ramesh sogemane
ramesh sogemane
ಸುದ್ದಿಗಳು

ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಕರ್ತ ಓಂಕಾರೇಶ್ವರ್ ಠಾಕೂರ್‌ಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ ಹೇಳಿದ್ದೇನು?

Bar & Bench

ಸುಲ್ಲಿ ಡೀಲ್ಸ್ ಆ್ಯಪ್ ಸೃಷ್ಟಿಸುವ ಮುಖೇನ ವಿವಿಧ ಸಮುದಾಯಗಳ ನಡುವೆ ದ್ವೇಷಕ್ಕೆ ಕಾರಣನಾದ ಆರೋಪ ಹೊತ್ತಿದ್ದ ಓಂಕಾರೇಶ್ವರ್‌ ಠಾಕೂರ್‌ಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.

ಠಾಕೂರ್‌ ಮೊದಲ ಬಾರಿಗೆ ಅಪರಾಧ ಎಸಗಿದ್ದು ಇನ್ನೂ ಯುವಕನಿದ್ದಾನೆ. ದೀರ್ಘಾವಧಿ ಸೆರೆಯಲ್ಲಿಟ್ಟರೆ ಆತನ ಭವಿಷ್ಯಕ್ಕೆ ತೊಂದರೆಯಾಗಲಿದೆ. ಆತ ದೇಶ ತೊರೆಯುವ ಅಪಾಯವಿಲ್ಲ. ವಿಚಾರಣೆ ಮುಗಿಯಲು ಸಾಕಷ್ಟು ಸಮಯ ಹಿಡಿಯುವುದರಿಂದ ಆತನನ್ನು ಬಂಧನದಲ್ಲಿಡುವುದರಿಂದ ಯಾವುದೇ ಉದ್ದೇಶ ಸಾಕಾರಗೊಳ್ಳದು ಎಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಡಾ. ಪಂಕಜ್ ಶರ್ಮಾ ತಿಳಿಸಿದರು.

ಅರ್ಜಿದಾರ ಠಾಕೂರ್‌ ಪರ ವಕೀಲರು ಆತನ ವಿರುದ್ಧದ ಆಪಾದನೆಗಳು ಕಪೋಲಕಲ್ಪಿತವಾಗಿದ್ದು ಇದಕ್ಕೆ ಯಾವುದೇ ಆಧಾರವಿಲ್ಲ ಎಂದು ವಾದಿಸಿದರು. ಸಹ ಆರೋಪಿ ನೀರಜ್ ಬಿಷ್ಣೋಯ್ ನೀಡಿದ್ದ ಬಹಿರಂಗ ಹೇಳಿಕೆ ಆಧರಿಸಿ ಠಾಕೂರ್‌ನನ್ನು ಬಂಧಿಸಲಾಗಿತ್ತು.

ಇತ್ತ ಪ್ರಾಸಿಕ್ಯೂಷನ್‌ ಆರೋಪಿಗೆ ಜಾಮೀನು ನೀಡುವುದನ್ನು ವಿರೋಧಿಸಿತು. ವಿಧಿ ವಿಜ್ಞಾನ ಪರೀಕ್ಷೆಯ ವರದಿಗಳು ಇನ್ನಷ್ಟೇ ಬರಬೇಕಿದೆ. ಆತ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಮತ್ತು ಸಾಕ್ಷ್ಯ ನಾಶ ಮಾಡುವ ಅಪಾಯವಿದೆ ಎಂದಿತು.

ಆದರೆ ನ್ಯಾಯಾಲಯ “ವಿಧಿ ವಿಜ್ಞಾನ ಪರೀಕ್ಷೆಯ ವರದಿಗಳು ಇನ್ನೂ ಬಂದಿಲ್ಲ ಎಂಬುದು ಜನವರಿಯಿಂದಲೂ ಬಂಧನದಲ್ಲಿರುವ ಠಾಕೂರ್‌ಗೆ ಜಾಮೀನು ನಿರಾಕರಿಸಲು ಆಧಾರವಾಗದು” ಎಂದು ಹೇಳಿ ಜಾಮೀನು ನೀಡಿತು.