ಎರಡೂ ಜಾಹೀರಾತುಗಳನ್ನು ವೀಕ್ಷಕರು ನೋಡಿದರೆ ಅವು ಒಂದೇ ರೀತಿ ಇರುವಂತೆ ತೋರುತ್ತವೆ. ವಿನಿ ಕಾಸ್ಮೆಟಿಕ್ಸ್‌ನ ಎರಡೂ ಜಾಹೀರಾತುಗಳು ಬ್ರೈಟ್‌ ಲೈಫ್‌ಕೇರ್‌ನ ಸೃಜನಾತ್ಮಕ ಅಭಿವ್ಯಕ್ತಿಯನ್ನು ಅನುಕರಿಸಿದೆ. ಜಿದ್‌ ಅಥವಾ ಜಿದ್ದಿ ಪದಗಳ ಬಳಕೆ ಮೇಲೆ ಏಕಸ್ವಾಮ್ಯ ಅಥವಾ ಅನನ್ಯತೆಯ ಹಕ್ಕನ್ನು ಸಾಧಿಸಲಾಗದು. ಆದರೆ ಅದರ ದೃಶ್ಯ ವಿಭಿನ್ನವಾಗಿರಬೇಕಿತ್ತು” ಎಂದು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ ಯೂಟ್ಯೂಬ್ ಮತ್ತಿತರ ಪ್ಲಾಟ್‌ಫಾರ್ಮ್‌ಗಳಿಂದ ಎರಡೂ ಜಾಹೀರಾತುಗಳನ್ನು ತೆಗೆದು ಹಾಕುವಂತೆ ವಿನಿ ಕಾಸ್ಮೆಟಿಕ್ಸ್‌ಗೆ ನ್ಯಾಯಾಲಯ ಸೂಚಿಸಿತು. ಆದರೆ ಬ್ರೈಟ್‌ ಲೈಫ್‌ಕೇರ್‌ನ ಜಾಹೀರಾತುಗಳಿಗೆ ಹೋಲದ ರೀತಿಯಲ್ಲಿ ಜಿದ್‌ ಮತ್ತು ಜಿದ್ದಿ ಪದಗಳನ್ನು ವಿನಿ ಕಾಸ್ಮೆಟಿಕ್ಸ್‌ ಬಳಸುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ಜೊತೆಗೆ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಿ ಪುನರಾರಂಭಿಸುವ ಸಲುವಾಗಿ ತನ್ನ ಜಾಹೀರಾತುಗಳನ್ನು ಮಾರ್ಪಡಿಸಲು ಅದು ಸ್ವತಂತ್ರವಾಗಿದೆ ಎಂದು ಪೀಠ ಸ್ಪಷ್ಟಪಡಿಸಿತು