Arvind Kejriwal, PM Modi
Arvind Kejriwal, PM Modi Twitter
ಸುದ್ದಿಗಳು

ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ ದೆಹಲಿಯಲ್ಲಿ ಕೋವಿಡ್‌ ನಿಯಂತ್ರಿಸಲು ಆಪ್‌ ಸರ್ಕಾರ ಕ್ರಮಕೈಗೊಳ್ಳಲಿಲ್ಲ: ಕೇಂದ್ರ

Bar & Bench

ಚಳಿಗಾಲ, ಹಬ್ಬದ ಋತು ಮತ್ತು ಮಾಲಿನ್ಯ ಇವುಗಳ ಒಗ್ಗೂಡುವಿಕೆಯಿಂದಾಗಿ ಕೋವಿಡ್‌ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ತಿಳಿದಿದ್ದರೂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಂದ್ರ ಸರ್ಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಪ್ರತಿ ದಿನ ದೆಹಲಿಯಲ್ಲಿ 15,000 ಪ್ರಕರಣಗಳ ಹೆಚ್ಚಳವಾಗುವ ಸಾಧ್ಯತೆಯಿದ್ದು, ಅದಕ್ಕೆ ದೆಹಲಿ ಸಿದ್ಧವಾಗಿರಬೇಕು ಎಂದು ಶಿಫಾರಸ್ಸು ಮಾಡಿತ್ತು. ಅದಕ್ಕೆ ಅನುಗುಣವಾಗಿ ತುರ್ತು ನಿಗಾ ಘಟಕದ (ಐಸಿಯು) ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ, ಅವಶ್ಯಕತೆಗೆ ಅನುಗುಣವಾಗಿ ದೆಹಲಿ ಸರ್ಕಾರ ಕ್ರಮಕೈಗೊಳ್ಳಲಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಕೇಂದ್ರ ವಿವರಿಸಿದೆ.

“ಡೆಂಘಿ ನಿಯಂತ್ರಣ ಮತ್ತು ತಡೆ ಸೇರಿದಂತೆ ದೆಹಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಕುರಿತು ದಿನಂಪ್ರತಿ ಜಾಹೀರಾತು ನೀಡಲಾಗುತ್ತಿತ್ತು. ಆದರೆ, ಕೋವಿಡ್‌ ನಡಾವಳಿ ಕುರಿತು ಯಾವುದೇ ಜಾಹೀರಾತು ನೀಡಲಾಗಿಲ್ಲ. ಜನರಿಗೆ ಈ ಕುರಿತು ನಿರಂತರ ಮಾಹಿತಿ ನೀಡಲಾಗಿಲ್ಲ” ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಕೋವಿಡ್‌ ಹೆಚ್ಚಳದ ನಡುವೆ ಪುನರಾವರ್ತಿತ ಸಲಹೆಗಳ ಹೊರತಾಗಿಯೂ ತಪಾಸಣಾ ಸಾಮರ್ಥ್ಯ ಹೆಚ್ಚಿಸಲು ದೆಹಲಿ ಸರ್ಕಾರವು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸೋಂಕು ತಡೆಗಟ್ಟಲು ಯಾವುದೇ ತೆರನಾದ ಪರಿಣಾಮಕಾರಿ ನಿಯಂತ್ರಣಾ ಕ್ರಮಗಳನ್ನು ದೆಹಲಿ ಸರ್ಕಾರ ಕೈಗೊಂಡಿಲ್ಲ.
ಕೇಂದ್ರ ಸರ್ಕಾರ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯ ಪ್ರಕಾರ ರೋಗ ನಿಯಂತ್ರಣ ಕ್ರಮಗಳು, ರೋಗಿಗಳಿರುವ ಗೃಹಗಳ ನಿಗಾವಣೆ, ಸೋಂಕು ಪತ್ತೆ, ರೋಗಿಗಳ ಪ್ರತ್ಯೇಕಿಸುವಿಕೆ ಮತ್ತು ಕ್ಲಿನಿಕಲ್‌ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡದಿರುವುದರಿಂದ ಸೋಂಕು ವ್ಯಾಪಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮನೆಯಲ್ಲಿ ಐಸೋಲೇಷನ್‌ಗೆ ಒಳಗಾಗಿರುವವರನ್ನು ಗುರುತಿಸುವುದು ಅಥವಾ ಅವರ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಕೋವಿಡ್‌ ರೋಗಿಗಳಿಗೆ ಉಪಚಾರ ಮತ್ತು ಕೋವಿಡ್‌ನಿಂದ ಸತ್ತವರ ದೇಹಗಳ ನಿರ್ವಹಣೆಯ ಕುರಿತು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ಸಲ್ಲಿಸಿದೆ.

ಇದೇ ವೇಳೆ ಲಸಿಕೆಯ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆಯೂ ಕೇಂದ್ರವು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಹೀಗೆ ಹೇಳಿದೆ:

ಪ್ರಸ್ತುತ ಐದು ಲಸಿಕೆಗಳು ಪರೀಕ್ಷಾರ್ಥ ಹಂತದಲ್ಲಿವೆ. ಈ ಪೈಕಿ ಎರಡು ಲಸಿಕೆಗಳು ಮೂರನೇ ಹಂತದ ಪರೀಕ್ಷೆಯಲ್ಲಿದ್ದು, ಮೂರು ಔಷಧಗಳು ಎರಡನೇ ಹಂತದ ಪರೀಕ್ಷೆಯಲ್ಲಿವೆ.
ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೋಗ ನಿಯಂತ್ರಣಾ ಕ್ರಮಗಳನ್ನು ರಾಜ್ಯ ಸರ್ಕಾರಗಳು ವ್ಯವಸ್ಥಿತವಾಗಿ ಜಾರಿಗೊಳಿಸಿಲ್ಲ ಎಂದಿರುವ ನ್ಯಾಯಪೀಠವು ಇಂದು ನಿಗದಿಗೊಳಿಸಿದ್ದ ವಿಚಾರಣೆಯನ್ನು ಮಂಗಳವಾರಕ್ಕೆ‌ ಮುಂದೂಡಿತು.