LPG Cylinders and Karnataka HC
LPG Cylinders and Karnataka HC 
ಸುದ್ದಿಗಳು

ಬಿಪಿಎಲ್‌ದಾರರಿಗೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ನೀತಿ ನಿರೂಪಣೆಗೆ ಸಂಬಂಧಪಟ್ಟ ವಿಚಾರ: ಹೈಕೋರ್ಟ್‌

Siddesh M S

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕಾರ್ಡ್‌ ಹೊಂದಿರುವ ಎಲ್‌ಪಿಜಿ (ಅಡುಗೆ ಅನಿಲ) ಸೌಲಭ್ಯ ಹೊಂದಿರದ ಕುಟುಂಬದವರಿಗೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪೂರೈಸಬೇಕೆಂಬ ವಿಚಾರವು ನೀತಿ-ನಿರೂಪಣೆಯ ಭಾಗವಾಗಿದೆ. ಈ ಕುರಿತು ಅರ್ಜಿದಾರರು ಸರ್ಕಾರಕ್ಕೆ ನಿರ್ದಿಷ್ಟವಾಗಿ ಮನವಿ ಸಲ್ಲಿಸಬಹುದಾಗಿದೆ ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಎಲ್‌ಪಿಜಿ ಸೌಲಭ್ಯ ಹೊಂದಿರದ ಬಿಪಿಎಲ್‌ ಕಾರ್ಡುದಾರರಿಗೆ ಪ್ರತಿ ತಿಂಗಳು ಮೂರು ಲೀಟರ್‌ ಸೀಮೆ ಎಣ್ಣೆ ಪೂರೈಸಬೇಕು ಮತ್ತು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪೂರೈಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

“2016 ಜುಲೈ 27ರ ಆದೇಶದ ಅನುಸಾರ ಎಲ್‌ಪಿಜಿ ಸಿಲಿಂಡರ್‌ ಸೌಲಭ್ಯ ಹೊಂದಿರದ ಬಿಪಿಎಲ್‌ ಕಾರ್ಡುದಾರರಿಗೆ ಪ್ರತಿ ತಿಂಗಳು ಮೂರು ಲೀಟರ್‌ ಸೀಮೆ ಎಣ್ಣೆ ವಿತರಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಎಲ್‌ಪಿಜಿ ಸೌಲಭ್ಯ ಹೊಂದಿರದ ಬಿಪಿಎಲ್‌ ಕಾರ್ಡುದಾರರಿಗೆ ಯಾವ ದರದಲ್ಲಿ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ ಒದಗಿಸಬೇಕು ಎಂಬುದು ನೀತಿ-ನಿರೂಪಣೆಯ ಭಾಗವಾಗಿದೆ. ಈ ಕುರಿತು ಅರ್ಜಿದಾರರು ಸರ್ಕಾರಕ್ಕೆ ನಿರ್ದಿಷ್ಟವಾಗಿ ಮನವಿ ಸಲ್ಲಿಸಬಹುದಾಗಿದೆ. ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಯ ಸಂಬಂಧ 15 ದಿನಗಳಲ್ಲಿ ಸರ್ಕಾರವನ್ನು ಪ್ರತಿನಿಧಿಸಿರುವ ಹೆಚ್ಚುವರಿ ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ವಿಚಾರಣೆಯನ್ನು ಸೆಪ್ಟೆಂಬರ್‌ 7ಕ್ಕೆ ಮುಂದೂಡಲಾಗಿದೆ.

ಇದಕ್ಕೂ ಮುನ್ನ, ಅರ್ಜಿದಾರ ಪರ ವಕೀಲರು “ರಾಜ್ಯ ಸರ್ಕಾರ ವಿತರಿಸುವ ಮೂರು ಲೀಟರ್‌ ಸೀಮೆ ಎಣ್ಣೆಗೆ ಗರಿಷ್ಠ ರೂ. 105. ಆದರೆ, ಎಲ್‌ಪಿಜಿ ಸಿಲಿಂಡರ್‌ಗೆ ರೂ.824 ವೆಚ್ಚವಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವವರು ಎಲ್‌ಪಿಜಿ ಸಿಲಿಂಡರ್‌ ಖರೀದಿಸುವುದು ಕಷ್ಟವಾಗಿದೆ. ಹೀಗಾಗಿ, ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪೂರೈಸಬೇಕು” ಎಂದು ಕೋರಿದರು. ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಉಲ್ಲೇಖಿಸಿದ ಸರ್ಕಾರಿ ವಕೀಲರು, ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ ಪೂರೈಕೆಗೆ ಸಂಬಂಧಿಸಿದಂತೆ ವಿಸ್ತೃತವಾದ ಹೇಳಿಕೆ ಸಲ್ಲಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು.