ಹೋರಾಟಗಾರ ವರವರ ರಾವ್‌ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಆದೇಶ

ಸಾಮಾಜಿಕ ಹೋರಾಟಗಾರ ವರವರ ರಾವ್ ಅವರ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುವಂತೆ ಸೂಚಿಸಿರುವ ಬಾಂಬೆ ಹೈಕೋರ್ಟ್, ತನ್ನ ಗಮನಕ್ಕೆ ತಾರದೆ 82 ವರ್ಷದ ರಾವ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತಿಲ್ಲ ಎಂದಿದೆ.
ಹೋರಾಟಗಾರ ವರವರ ರಾವ್‌ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಆದೇಶ

ಭೀಮಾ ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕವಿ- ಸಾಮಾಜಿಕ ಹೋರಾಟಗಾರ ಡಾ. ವರವರ ರಾವ್‌ ಅವರದ್ದು ವಿಶೇಷ ಪ್ರಕರಣ ಎಂದು ಭಾವಿಸಿ ಅವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ 15 ದಿನಗಳ ಕಾಲ ದಾಖಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಹಾಗೂ ಮಾಧವ್‌ ಜಾಮದಾರ್‌ ಅವರಿದ್ದ ಪೀಠವು ರಾವ್‌ ಅವರ ಪತ್ನಿ ಪೆಂಡ್ಯಾಲ ಹೇಮಲತಾ ಅವರು ವೈದ್ಯಕೀಯ ನೆರವಿನ ಆಧಾರದಲ್ಲಿ ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು.

ರಾವ್‌ ಅವರ ಆರೋಗ್ಯ ವೆಚ್ಚವನ್ನು ರಾಜ್ಯ ಸರ್ಕಾರಕ್ಕೆ ಭರಿಸಲು ಸೂಚಿಸಿರುವ ನ್ಯಾಯಾಲಯವು ತನ್ನ ಗಮನಕ್ಕೆ ತಾರದೆ 82 ವರ್ಷದ ರಾವ್‌ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತಿಲ್ಲ. ನಿಯಮಾವಳಿಗಳ ಅನುಸಾರ ರಾವ್‌ ಅವರನ್ನು ಅವರ ಕುಟುಂಬ ಸದಸ್ಯರು ಚಿಕಿತ್ಸೆಯ ವೇಳೆ ಭೇಟಿ ಮಾಡಬಹುದು ಎಂದು ಹೇಳಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಜೆ ಜೆ ಆಸ್ಪತ್ರೆಯಲ್ಲಿ ರಾವ್‌ ಅವರು ತಲೆಗೆ ಗಾಯ ಮಾಡಿಕೊಂಡಿದ್ದರು ಎಂದು ಪೀಠದ ಗಮನಸೆಳೆದರು. “ಅವರು (ವರವರ ರಾವ್)‌ ಹಾಸಿಗೆ ಹಿಡಿದಿದ್ದಾರೆ. ಅವರನ್ನು ನೋಡಿಕೊಳ್ಳಲು ಶುಷ್ರೂಷಕರು ಇಲ್ಲ. ರಾವ್‌ ಸಣ್ಣ ಟವೆಲ್‌ ಸುತ್ತಿಕೊಂಡಿದ್ದು, ಮೂತ್ರ ವಿಸರ್ಜನೆಗೆ ಸಂಬಂಧಿಸಿದ ರೋಗಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸಾಧನ ಅಳವಡಿಸಲಾಗಿದೆ. ಇದನ್ನು ಮೂರು ತಿಂಗಳಿಂದ ಬದಲಿಸಲಾಗಿಲ್ಲ. ಅದನ್ನು ಬದಲಾಯಿಸಲು ಯಾರೂ ಇಲ್ಲ” ಎಂದು ಪೀಠದ ಗಮನಕ್ಕೆ ತಂದರು.

“ನ್ಯಾಯದಾನದಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಆರೋಪಿಯನ್ನು ವಶಕ್ಕೆ ಪಡೆಯಲಾಗುತ್ತದೆ. ಆದರೆ, ಆರೋಪಿಯು (ವರವರ ರಾವ್) ಜೈಲಿನಲ್ಲಿ ಹಾಸಿಗೆ ಹಿಡಿದಿದ್ದಾರೆ. ಪ್ರಯೋಗಾಲಯವೇ ಇಲ್ಲದ ಆಸ್ಪತ್ರೆಯಲ್ಲಿ ಅವರ ಮೇಲೆ ತಜ್ಞರು ನಿಗಾ ಇಡುವುದು ಹೇಗೆ? ತಜ್ಞರ ಬಗ್ಗೆ ಮಾತನಾಡದಿರುವುದೇ ಒಳಿತು!”
ಇಂದಿರಾ ಜೈಸಿಂಗ್‌, ರಾವ್‌ ಪರ ವಕೀಲೆ
Also Read
ವೈದ್ಯಕೀಯ ನೆರವು ನೀಡಲು ಸರ್ಕಾರ ವಿಫಲ: ವರವರ ರಾವ್‌ ಬಿಡುಗಡೆಗಾಗಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ

“ರಾವ್‌ ಅವರ ಮೆದುಳಿನ ಕ್ಷಮತೆ ಕ್ಷೀಣಿಸಿದೆ. ಮೂತ್ರಪಿಂಡಗಳು ವಿಫಲವಾಗಿವೆ. ನಾನು ಇನ್ನೇನು ವಿವರಿಸಬೇಕು? ನಮ್ಮ ಬಳಿ ನಿಮಗೆ ತೋರಿಸಲು ಕ್ಲಿನಿಕಲ್‌ ವರದಿಗಳು ಇಲ್ಲ ಮೈಲಾರ್ಡ್‌… ನನ್ನ ಬಳಿ ಇರುವ ವರದಿಗಳನ್ನು ಆಧರಿಸಿ ಅವರ ಮೂತ್ರ ಪಿಂಡ ಹಾಗೂ ಯಕೃತ್‌ ವಿಫಲವಾಗಿವೆ. ಮೆದುಳಿನ ಕ್ಷಮತೆ ಕ್ಷೀಣಿಸಿದೆ ಎಂದು ಹೇಳಬಲ್ಲೆ. ಅವರಿಗೆ ನಿಲ್ಲಲೂ ಸಾಧ್ಯವಾಗುತ್ತಿಲ್ಲ” ಎಂದು ಪೀಠಕ್ಕೆ ಜೈಸಿಂಗ್‌ ವಿವರಿಸಿದರು.

ಒಂದು ಪುಟದ ರಾವ್‌ ಅವರ ವೈದ್ಯಕೀಯ ವರದಿಯನ್ನು ಕಣ್ಣೊರೆಸುವ ತಂತ್ರ ಎಂದು ಜೈಸಿಂಗ್‌ ನಿನ್ನೆ ಹೇಳಿದ್ದರು. ತಲೋಜಾ ಜೈಲು ಅಧಿಕಾರಿಗಳನ್ನು ಸರ್ಕಾರಿ ಅಭಿಯೋಜಕ ದೀಪಕ್‌ ಠಾಕ್ರೆ ಪ್ರತಿನಿಧಿಸಿದ್ದರು. ರಾಷ್ಟ್ರೀಯ ತನಿಖಾ ದಳದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ವಾದಿಸಿದರು.

Related Stories

No stories found.
Kannada Bar & Bench
kannada.barandbench.com