P chidambaram and karti 
ಸುದ್ದಿಗಳು

ಐಎನ್‌ಕ್ಸ್‌ ಮೀಡಿಯಾ ಪ್ರಕರಣ: ಕಾಂಗ್ರೆಸ್‌ ಹಿರಿಯ ನಾಯಕ ಚಿದಂಬರಂ, ಪುತ್ರ ಕಾರ್ತಿಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್‌

ಏಪ್ರಿಲ್‌ 7ರಂದು ನಿಗದಿಯಾಗಿರುವ ವಿಚಾರಣೆಗೆ ಹಾಜರಾಗುವ ಸಂಬಂಧ ವಿಶೇಷ ಸಿಬಿಐ ನ್ಯಾಯಾಧೀಶ ಎನ್‌ ಕೆ ನಾಗಪಾಲ್‌ ಅವರು ಎಲ್ಲಾ ಆರೋಪಿಗಳಿಗೂ ನೋಟಿಸ್‌ ಜಾರಿ ಮಾಡಿದ್ದಾರೆ.

Bar & Bench

ಐಎನ್‌ಕ್ಸ್‌ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ಇತರರ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯನ್ನು ಪರಿಗಣಿಸಿದ್ದು ಪ್ರಕರಣದ ಎಲ್ಲ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿದೆ (ಇ.ಡಿ ವರ್ಸಸ್‌ ಪಿ ಚಿದಂಬರಂ ಮತ್ತು ಇತರರು).

ಪ್ರಕರಣದ ಸಂಬಂಧ ಏಪ್ರಿಲ್‌ 7ರಂದು ನಿಗದಿಯಾಗಿರುವ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಶೇಷ ಸಿಬಿಐ ನ್ಯಾಯಾಧೀಶ ಎನ್‌ ಕೆ ನಾಗಪಾಲ್‌ ಅವರು ಎಲ್ಲಾ ಆರೋಪಿಗಳಿಗೂ ಖುದ್ದು ಹಾಜರಾಗಲು ಸೂಚಿಸಿ ಸಮನ್ಸ್‌ ಜಾರಿ ಮಾಡಿದ್ದು, “ದೂರಿನಲ್ಲಿ ಹೆಸರಿಸಲಾಗಿರುವ ಎಲ್ಲಾ ಹತ್ತು ಮಂದಿ ಆರೋಪಿಗಳ ವಿರುದ್ಧ ಈ ವಿಷಯದಲ್ಲಿ ಮುಂದುವರೆಯಲು ಸಾಕಷ್ಟು ಸಾಮಗ್ರಿಗಳು ಮತ್ತು ಆಧಾರಗಳನ್ನು ನಾನು ಗಮನಿಸಿದ್ದು, ಅದರಲ್ಲಿ ಆರು ಆರೋಪಿಗಳು ಕಂಪೆನಿಗಳಾಗಿದ್ದು, ಪಿಎಂಎಲ್‌ಎ ಸೆಕ್ಷನ್ 70 ಜೊತೆಗೂಡಿ ಸೆಕ್ಷನ್ 3 ರ ಅಡಿಯಲ್ಲಿ ಅಪರಾಧ ಎಸಗಿದ್ದು ಮೇಲೆ ಹೇಳಲಾದ ಕಾಯಿದೆಯ ಸೆಕ್ಷನ್‌ 4ರ ಅಡಿ ಇದು ಶಿಕ್ಷಾರ್ಹವಾಗಿದೆ” ಎಂದು ಹೇಳಿದ್ದಾರೆ.

“…ಪ್ರಕರಣದ ದೂರುದಾರರ ಮೂಲಕ ಎಲ್ಲಾ ಆರೋಪಿಗಳಿಗೆ 07.04.2021ರಂದು ಹಾಜರಾಗಲು ಸೂಚಿಸಿ ನಿಗದಿತ ಎಲ್ಲ ಮಾರ್ಗಗಳಡಿ ಸಮನ್ಸ್ ನೀಡಬೇಕು” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಾರ್ತಿ ಅವರ ಲೆಕ್ಕಪತ್ರ ಪರಿಶೋಧಕ ಎಸ್‌ ಭಾಸ್ಕರ ರಾಮನ್‌ ಮತ್ತು ಪೀಟರ್‌ ಮುಖೇರ್ಜಿಯಾ ಅವರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ಐಎನ್‌ಎಕ್ಸ್‌ ಮೀಡಿಯಾ ಪ್ರೈ. ಲಿಮಿಟೆಡ್‌, ಅಡ್ವಾಂಟೇಜ್‌ ಸ್ಟ್ರಾಜಿಕ್‌ ಕಂಪೆನೀಸ್‌, ಕ್ರಿಯಾ ಎಫ್‌ಎಂಸಿಜಿ ಡಿಸ್ಟ್ರಿಬ್ಯೂಟರ್ಸ್‌ ಪ್ರೈ. ಲಿ. ನಾರ್ಥ್‌ ಸ್ಟಾರ್‌ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಸಂಸ್ಥೆಗಳನ್ನೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪೀಟರ್‌ ಮುಖೇರ್ಜಿಯಾ ಪತ್ನಿ ಇಂದ್ರಾಣಿ ಮುಖೇರ್ಜಿಯಾ ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿದ್ದಾರೆ.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣವು ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಲ್ಲಿನ (ಎಫ್‌ಐಪಿಬಿ) ಅಕ್ರಮಕ್ಕೆ ಸಂಬಂಧಿಸಿದ್ದಾಗಿದ್ದು, ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ ಮೀಡಿಯಾಕ್ಕೆ ಅನುಮತಿ ನೀಡುವಾಗಿನ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಐಎನ್‌ಎಕ್ಸ್‌ ಮೀಡಿಯಾ ಪ್ರವರ್ತಕರಾದ ಪೀಟರ್‌ ಮತ್ತು ಇಂದ್ರಾಣಿ ಅವರಿಂದ ಅನುಮತಿಗಾಗಿ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಲಂಚ ಪಡೆದಿದ್ದಾರೆ ಎಂಬುದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ದೂರಾಗಿದೆ.

ದೆಹಲಿ ನ್ಯಾಯಾಲಯವು ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದ ಮಾರನೆಯ ದಿನ ಆಗಸ್ಟ್‌ 21, 2019ರಂದು ಪಿ ಚಿದಂಬರಂ ಅವರು ಸಿಬಿಐನಿಂದ ಬಂಧಿಸಲ್ಪಟ್ಟಿದ್ದರು. ಮೇಲ್ನೋಟಕ್ಕೆ ಆರೋಪಗಳು ಗಂಭೀರ ಸ್ವರೂಪದಲ್ಲಿದ್ದು, ಪಿ ಚಿದಂಬರಂ ಅವರು ಪ್ರಮುಖ ಮತ್ತು ಸಕ್ರಿಯ ಪಾತ್ರ ಹೊಂದಿದ್ದರು ಎಂದು ನ್ಯಾಯಾಲಯ ಹೇಳಿತ್ತು.

ಎರಡು ತಿಂಗಳ ಬಳಿಕ ಚಿದಂಬರಂ ಅವರಿಗೆ ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್‌ 4, 2019 ರಲ್ಲಿ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಅವರು ತಿಹಾರ್‌ ಜೈಲಿನಿಂದ ಬಿಡುಗಡೆ ಹೊಂದಿದ್ದರು. 2018ರ ಮಾರ್ಚ್‌ನಲ್ಲಿ ಇದೇ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು.