Justice Surya Kant 
ಸುದ್ದಿಗಳು

ಕಾನೂನು ವೃತ್ತಿಯಲ್ಲಿ ಯಶಸ್ಸನ್ನು ಆರ್ಥಿಕ ಲಾಭದಿಂದಲ್ಲ, ನೈತಿಕ ತೂಕದಿಂದ ಅಳೆಯಲಾಗುತ್ತದೆ: ನ್ಯಾ. ಸೂರ್ಯ ಕಾಂತ್

ಗುವಾಹಟಿಯಲ್ಲಿ ಶುಕ್ರವಾರ ನಡೆದ ಅಸ್ಸಾಂನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ನ್ಯಾಯಾಂಗ ಅಕಾಡೆಮಿಯ (ಎನ್ಎಲ್‌ಯುಜೆಎ) 3ನೇ ಘಟಿಕೋತ್ಸವದಲ್ಲಿ ನ್ಯಾ. ಕಾಂತ್ ಅವರು ಮಾತನಾಡಿದರು.

Bar & Bench

ಅನೇಕ ಪ್ರತಿಭಾನ್ವಿತ ಯುವ ವಕೀಲರು ವೃತ್ತಿಪರ ಮತ್ತು ಕಾನೂನು ನೆರವು ಕೆಲಸಗಳಿಂದ ದೂರ ಸರಿದು ಕಾರ್ಪೊರೇಟ್ ಉದ್ಯೋಗಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ ವಿಷಾದ ವ್ಯಕ್ತಪಡಿಸಿದರು.

ಗುವಾಹಟಿಯಲ್ಲಿ ಶುಕ್ರವಾರ ನಡೆದ ಅಸ್ಸಾಂನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ನ್ಯಾಯಾಂಗ ಅಕಾಡೆಮಿಯ (ಎನ್ಎಲ್‌ಯುಜೆಎ) 3 ನೇ ಘಟಿಕೋತ್ಸವದಲ್ಲಿ ನ್ಯಾ.  ಕಾಂತ್ ಅವರು ಮಾತನಾಡಿದರು.

ಕಾನೂನು ವೃತ್ತಿಯಲ್ಲಿ ಯಶಸ್ಸನ್ನು ಆರ್ಥಿಕ ಲಾಭದಿಂದಲ್ಲ, ನೈತಿಕ ತೂಕದಿಂದ ಅಳೆಯುವುದರಿಂದ ಕಾನೂನನ್ನು ಕೇವಲ ವೃತ್ತಿ ಆಯ್ಕೆಯಾಗಿ ನೋಡದೆ, ಉನ್ನತ ಹುದ್ದೆಯಾಗಿ ಪರಿಗಣಿಸುವಂತೆ ಅವರು ಯುವ ವಕೀಲರಿಗೆ ಕರೆ ನೀಡಿದರು.

ನ್ಯಾ. ಕಾಂತ್‌ ಅವರ ಭಾಷಣದ ಪ್ರಮುಖಾಂಶಗಳು

  • ಭರವಸೆ  ತುಂಬಿದ ಪ್ರಬುದ್ಧ ಮನಸ್ಸುಗಳು ಲಾಭರಹಿತ ಕೆಲಸ ಅಥವಾ ಕಾನೂನು ನೆರವು ನೀಡುವ ಆಲೋಚನೆಯಿಂದ ದೂರ ಸರಿಯುತ್ತಿದ್ದು ಅದನ್ನು ಲಾಭದಾಯಕವಲ್ಲದ ಬಾಹ್ಯ ಚಟುವಟಿಕೆ ಎಂದು ತಳ್ಳಿಹಾಕುತ್ತಿವೆ.

  • ಕಿರಿಯ ವಕೀಲರು ಕಾರ್ಪೊರೇಟ್‌ ಭದ್ರತೆಯ ಬೆನ್ನು ಹತ್ತಿದ್ದು ನ್ಯಾಯ ದೊರೆಯದೆ ಹೋಗುವವರಿಗೆ ಅದನ್ನು ಒದಗಿಸಿದಾಗ ಕಾನೂನಿನ ಉದಾತ್ತ ಉದ್ದೇಶ ಸಾಕಾರಗೊಳ್ಳುತ್ತದೆ ಎಂಬುದನ್ನು ಮರೆಯುತ್ತಿದ್ದಾರೆ.

  • ಈಚಿನ ವರ್ಷಗಳಲ್ಲಿ ಕಿರಿಯ ವಕೀಲರಲ್ಲಿ ಕಂಡುಬರುತ್ತಿರುವ ತಣ್ಣನೆಯ ಉದ್ವಿಗ್ನತೆಯೊಂದು  ನನ್ನ ಅನುಭವಕ್ಕೆ ಬಂದಿದೆ. ನೈತಿಕತೆ ಎಂಬುದನ್ನು ಆಯ್ಕೆಯ ವಿಚಾರವಾಗಿಸುವ ಮತ್ತು ಪ್ರಾಮಾಣಿಕತೆಯನ್ನು ರಾಜಿಯ ವಿಷಯವಾಗಿ ಪರಿಗಣಿಸುವ ಪ್ರವೃತ್ತಿ ಹೆಚ್ಚು ಕಂಡು ಬರುತ್ತಿದೆ.

  • ವೃತ್ತಿಪರ ಪ್ರಾಮಾಣಿಕತೆ ಕಾನೂನು ವೃತ್ತಿಯ ಅಡಿಗಲ್ಲಾಗಿದ್ದು ಇದು ಆರ್ಥಿಕ ಯಶಸ್ಸು ಅಥವಾ ತಾತ್ಕಾಲಿಕ ಪ್ರಶಂಸೆಗಿಂತಲೂ ಹೆಚ್ಚು ಮಹತ್ವದ್ದಾಗಿದೆ.

  • ವಕೀಲರ ವರ್ಚಸ್ಸು ಒಂದು ಬಾರಿ ನಡೆದ ವಾದದ ಪ್ರತಿಭೆಗಿಂತಲೂ ಅವರ ನಿರಂತರವಾದ ನಡೆಯ ಮೂಲಕ ಕಾಲಾನಂತರದಲ್ಲಿ ರೂಪುಗೊಳ್ಳುತ್ತದೆ. 

  • ದೇಶದಲ್ಲಿ ಕಾನೂನು ಶಿಕ್ಷಣ ನೀಡುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮೌಲಸೌಕರ್ಯ ನ್ಯೂನತೆ, ಅಧ್ಯಾಪಕರ ಸಂಖ್ಯೆಯ ಕೊರತೆ, ಇಲ್ಲವೇ ದೃಷ್ಟಿಕೋನದ ಮಿತಿಗಳು ಕಂಡುಬರುತ್ತಿವೆ.