Sudha Bharadwaj
Sudha Bharadwaj 
ಸುದ್ದಿಗಳು

ನನ್ನ ವಿರುದ್ಧದ ಕೀಳು ಆರೋಪಗಳನ್ನು ಎನ್ಐಎ ಮತ್ತದರ ವಕೀಲರು ಹಿಂಪಡೆಯಲಿ: ಸುಧಾ ಭಾರದ್ವಾಜ್ ಅರ್ಜಿ

Bar & Bench

ಎನ್‌ಐಎ ಸಲ್ಲಿಸಿದ್ದ ಪ್ರತಿಕ್ರಿಯೆ ವೇಳೆ ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಹಿಂಪಡೆಯಬೇಕು ಎಂದು ಕೋರಿ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್‌ ಅವರು ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಎನ್‌ಐಎ ಮತ್ತು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಕಾಶ್‌ ಶೆಟ್ಟಿ ಅವರು ತಮ್ಮ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದು ಇದರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಭವಿಷ್ಯದಲ್ಲಿಯೂ ಇಂತಹ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಮ್ಮ ವಿರುದ್ಧದ ಆರೋಪಗಳನ್ನು ಹಿಂಪಡೆಯಲು ಮತ್ತು ದಾಖಲೆಗಳಲ್ಲಿರುವ ಮಾನಹಾನಿಕರ ಹೇಳಿಕೆಗಳನ್ನು ತೆಗೆದುಹಾಕಲು ಎನ್‌ಐಎಗೆ ನಿರ್ದೇಶನ ನೀಡುವಂತೆ ಅವರು ಪ್ರಾರ್ಥಿಸಿದ್ದಾರೆ, ತನಿಖಾಧಿಕಾರಿ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಸಹಿ ಇರುವ ಎನ್‌ಐಎ ಪ್ರತಿಕ್ರಿಯೆ, ಮಾನಹಾನಿಕಾರಕವಾಗಿದೆ ಮತ್ತು ಆಧಾರರಹಿತ ಆರೋಪಗಳಿಂದ ಕೂಡಿದೆ ಎಂದು ಭಾರದ್ವಾಜ್‌ ಹೇಳಿದ್ದಾರೆ.

ಎನ್‌ಐಎ ಸಲ್ಲಿಸಿರುವ ಪ್ರತಿಕ್ರಿಯೆ ಹೀಗಿದೆ; “ಆರೋಪಿ ಸುಧಾ ಭಾರದ್ವಾಜ್‌ ಅವರು ಸಾಕ್ಷಿಗಳಿಗೆ ಹಾನಿ ಮಾಡುವ ಸಲುವಾಗಿ ಅವರ ಗುರುತುಗಳನ್ನು ಕೆದಕುತ್ತಿದ್ದಾರೆ ಎಂಬುದನ್ನು ಈ ಅರ್ಜಿಯ ಮೂಲಕ ಸೂಕ್ತವಾಗಿ ಗಮನಿಸಬೇಕಿದೆ”.

ಆದರೆ ಸುಧಾ ಅವರು, “ವಿಚಾರಣಾಧೀನ ಕೈದಿಯಾಗಿರುವ ತಮ್ಮ ಬಗ್ಗೆ ಮುಗ್ಧೆ ಎಂಬ ಭಾವನೆ ಇದೆ. ಸಾಕ್ಷಿಗಳಿಗೆ ತೊಂದರೆ ಉಂಟುಮಾಡಬಹುದು ಎಂಬ ಎನ್‌ಐಎ ಹೇಳಿಕೆಗೆ ಆಧಾರಗಳಿಲ್ಲ. ಕಾನೂನು ವಾದದ ಸೋಗಿನಲ್ಲಿರುವ ಗಾಳಿಮಾತು ಮತ್ತು ಅಪಪ್ರಚಾರದ ವೇದಿಕೆಯಾಗಿ ನ್ಯಾಯಾಲಯ ಸೀಮಿತಗೊಳ್ಳಬಾರದು. ತನ್ನ ವಿರುದ್ಧ ಆರೋಪ ಹೊರಿಸಲಾದ ಮಾತ್ರಕ್ಕೆ ಮಾನಹಾನಿಕರ ಮತ್ತು ಘೋರ ಆರೋಪ ಮಾಡಲು ನ್ಯಾಯಾಲಯ ಅನುಮತಿ ನೀಡಬಾರದು” ಎಂದು ಮನವಿ ಮಾಡಿದ್ದಾರೆ

ಇದಕ್ಕೂ ಮುನ್ನ ನ್ಯಾಯಾಲಯ, ಸುಧಾ ಅವರ ವಿರುದ್ಧ ಸಾಕ್ಷಿಗಳು ನೀಡಿರುವ ಅಪರಿಷ್ಕೃತ ಹೇಳಿಕೆಗಳ ಪ್ರತಿಯನ್ನು ಒದಗಿಸುವಂತೆ ಎನ್‌ಐಎಗೆ ಸೂಚಿಸಿತು.