ಸುದ್ದಿಗಳು

ಶೂ ಹಾಕಲು ಬಿಡಲಿಲ್ಲ, ಅಧಿಕಾರಿಯ ಬೂಟಿನಿಂದ ಪೆಟ್ಟು ತಿಂದೆ, ಕುಡಿಯುವ ನೀರಿಗೂ ನಿರ್ಬಂಧ: ಅರ್ನಾಬ್ ಅಳಲು

Bar & Bench

ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಮತ್ತು ಅವರ ತಾಯಿ ಕುಮುದಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಮಹಾರಾಷ್ಟ್ರದ ರಾಯಗಢ ಪೊಲೀಸರ ವಶದಲ್ಲಿರುವ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರು ಪೊಲೀಸರು ತಮ್ಮನ್ನು ಅಕ್ರಮವಾಗಿ ಬಂಧಿಸಿ ವಶದಲ್ಲಿಟ್ಟುಕೊಂಡಿದ್ದು, ಬಂಧನದ ವೇಳೆ ಹಾಗೂ ಆನಂತರ ಮಹಾರಾಷ್ಟ್ರ ಪೊಲೀಸರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಹಾಗೂ ತಮ್ಮ ಬಂಧನ ಪ್ರಶ್ನಿಸಿ ಹೇಬಿಯಸ್‌ ಕಾರ್ಪಸ್‌ ರಿಟ್‌ ಅರ್ಜಿಯನ್ನು ಅರ್ನಾಬ್ ದಾಖಲಿಸಿದ್ದಾರೆ.

“ಅರ್ಜಿದಾರರನ್ನು ಬಂಧಿಸುವ ಸಂದರ್ಭದಲ್ಲಿ ಮತ್ತು ಅವರನ್ನು ಅಲಿಬಾಗ್‌ಗೆ ಪೊಲೀಸ್‌ ವಾಹನದಲ್ಲಿ ಕರೆದೊಯ್ಯುವಾಗ ಮತ್ತು ಪೊಲೀಸ್‌ ವಶದಲ್ಲಿದ್ದಾಗ ಅವರ ಎಡಗೈಗೆ ಆರು ಇಂಚು ಸೀಳಿದ ಗಾಯವಾಗಿದೆ. ದಡೂತಿ ಪೊಲೀಸ್‌ ಅಧಿಕಾರಿಯೊಬ್ಬರ ಬೂಟಿನಿಂದ ಪೆಟ್ಟು ಬಿದ್ದಿದೆ. ಬೆನ್ನುಮೂಳೆಗೆ ಗಂಭೀರವಾದ ಗಾಯವಾಗಿದೆ. ನರಗಳಿಗೂ ಸಹ ಗಾಯವಾಗಿದೆ. ಶೂ ಹಾಕಿಕೊಳ್ಳಲು ಸಹ ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟಿಲ್ಲ. ಕುಡಿಯಲು ನೀರನ್ನೂ ಸಹ ನೀಡಲಾಗಿಲ್ಲ. ಭದ್ರತೆಗೆ ನಿಯೋಜಿಸಿದ್ದ ಪೊಲೀಸ್‌ ಅಧಿಕಾರಿಯು ಬಲವಂತದಿಂದಾಗಿ ನಿರ್ದಿಷ್ಟ ದ್ರವ ಪದಾರ್ಥವನ್ನು ಕುಡಿದ ಪರಿಣಾಮ ಉಸಿರುಗಟ್ಟಿದ್ದಾರೆ” ಎಂದು ತಮ್ಮ ಪರವಾಗಿ ಸಲ್ಲಿಕೆಯಾಗಿರುವ ಜಾಮೀನು ಅರ್ಜಿಯಲ್ಲಿ ಅರ್ನಾಬ್ ವಿವರಿಸಿದ್ದಾರೆ.

“ಅರ್ಜಿದಾರರು 2019ರಲ್ಲೇ ಮಹಾರಾಷ್ಟ್ರ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ದಾಖಲೆಗಳೆಲ್ಲವೂ ಪೊಲೀಸರ ಬಳಿ ಇರುವುದರಿಂದ ಅಕ್ರಮವಾಗಿ ಅರ್ಜಿದಾರರನ್ನು ಪೊಲೀಸರು ತಮ್ಮ ವಶದಲ್ಲಿಟ್ಟುಕೊಳ್ಳುವ ಅಗತ್ಯವಿಲ್ಲ” ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.