Sudhir Chaudhary, Aj tak and Karnataka HC 
ಸುದ್ದಿಗಳು

ಸುಳ್ಳು ಸುದ್ದಿ ಪ್ರಕರಣ: ಸುಧೀರ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ; ಅ.3ಕ್ಕೆ ವಿಚಾರಣೆ

ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಕ್ಟೋಬರ್‌ 3ರಂದು ಸಂಜೆ 4 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ ನ್ಯಾಯಾಲಯ.

Bar & Bench

ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಕೋಮು ಗಲಭೆ ನಡೆಸಲು ಪ್ರಚೋದನೆ ನೀಡಿದ ಆರೋಪ ಸಂಬಂಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆಜ್‌ತಕ್‌ ವಾಹಿನಿ ಮತ್ತು ಅದರ ಪ್ರಧಾನ ಸಂಪಾದಕ ಸುಧೀರ್‌ ಚೌಧರಿ ವಿರುದ್ಧ ಅಕ್ಟೋಬರ್‌ 3ರವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ನಗರದ ಶೇಷಾದ್ರಿಪುರಂ ಠಾಣಾ ಪೊಲೀಸರಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಸುಧೀರ್‌ ಚೌಧರಿ ಮತ್ತು ಆಜ್‌ತಕ್‌ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಕ್ಟೋಬರ್‌ 3ರಂದು ಸಂಜೆ 4 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದ್ದು, ಸೆಪ್ಟೆಂಬರ್‌ 15ರಂದು ನ್ಯಾಯಾಲಯ ನೀಡಿರುವ ನಿರ್ದೇಶನದಂತೆ ಅರ್ಜಿಯ ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಮತ್ತು ದುರುದ್ದೇಶಪೂರಿತ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕಳೆದ ಸೆಪ್ಟೆಂಬರ್‌ 11ರಂದು ರಾತ್ರಿ 9.55ರ ವೇಳೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯಾದ ಆಜ್ ತಕ್‌ನಲ್ಲಿ ಪ್ರಸಾರವಾದ ಸುದ್ದಿಯಲ್ಲಿ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಅವರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯ ಪ್ರಯೋಜನವನ್ನು ಕೇವಲ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆ ನೀಡುತ್ತಿಲ್ಲ. ಆ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲದ ಬಡ ಹಿಂದೂಗಳಿಗೆ ಅನ್ಯಾಯವಾಗಿರುತ್ತದೆ ಎಂದು ಹೇಳಿದ್ದರು.

ಇದರಿಂದ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಮತ್ತು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಆಡಳಿತಾಧಿಕಾರಿ ಎಸ್ ಶಿವಕುಮಾರ್‌ ಅವರು ಬೆಂಗಳೂರಿನ ಶೇಷಾದ್ರಿಪುರಂ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ ಪೊಲೀಸರು, ಆಜ್ ತಕ್ ಸುದ್ದಿ ವಾಹಿನಿ ಮತ್ತು ವಾಹಿನಿಯ ಸಂಘಟಕರ ವಿರುದ್ಧ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.