ಸುಧಾ ಭಾರದ್ವಾಜ್
ಸುಧಾ ಭಾರದ್ವಾಜ್  
ಸುದ್ದಿಗಳು

ಸುಧಾ ಭಾರದ್ವಾಜ್ ಪ್ರಕರಣ ಊರ್ಜಿತ ಯೋಗ್ಯ, ಸಾಮಾನ್ಯ ಜಾಮೀನಿಗೆ ಏಕೆ ಅರ್ಜಿ ಸಲ್ಲಿಸಬಾರದು ಎಂದು ಕೇಳಿದ 'ಸುಪ್ರೀಂ'

Bar & Bench

ಕೋವಿಡ್-19 ಹಿನ್ನೆಲೆಯಲ್ಲಿ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್ ಅವರು ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ. ಅಲ್ಲದೆ ಸುಧಾ ಅವರು ಮಧ್ಯಂತರ ಜಾಮೀನು ಅರ್ಜಿಯನ್ನು ಹಿಂಪಡೆದ ಕಾರಣ ಅದನ್ನು ವಿಲೇವಾರಿ ಮಾಡಿದೆ.

ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಜಯ್ ರಸ್ತೋಗಿ ಅವರಿದ್ದ ಪೀಠ, ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ಪಡೆಯುವ ಭಾರದ್ವಾಜ್ ಅವರ ಯತ್ನವನ್ನು ಪುರಸ್ಕರಿಸಲಿಲ್ಲ.

ಭಾರದ್ವಾಜ್ ಪರವಾಗಿ ಹಾಜರಾದ ವಕೀಲೆ ವೃಂದಾ ಗ್ರೋವರ್ ‘ತಮ್ಮ ಕಕ್ಷೀದಾರರು ಮಧುಮೇಹದಿಂದ ಬಳಲುತ್ತಿದ್ದಾರೆ ಅಲ್ಲದೆ ಅವರಿಗೆ ಬೇರೆ ಬೇರೆ ಕಾಯಿಲೆಗಳಿವೆ ಎಂಬ ಕಾರಣಕ್ಕೆ ಮಧ್ಯಂತರ ಜಾಮೀನು ಕೋರಿದರು. ಎರಡು ವರ್ಷ ಸೆರೆವಾಸ ಅನುಭವಿಸಿರುವ ಸುಧಾ, ಸಂಧೀವಾತ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ’ ಎಂದರು.

ಭಾರದ್ವಾಜ್ ವಿರುದ್ಧದ ಪ್ರಕರಣದ ಕುರಿತು ಕೋರ್ಟ್ ವಿವರ ಕೇಳಿತು. ಆಗ ಗ್ರೋವರ್, ‘ತಮ್ಮ ವಿರುದ್ಧ ನಡೆದಿರುವ ವ್ಯವಸ್ಥಿತ ಕ್ರಿಮಿನಲ್ ಪಿತೂರಿಯನ್ನು ಅವರು ಬಹಿರಂಗಪಡಿಸಬೇಕಿದೆ. ಬಿಲಾಸ್ಪುರ್ ಛತ್ತೀಸ್‌ಗಡ ಹೈಕೋರ್ಟಿನಲ್ಲಿ ಆಕೆ ವಕೀಲೆಯಾಗಿ ಕೆಲಸ ಮಾಡುತ್ತಿದ್ದರು. ಆಕೆಯಿಂದ ಯಾವುದೇ ವಸ್ತು ವಶಪಡಿಸಿಕೊಳ್ಳದ ಕಾರಣ ಇದು ಯಾರೊಬ್ಬರ ಪ್ರಕರಣವೂ ಅಲ್ಲ’ ಎಂದು ಮನವರಿಕೆ ಮಾಡಿಕೊಟ್ಟರು.

"ಸಾಮಾನ್ಯ ಜಾಮೀನು ಅರ್ಜಿ ಏಕೆ ಸಲ್ಲಿಸಿಲ್ಲ ಎಂಬ ನ್ಯಾ. ಲಲಿತ್ ಅವರ ಪ್ರಶ್ನೆಗೆ, ‘ಈ ಅರ್ಜಿ ಕುರಿತ ವಿಚಾರಣೆ ಹೈಕೋರ್ಟಿನಲ್ಲಿ ಬಾಕಿ ಇದೆ’ ಎಂದು ಗ್ರೋವರ್ ಉತ್ತರಿಸಿದರು. ಜೊತೆಗೆ ವೈದ್ಯಕೀಯ ‘ಪರೀಕ್ಷೆಗೆ ನಿಮ್ಮನ್ನು ಕೋರುತ್ತಿದ್ದೇನೆ ಜೈಲು ಆಸ್ಪತ್ರೆಗಳಲ್ಲಿ ಈ ಪರೀಕ್ಷೆಗಳನ್ನು ಮಾಡಲಾಗುವುದಿಲ್ಲ."ಎಂದರು.

ಈಗಾಗಲೇ ಜೈಲಿನಲ್ಲಿ ನೀಡಲಾದ ಪರೀಕ್ಷಾ ವರದಿಗಳು ಸುಳ್ಳು ಎಂದು ನೀವು ಹೇಳುತ್ತಿರುವಿರೇ? ನಿಮ್ಮದು ಊರ್ಜಿತ ಯೋಗ್ಯ ಪ್ರಕರಣವಾಗಿದ್ದು ಸಾಮಾನ್ಯ ಜಾಮೀನು ಅರ್ಜಿ ಏಕೆ ಸಲ್ಲಿಸಬಾರದು ಎಂದು ನ್ಯಾ. ರಸ್ತೋಗಿ ತಿಳಿಸಿದರು.

ಸುಧಾ ಭಾರದ್ವಾಜ್ ಅವರ ಸ್ಥಿತಿ ಬಗ್ಗೆ ಆಳವಾದ ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್ ಅರ್ಜಿಯನ್ನು ಹಿಂಪಡೆದ ಕಾರಣ ವಿಲೇವಾರಿ ಮಾಡಿತು.

58 ವರ್ಷದ ಸುಧಾ ಭಾರದ್ವಾಜ್ 2018ರಿಂದ ಮುಂಬೈನ ಬೈಕುಲಾ ಮಹಿಳಾ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಸುಧಾ ಅವರು ಮಧ್ಯಂತರ ಜಾಮೀನಿಗೆ ತಕ್ಕುದಾದ ಯಾವುದೇ ಅಂಶಗಳನ್ನು ಮುಂದುಮಾಡಿಲ್ಲದ ಕಾರಣವಾಗಿ ಹೈಕೋರ್ಟ್ ಅದನ್ನು ತಿರಸ್ಕರಿಸಿತ್ತು. ಅಲ್ಲದೆ, ರಾಷ್ಟ್ರೀಯ ತನಿಖಾ ದಳ (ಎನ್ಐಎ), ಮಹಾರಾಷ್ಟ್ರ ಸರ್ಕಾರ ಮತ್ತು ಜೈಲು ಅಧಿಕಾರಿಗಳು ಕೋವಿಡ್-19 ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿತ್ತು.