ಸುದ್ದಿಗಳು

ಕರ್ನಾಟಕದ ವಕೀಲರ ಸಂಘಗಳಲ್ಲಿ ಮಹಿಳಾ ನ್ಯಾಯವಾದಿಗಳಿಗೆ ಶೇ.30ರಷ್ಟು ಮೀಸಲಾತಿ: ಸುಪ್ರೀಂ ಆದೇಶ

ಎರಡು ದಿನಗಳ ಹಿಂದೆ ಕರ್ನಾಟಕ ಹೈಕೋರ್ಟ್ ಕೂಡ ವಕೀಲರ ಸಂಘಗಳು ಪುರುಷರ ಆಡುಂಬೊಲವಾಗದಂತೆ ಕರೆ ನೀಡಿತ್ತು.

Bar & Bench

ಕರ್ನಾಟಕದಾದ್ಯಂತ ಜಿಲ್ಲಾ ವಕೀಲರ ಸಂಘಗಳ ಆಡಳಿತ ಮಂಡಳಿಗಳಲ್ಲಿ ಶೇ.30ರಷ್ಟು ಹುದ್ದೆಗಳನ್ನು ಮಹಿಳಾ ನ್ಯಾಯವಾದಿಗಳಿಗೆ ಮೀಸಲಿಡಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ [ದೀಕ್ಷಾ ಎಂ ಅಮೃತೇಶ್ ವಿರುದ್ಧ ಕರ್ನಾಟಕ ರಾಜ್ಯ ಮತ್ತು ಇತರರು].

ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಇಂತಹ ನಿರ್ದೇಶನ ನೀಡಿತ್ತು. ಅಲ್ಲದೆ, ಈ ವರ್ಷ ಜನವರಿ 24 ರಂದು ಹೊರಡಿಸಿದ ಆದೇಶದಲ್ಲಿ, ಖಜಾಂಚಿ ಹುದ್ದೆಯನ್ನು ಮಹಿಳಾ ಅಭ್ಯರ್ಥಿಗಳಿಗೆಂದೇ ಮೀಸಲಿಡಬೇಕೆಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಎಎಬಿ ಚುನಾವಣೆ ನಡೆದಿರುವ ಬಗ್ಗೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ಪೀಠದ ಗಮನಕ್ಕೆ ಎರಡು ದಿನಗಳ ಹಿಂದೆ ತರಲಾಯಿತು.  ಜನವರಿ 28ರಂದು ಎಎಬಿ ಆಡಳಿತ ಮಂಡಳಿಯಲ್ಲಿ ಮಹಿಳಾ ವಕೀಲರಿಗೆ ಶೇಕಡಾ 30 ರಷ್ಟು ಮೀಸಲಾತಿ ಜಾರಿಗೆ ತಂದಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಲಾಯಿತು .

ವಿವಿಧ ಜಿಲ್ಲಾ ವಕೀಲರ ಸಂಘಗಳಿಗೆ ಚುನಾವಣೆಗಳು ಬಾಕಿ ಉಳಿದಿರುವುದನ್ನು ಈ ವೇಳೆ ಗಮನಿಸಿದ ನ್ಯಾಯಾಲಯ ಎಎಬಿಗೆ ನೀಡಿದ್ದ ಮಹಿಳಾ ಮೀಸಲಾತಿಯ ನಿರ್ದೇಶನಗಳನ್ನು ಕರ್ನಾಟಕದ ಎಲ್ಲಾ ವಕೀಲರ ಸಂಘದ ಚುನಾವಣೆಗಳಿಗೂ ಅನ್ವಯಿಸಬೇಕು ಎಂದು ಅಭಿಪ್ರಾಯಪಟ್ಟಿತು.

"ಜನವರಿಯಲ್ಲಿ ಹೊರಡಿಸಲಾದ ನಮ್ಮ ಆದೇಶವು ಎಲ್ಲಾ ಜಿಲ್ಲಾ ನ್ಯಾಯಾಲಯದ ವಕೀಲರ ಸಂಘಗಳಿಗೆ ಯಥಾಪ್ರಕಾರ ಅನ್ವಯಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ. ಹೀಗಾಗಿ, ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಮತ್ತು ಆಡಳಿತ ಮಂಡಳಿಯಲ್ಲಿ ಶೇ 30% ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಬೇಕು. ಪ್ರತಿಯೊಂದು ವಕೀಲರ ಸಂಘ ​​ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಬೇಕು ಸಲ್ಲಿಸಬೇಕು" ಎಂದು ನ್ಯಾಯಾಲಯ ಆದೇಶಿಸಿತು.

Justice M Nagaprasanna and Karnataka HC

ಈ ಮಧ್ಯೆ, ರಾಜ್ಯದ ಎಲ್ಲಾ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಇದೇ ರೀತಿಯ ಮೀಸಲಾತಿ ಜಾರಿಗೆ ತರುವಂತೆ ಕರ್ನಾಟಕ ಹೈಕೋರ್ಟ್ ಕೂಡ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು.

ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ ​​(ಟಿಬಿಎ) ಮಹಿಳಾ ವಕೀಲರಿಗೆ ಶೇ. 33 ರಷ್ಟು ಮೀಸಲಾತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ , ಏಪ್ರಿಲ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಿಳೆಯರಿಗೆ ಜಂಟಿ ಕಾರ್ಯದರ್ಶಿ ಹುದ್ದೆ ಮತ್ತು ಎರಡು ಕಾರ್ಯಕಾರಿ ಮಂಡಳಿ ಹುದ್ದೆಗಳನ್ನು ಕಾಯ್ದಿರಿಸುವುದಾಗಿ ಸಂಘ ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನಂತರ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತು.

ತಾವು ಜಗತ್ತಿನ ಅರ್ಧದಷ್ಟಿದ್ದರೂ, ತಮಗೆ ಅರ್ಧದಷ್ಟು ಅವಕಾಶವೂ ಇಲ್ಲ ಎಂದು ಯಾವ ಮಹಿಳೆಯೂ ಎಂದಿಗೂ ದುಃಖಿಸಬಾರದು.
ಕರ್ನಾಟಕ ಹೈಕೋರ್ಟ್

ಮುಂಬರುವ ಚುನಾವಣೆಗಳು ಪೂರ್ಣಗೊಂಡ ನಂತರ ಈ ಬದಲಾವಣೆಗಳನ್ನು ಅಳವಡಿಸಲು ಸಂಘದ ಬೈಲಾಗಳನ್ನು ಸಹ ತಿದ್ದುಪಡಿ ಮಾಡಲಾಗುವುದು ಎಂದು ಟಿಬಿಎ ಪರ ವಕೀಲರು ಹೇಳಿದ್ದರು.

ಇದು ಸದ್ಯಕ್ಕೆ ಸ್ವಲ್ಪ ಸಮಾಧಾನಕರ ಸಂಗತಿ, ಆದರೆ ಇದನ್ನು ತಾತ್ಕಾಲಿಕ ಪರಿಹಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತು.

ಈಗ ಮೀಸಲಾತಿ ಜಾರಿ ಮಾಡಲಿಲ್ಲ ಎಂದರೆ ಯಾವಾಗ ಮಾಡುವಿರಿ? ಎಂದು ಪ್ರಶ್ನಿಸಿದ್ದ ನ್ಯಾ. ನಾಗಪ್ರಸನ್ನ ಅವರು ವಕೀಲರ ಸಂಘಗಳನ್ನು ಬಾಯ್ಸ್‌ ಕ್ಲಬ್‌ ಆಗಿರಲು ಬಿಡಲಾಗದು ಎಂದಿದ್ದರು.

ಪ್ರತಿಯೊಂದು ವಕೀಲರ ಸಂಘದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಒದಗಿಸುವಂತೆ ನೋಡಿಕೊಳ್ಳುವುದು ನೈತಿಕ ಬದ್ಧತೆಗೆ ಸಂಬಂಧಿಸಿದ್ದು ಮಾತ್ರವಲ್ಲದೆ, ಕಾನೂನುಬದ್ಧತೆಗೂ ಅನುಗುಣವಾಗಿದೆ. ಇದು ಈವರೆಗೆ ಪುರುಷರ ಭದ್ರಕೋಟೆ ಅಥವಾ ವೃದ್ಧ ಪುರುಷರ ಕ್ಲಬ್‌ ಎಂದು ಕರೆಯಲಾಗುತ್ತಿದ್ದ ಸಂಘಗಳನ್ನು ಕಳಚಿಹಾಕಲು ಕಾರಣವಾಗುತ್ತದೆ. ತಾವು ಜಗತ್ತಿನ ಅರ್ಧದಷ್ಟಿದ್ದರೂ, ತಮಗೆ ಅರ್ಧದಷ್ಟು ಅವಕಾಶವೂ ಇಲ್ಲ ಎಂದು ದೇಶದ  ಅಥವಾ ವಕೀಲರ ಸಂಘದ ಯಾವುದೇ ಮಹಿಳೆ ಎಂದಿಗೂ ದುಃಖಿಸಬಾರದು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

ಹೈಕೋರ್ಟ್‌ನಲ್ಲಿ ಅರ್ಜಿದಾರರ ಪರವಾಗಿ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಮತ್ತು ವಕೀಲೆ ವಿದ್ಯಾಶ್ರೀ ಕೆ ಎಸ್ ಹಾಜರಾಗಿದ್ದರು. ಹಿರಿಯ ವಕೀಲರಾದ ಆರ್‌ ಎಸ್‌ ರವಿ ಮತ್ತು ವಿವೇಕ್ ಸುಬ್ಬಾ ರೆಡ್ಡಿ ಪ್ರತಿವಾದಿಗಳ ಪರವಾಗಿ ವಾದ ಮಂಡಿಸಿದ್ದರು.