ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಜಾತಿ ಹಿಂಸಾಚಾರ ಪ್ರಕರಣದಲ್ಲಿ ವಕೀಲೆ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಡಿಫಾಲ್ಟ್ ಜಾಮೀನು ನೀಡಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿಯ ತುರ್ತು ವಿಚಾರಣೆ ನಡೆಸುವಂತೆ ಎನ್‌ಐಎ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ ಎನ್‌ಐಎ ಪರ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾಮೀನು ಆದೇಶ ಡಿಸೆಂಬರ್ 8 ರಿಂದ ಜಾರಿಗೆ ಬರಲಿದ್ದು ಅದಕ್ಕೂ ಮೊದಲು ಮೇಲ್ಮನವಿಯ ವಿಚಾರಣೆ ನಡೆಸಬೇಕು ಎಂದರು. ಎಸ್‌ಜಿ ಅವರ ಮನವಿಯನ್ನು ಪರಿಶೀಲಿಸುವುದಾಗಿ ಸಿಜೆಐ ಹೇಳಿದರು.
ಸುಧಾ ಅವರಿಗೆ ಡಿಫಾಲ್ಟ್ ಜಾಮೀನು ಪಡೆಯಲು ಬಾಂಬೆ ಹೈಕೋರ್ಟ್ ಡಿಸೆಂಬರ್ 1 ರಂದು ಅನುಮತಿಸಿತ್ತು. ತನಿಖೆಯ ಗಡುವು ವಿಸ್ತರಿಸಿದ್ದು ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಸೆಕ್ಷನ್ 43 ಡಿ (2) ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 167 (2) ರ ನಿಬಂಧನೆಗಳ ಅಡಿ ಅವರನ್ನು ವಶಕ್ಕೆ ನೀಡುವಂತೆ ಸೂಚಿಸಿರುವುದು ತೀರ್ಪು ನೀಡಿದ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು.