[ಬ್ರೇಕಿಂಗ್]‌ ಬಂಧನ ಪ್ರಶ್ನಿಸಿದ್ದ ಅರ್ನಾಬ್‌ ಮನವಿ ಆಧರಿಸಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದ ಬಾಂಬೆ ಹೈಕೋರ್ಟ್

ಪ್ರತಿವಾದಿಗಳ ವಾದವನ್ನು ಆಲಿಸಿದೇ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರಿಗೆ ಮಧ್ಯಂತರ ಪರಿಹಾರ ನೀಡಲಾಗದು ಎಂದು ನ್ಯಾಯಾಲಯವು ಅವರ ಮನವಿಯನ್ನು ನಿರಾಕರಿಸಿದೆ.
Arnab Goswami, Bombay High Court
Arnab Goswami, Bombay High Court

ಒಳಾಂಗಣ ವಿನ್ಯಾಸಕಾರ ಅನ್ವಯ್‌ ನಾಯಕ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರು ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ಣಿಕ್‌ ಅವರಿದ್ದ ವಿಭಾಗೀಯ ಪೀಠವು ಮನವಿಯ ವಿಚಾರಣೆ ನಡೆಸಿತು. 2018ರಲ್ಲಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆ ಒಳಗೊಂಡಂತೆ ಮಧ್ಯಂತರ ಪರಿಹಾರಗಳನ್ನು ನೀಡುವಂತೆ ಅರ್ನಾಬ್‌ ಪರ ಹಿರಿಯ ವಕೀಲ ಆಬಾದ್‌ ಪೊಂಡಾ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸದೇ ಮಧ್ಯಂತರ ಪರಿಹಾರ ನೀಡಲಾಗದು ಎಂದು ಪೀಠ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ಪೊಂಡಾ ಅವರು ತಮ್ಮ ವಾದವನ್ನು ಮಂಡಿಸಲು ಕೇವಲ “ಏಳು ನಿಮಿಷ”ಗಳ ಅವಕಾಶವನ್ನು ಪೀಠುವ ನೀಡಿದರೆ ಯಾಕೆ ಮಧ್ಯಂತರ ಪರಿಹಾರ ನೀಡಬೇಕು ಎಂಬುದನ್ನು ವಿವರಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಾಲಯದ ಆದೇಶ ಪಡೆಯದೇ 2018ರ ಪ್ರಕರಣದ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ವಾದಿಸಿದರು. ಇದಕ್ಕೆ ಪ್ರತಿವಾದಿಗಳನ್ನು ಆಲಿಸಬೇಕಿದೆ ಎಂದು ಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಪೊಂಡಾ ಅವರು “ನ್ಯಾಯಮೂರ್ತಿಗಳು ಇದನ್ನು ನಾಳೆಗೆ ಮುಂದೂಡಬಹುದು.. ಬಂಧನವು (ಅರ್ನಾಬ್‌ರನ್ನು) ಪ್ರತಿದಿನವೂ ಅಕ್ರಮವಾಗುತ್ತದೆ… ಮುಗಿದಿರುವ ಪ್ರಕರಣಕ್ಕೆ ಜೀವ ನೀಡುವ ಕೆಲಸವನ್ನು ದೂರುದಾರರು ಮಾಡುತ್ತಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಸುವುದಾಗಿ ಅಲಿಬಾಗ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೇಳಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದೇನೆ” ಎಂದರು.

“ಹಲವು ದಾವೆದಾರರು ಇದ್ದು, ಪ್ರಕರಣಗಳು ಬಾಕಿ ಇವೆ. ನಾವು ಪ್ರಕರಣದ ವಿಚಾರಣೆಗೆ ಸಿದ್ಧರಿದ್ದೇವೆ. ಆದರೆ, ನಾವು ನೋಟಿಸ್‌ ಜಾರಿಗೊಳಿಸಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರತಿವಾದಿಗಳು ಪ್ರತಿಕ್ರಿಯಿಸುವುದಕ್ಕೆ ಅವಕಾಶ ನೀಡಬೇಕು” ಎಂದು ನ್ಯಾಯಾಲಯ ಹೇಳಿತು.

ಪೊಂಡಾ ಅವರ ವಾದಕ್ಕೆ ಪೂರಕವಾಗಿ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದಿಸಿದರು. “ಮಧ್ಯಂತರ ಪರಿಹಾರವಾಗಿ ಅವರನ್ನು (ಗೋಸ್ವಾಮಿ) ಬಿಡುಗಡೆ ಮಾಡಿದರೆ ದೇವಲೋಕವೇನು ಮಹಾರಾಷ್ಟ್ರದ ಮೇಲೆ ಬೀಳುತ್ತದೆಯೇ?” ಎಂದು ಅವರು ಪ್ರಶ್ನಿಸಿದರು.

ಅರ್ನಾಬ್‌ಗೆ ಪರಿಹಾರ ನೀಡುವುದಕ್ಕೂ ಮುನ್ನ ಮಾಹಿತಿದಾರರಾದ ಅಕ್ಷತಾ ನಾಯಕ್‌ ಅವರನ್ನು ಆಲಿಸುವ ಬಯಕೆಯನ್ನು ನ್ಯಾಯಾಲಯ ವ್ಯಕ್ತಪಡಿಸಿತು. ಅಲ್ಲದೇ, ಮಾಹಿತಿದಾರರನ್ನು ಸೇರಿಸಿ ಮನವಿಯಲ್ಲಿ ತಿದ್ದುಪಡಿ ಮಾಡುವಂತೆ ಪೊಂಡಾ ಅವರಿಗೆ ಪೀಠ ಸೂಚಿಸಿತು. ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್‌ ಜಾರಿಗೊಳಿಸಿರುವ ನ್ಯಾಯಾಲಯವು ತಮ್ಮ ವಾದ ಮಂಡಿಸುವಂತೆ ಸೂಚಿಸಿದ್ದು, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿತು.

ಅಧಿಕಾರಸ್ಥರನ್ನು ಪ್ರಶ್ನಿಸಿ ಸುದ್ದಿ ಮಾಡಿದ್ದಕ್ಕಾಗಿ ಪ್ರತೀಕಾರದ ಕ್ರಮ: ಅರ್ನಾಬ್‌

ಒಳಾಂಗಣ ವಿನ್ಯಾಸಕ ಅನ್ವಯ್‌ ನಾಯಕ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಲಿಬಾಗ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ (ಸಿಆರ್‌ ನಂಬರ್‌ 59 ಆಫ್ 2018) ತುರ್ತಾಗಿ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಅರ್ನಾಬ್‌ ಕೋರಿದ್ದು, ಕೆಳಗಿನ ಮನವಿಗಳನ್ನು ಮಾಡಿಕೊಂಡಿದ್ದಾರೆ.

  1. ನಾಯಕ್‌ ಅವರ ಪ್ರಕರಣಕ್ಕೆ ಬಹುಹಿಂದೆಯೇ ಇತಿಶ್ರೀ ಹಾಡಿದ್ದು, ತಮ್ಮನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಮತ್ತು ತಮ್ಮನ್ನು ಹಿಡಿದಿಟ್ಟುಕೊಂಡಿರುವುದು ಅಕ್ರಮ ಎಂದು ಅಲಿಬಾಗ್‌ ಪೊಲೀಸರಿಗೆ ನಿರ್ದೇಶಿಸುವಂತೆ ಹೇಬಿಯಸ್‌ ಕಾರ್ಪಸ್‌ ರಿಟ್‌ ಸಲ್ಲಿಸಿದ್ದಾರೆ.

  2. 2018ರಲ್ಲಿ ದಾಖಲಿಸಲಾದ ಎಫ್‌ಐಆರ್‌ ವಜಾಗೊಳಿಸಬೇಕು ಎಂದು ಕೋರಿದ್ದಾರೆ.

  3. ಬಂಧನಕ್ಕೆ ಕಾರಣವಾದ ಮೆಮೊ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

  4. ಅಕ್ರಮ ಬಂಧನ ಮತ್ತು ತಪ್ಪಾಗಿ ವಶದಲ್ಲಿಟ್ಟುಕೊಂಡಿರುವುದರಿಂದ ತಮಗೆ ಮುಕ್ತಿ ನೀಡಬೇಕು ಎಂದಿದ್ದಾರೆ.

ಅನ್ವಯ್‌ ನಾಯಕ್‌ ಪತ್ನಿ ಅಕ್ಷತಾ ನಾಯಕ್‌ 2018ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್‌ ಗೋಸ್ವಾಮಿ ಮತ್ತು ಇತರೆ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಆರೋಪಿಗಳೆಲ್ಲರೂ ಕಾನ್‌ಕಾರ್ಡ್‌ ಡಿಸೈನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ (ಸಿಡಿಪಿಎಲ್‌) ನಿರ್ದೇಶಕರಾದ ನಾಯಕ್‌ ಮತ್ತು ಅವರ ತಾಯಿ ಕುಮುದಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದ ಎದುರಿಸುತ್ತಿದ್ದಾರೆ. ಅನ್ವಯ್‌ ನಾಯಕ್‌ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದಿದ್ದ ಪತ್ರದಲ್ಲಿ ಸಿಡಿಪಿಎಲ್‌ಗೆ ಗೋಸ್ವಾಮಿ ಮತ್ತು ರಿಪಬ್ಲಿಕ್‌ ಟಿವಿಯ ಮಾತೃಸಂಸ್ಥೆ ಎಆರ್‌ಜಿ ಔಟ್ಲಯರ್‌ 83 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದೆ ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ.

ಈ ಆರೋಪಕ್ಕೆ ಮನವಿಯಲ್ಲಿ ಪ್ರತಿಕ್ರಿಯಿಸಿರುವ ಅರ್ನಾಬ್‌ ಅವರು ಎಆರ್‌ಜಿ ಹಲವು ಬಾರಿ ಹಣ ಪಾವತಿಸಲು ಪ್ರಯತ್ನಿಸಿದರೂ ಫಲಪ್ರದವಾಗಿಲ್ಲ ಎಂದು ವಿವರಿಸಿದ್ದಾರೆ.

“ಸಿಡಿಪಿಎಲ್‌ಗೆ ಬಾಕಿ ಹಣವನ್ನು ಸಂಪೂರ್ಣವಾಗಿ ಪಾವತಿಸಲು ಎಆರ್‌ಜಿ ಔಟ್ಲಯರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ನಿರಂತರವಾಗಿ ಪ್ರಯತ್ನ ಮಾಡಿದೆ. ಸಿಡಿಪಿಎಲ್‌ನಲ್ಲಿ ಷೇರುದಾರರು ಅಥವಾ ನಿರ್ದೇಶಕರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಬಾಕಿ ಹಣವನ್ನು ಪಾವತಿಸುವ ಪ್ರಯತ್ನ ಈಡೇರಲಿಲ್ಲ. ಅಕ್ಷತಾ ಮತ್ತು ಅದ್ನ್ಯಾ ನಾಯಕ್‌ ಅವರಿಗೆ ಅಂತಿಮವಾಗಿ ಎಲ್ಲಾ ಬಾಕಿ ಹಣ ಪಾವತಿಸುವ ಕುರಿತು ಎಆರ್‌ಜಿ ಔಟ್ಲಯರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ನಿರಂತರವಾಗಿ ಹಲವು ಸಭೆ ನಡೆಸಲಾಗಿದ್ದು, ಈಮೇಲ್‌, ಪತ್ರ ಮತ್ತು ವಾಟ್ಸ್‌ ಅಪ್‌ ಸಂದೇಶಗಳನ್ನು ಕಳುಹಿಸಿದ್ದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 2019ರ ಜುಲೈನಲ್ಲಿ ಸಿಡಿಪಿಎಲ್‌ ಬ್ಯಾಂಕ್‌ ಖಾತೆಗೆ ಸಂಪೂರ್ಣವಾಗಿ ಬಾಕಿ ಹಣವನ್ನು ವರ್ಗಾಯಿಸಲಾಗಿತ್ತು. ಸಿಡಿಪಿಎಲ್‌ ಖಾತೆ ನಿಷ್ಕ್ರಿಯವಾಗಿದ್ದರಿಂದ ಆ ಹಣ ವಾಪಸಾಗಿತ್ತು.”

“ಆತ್ಮಹತ್ಯೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಯು ನೇರವಾಗಿ ಭಾಗಿಯಾಗುವುದು ಅಗತ್ಯವಾಗಿದೆ. ಹಾಗಿದ್ದರೆ ಮಾತ್ರ ಅವರಿಗೆ ಸೆಕ್ಷನ್‌ 306 ಅನ್ವಯಿಸುತ್ತದೆ. ಸದರಿ ಪ್ರಕರಣದಲ್ಲಿ ಅರ್ಜಿದಾರರು ನೇರವಾಗಿ ಯಾವುದರಲ್ಲೂ ಭಾಗಿಯಾಗಿಲ್ಲ. ಮರಣಕ್ಕೂ ಮುನ್ನ ಪತ್ರದಲ್ಲಿ ವ್ಯಕ್ತಿಯೊಬ್ಬರ ಹೆಸರು ಉಲ್ಲೇಖಿಸದ ಮಾತ್ರಕ್ಕೆ ಅವರು ಐಪಿಸಿಯ ಸೆಕ್ಷನ್‌ 306ರ ಅಡಿ ಅಪರಾಧಿ ಎಂಬ ನಿಲುವು ಕೈಗೊಳ್ಳಲಾಗದು” ಎಂದು ಹೇಳಿದ್ದಾರೆ.

“ಮಹಾರಾಷ್ಟ್ರದಲ್ಲಿರುವ ರಾಜಕೀಯ ಪಕ್ಷದ ಪ್ರತೀಕಾರ ಮತ್ತು ವೈಯಕ್ತಿಕ ದ್ವೇಷ ಮತ್ತು ಅನ್ವಯ್‌ ನಾಯಕ್‌ ಅವರ ಪತ್ನಿ ಬಿಡುಗಡೆ ಮಾಡಿರುವ ವಿಡಿಯೋವನ್ನು ರಾಜ್ಯ ಸರ್ಕಾರದ ಸಾಮಾಜಿಕ ಮಾಧ್ಯಮಗಳಿಂದ ವ್ಯವಸ್ಥಿತವಾಗಿ ಪ್ರಸಾರ ಮಾಡಿರುವುದರ ಆಧಾರದಲ್ಲಿ ಮುಂಬೈ ಪೊಲೀಸರು ತನಿಖೆಯನ್ನು ಪುನಾರಂಭಿಸಿದ್ದಾರೆ” ಎಂದು ಗೋಸ್ವಾಮಿ ಹೇಳಿದ್ದಾರೆ.

ಗೋಸ್ವಾಮಿ ಅವರ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ ಬಳಿಕ ರಾಜ್ಯ ಸರ್ಕಾರವು ದ್ವೇಷ ಕ್ರಮ ಅನುಸರಿಸುವುದು ಸಾಮಾನ್ಯ ಎನ್ನುವಂತಾಗಿದೆ. “ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಸದನಕ್ಕೆ ಗೃಹ ಸಚಿವರು ಅಭಯ ನೀಡುವುದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ” ಎಂದು ಹೇಳಲಾಗಿದೆ.

Also Read
ಅರ್ನಾಬ್‌ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ: ಅಲಿಬಾಗ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶ

ಬಂಧನದ ವೇಳೆ ತಮ್ಮ ಕುಟುಂಬದ ಸದಸ್ಯರ ಮೇಲೆ ಮುಂಬೈ ಪೊಲೀಸರು ಬಲ ಪ್ರಯೋಗ ಮಾಡಿದ್ದಾರೆ. ಇದು ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

“ಈ ಸಂದರ್ಭದಲ್ಲಿ ಐಪಿಸಿ ಸೆಕ್ಷನ್‌ 306ರ ಅಡಿ ಪ್ರಕರಣಕ್ಕೆ ಪೂರಕವಾದ ವಸ್ತುಗಳು ಅಥವಾ ಸಾಕ್ಷ್ಯ ಇಲ್ಲದಿರುವಾಗ ಮನವಿದಾರರನ್ನು ಬಂಧಿಸಿರುವುದು, ಅರ್ಜಿದಾರರಿಗೆ ಇರುವ ಪ್ರತಿಷ್ಠೆ ಮತ್ತು ಅವರ ಘನತೆಗೆ ಕುಂದುಂಟು ಮಾಡಿ ಅವರನ್ನುಅವಮಾನಿಸುವ ಪ್ರಯತ್ನವಾಗಿದೆ” ಎಂದು ಅವರು ಹೇಳಿದ್ದಾರೆ.

ತನಿಖೆಯ ಸಂದರ್ಭದಲ್ಲಿ ಪೊಲೀಸರಿಗೆ ಸಹಕಾರ ನೀಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಅರ್ನಾಬ್‌ ಅವರು ಸಾರ್ವಜನಿಕ ವ್ಯಕ್ತಿಯಾಗಿ ನ್ಯಾಯದಾನದಿಂದ ಓಡಿಹೋಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಹಿರಿಯ ವಕೀಲರಾದ ಮಹೇಶ್‌ ಜೇಠ್ಮಲಾನಿ ಹಾಗೂ ಫೀನಿಕ್ಸ್‌ ಲೀಗಲ್‌ನ ವಕೀಲ ರವಿ ಶರ್ಮಾ ಮತ್ತು ಗುಂಜನ್‌ ಮಂಗ್ಲಾ ಅವರು ಅರ್ನಾಬ್‌ ಅವರನ್ನು ಪ್ರತಿನಿಧಿಸಲಿದ್ದಾರೆ.

Related Stories

No stories found.
Kannada Bar & Bench
kannada.barandbench.com