ಕೋವಿಡ್‌ ಕರಾಳತೆ: ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಬದುಕು-ಬವಣೆ

ಕೋವಿಡ್‌ ಸಮಸ್ಯೆ ಜಾಗತಿಕವಾಗಿ ತಲೆದೋರಿ ವರ್ಷವಾಗುತ್ತಾ ಬಂದಿದೆ. ಅದಾಗಲೇ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಅಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರು ಕೋವಿಡ್‌ನಿಂದ ಎದುರಾದ ಸಂಕಷ್ಟಗಳಿಂದಾಗಿ ಸಮಸ್ಯೆಗಳ ಸರಮಾಲೆಯನ್ನೇ ಧರಿಸುವಂತಾಗಿದೆ.
ಕೋವಿಡ್‌ ಕರಾಳತೆ: ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಬದುಕು-ಬವಣೆ
Published on

ಕೋವಿಡ್‌ ಸಾಂಕ್ರಾಮಿಕತೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಹೇರಿದ ಲಾಕ್‌ಡೌನ್‌ ಸಂದರ್ಭದಲ್ಲಿ ಹಳಿ ತಪ್ಪಿದ ಅಸಂಘಟಿತ ವಲಯದಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸ್ಥಿತಿಗತಿಗಳು ಲಾಕ್‌ಡೌನ್ ತೆರವಾದ ನಂತರವೂ ಮರಳಿ ಹಳಿಗೆ ಬಂದಿಲ್ಲ. ಸಾಲುಸಾಲು ಹಬ್ಬಹರಿದಿನಗಳು ದೇಶೀಯ ಮಾರುಕಟ್ಟೆಯಲ್ಲಿ ತಕ್ಕ ಮಟ್ಟಿಗಿನ ಚೇತರಿಕೆಯನ್ನೇನೋ ತಂದಿವೆ, ದೇಶೀ ಉದ್ಯಮ ವಲಯದಲ್ಲಿ ತುಸು ತೇಜಿಯೂ ಕಂಡುಬಂದಿದೆ. ಇದನ್ನೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕ ಬೆಳವಣಿಗೆಯ 'ಗ್ರೀನ್ ಶೂಟ್' (ಹಸಿರು ಚಿಗುರು) ಕಾಣುತ್ತಿದೆ ಎಂದು ಭೂತಗಾಜಿನಲ್ಲಿ ತೋರುತ್ತಿವೆ. ಆದರೆ, ಇದಾವುದೂ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಬದುಕಿನಲ್ಲಿ ಬದಲಾವಣೆಯನ್ನು ತಂದಿಲ್ಲ.

ಅಸಂಘಟಿತ ವಲಯದ ಮಹಿಳಾ ಕಾರ್ಮಿಕರ ಬದುಕು ಬವಣೆಯನ್ನು ಹತ್ತಿರದಿಂದ ಕಂಡಿರುವ ವಕೀಲೆ ಸುಮಿತ್ರಾ ಆಚಾರ್ಯ ಅವರು ಎರಡನೇ ಹಂತದ ನಗರಗಳಲ್ಲಿರುವ ಮಹಿಳಾ ಕಾರ್ಮಿಕರ ಬದುಕಿನ ಮೇಲೆ ಕೋವಿಡ್‌ ಹಾಗೂ ಆನಂತರದ ಘಟನಾವಳಿಗಳು ಬೀರಿರುವ ಪರಿಣಾಮವನ್ನು ವಿವರಿಸುವ ಚಿತ್ರಣವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಚದುರಿದ ಚಿತ್ರಗಳು ಅಸಂಘಟಿತ ವಲಯದ ಮಹಿಳೆಯರು ಇಂದು ಎದುರಿಸುತ್ತಿರುವ ಸಮಸ್ಯೆಗಳು, ತೊಳಲಾಟಗಳನ್ನು ನಮ್ಮ ಕಣ್ಣೆದುರು ಮೂಡಿಸುತ್ತವೆ.

ದಿನಕ್ಕೆನೂರು ರೂ ದುಡಿಮೆಯೂ ದುರ್ಲಭವಾಗಿದೆ, ದಿನವಿಡೀ ಕೂತರು ಎರಡು ಜಾಕೆಟ್‌ ಸಿದ್ಧಪಡಿಸಲಾಗುವುದಿಲ್ಲ: ಶಮಾ, ಗಾರ್ಮೆಂಟ್ ಉದ್ಯೋಗಿ

ಗಾರ್ಮೆಂಟ್‌ನಲ್ಲಿ ಕಳೆದ 15 ವರ್ಷಗಳಿಂದ ದುಡಿಯತ್ತಿರುವ 32 ವರ್ಷದ ಶಮಾ ಅವರ ಮಾಸಿಕ ವೇತನ 10,000 ರೂಪಾಯಿ ಮಾತ್ರ. ಪೀಸ್ ಕೆಲಸದ ಮೇಲೆ ಅವರ ವೇತನ ನಿರ್ಧಾರವಾಗುತ್ತದೆ. ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಪೀಸ್ ಕೆಲಸ ನಿಂತು ಹೋಗಿದ್ದು, ದಿನಕ್ಕೆ 100 ರೂಪಾಯಿ ದುಡಿಯುವುದೂ ದುರ್ಲಭವಾಗಿದೆ. ಜಾಕೆಟ್ ಕೆಲಸ ಇದೆಯಾದರೂ ದಿನಕ್ಕೆ 2ಕ್ಕಿಂತ ಜಾಸ್ತಿ ಮಾಡಲಾಗುವುದಿಲ್ಲ. ಒಂದು ಜಾಕೆಟ್‌ ಸಿದ್ಧಪಡಿಸಿದರೆ 50 ರೂಪಾಯಿ ಮಾತ್ರವೇ ಸಿಗುತ್ತದೆ.

ಇತ್ತ ಆರೋಗ್ಯದಲ್ಲಿಯೂ ಸಮಸ್ಯೆಯಾಗಿದ್ದು, ಮೂತ್ರಕೋಶದ ಕಲ್ಲು ತೆಗೆದರೂ ಕಿಬ್ಬೊಟ್ಟೆ ನೋವು ಕಡಿಮೆಯಾಗಿಲ್ಲ. ವೈದ್ಯರ ಬಳಿ ತಪಾಸಣೆಗೆ ತೆರಳಲೂ ಹಣವಿಲ್ಲವಾಗಿದೆ. ಸಾಲದ ಹೊರೆ ಹೆಚ್ಚಾಗಿದ್ದು, ಪೌಷ್ಟಿಕ ಆಹಾರವೆನ್ನುವುದು ದೂರದ ಮಾತಾಗಿದೆ. ಪಡಿತರ ಚೀಟಿ ತೋರಿದರೂ ಆಹಾರ ಸಾಮಗ್ರಿ ಖಾಲಿಯಾಗಿದೆ. ಇನ್ನೂ ಪಡಿತರ ಬಂದಿಲ್ಲ ಎಂಬ ಉತ್ತರ ಬರುತ್ತದೆ ಎಂದು ಪ್ರಸಕ್ತ ತಮ್ಮ ಕುಟುಂಬದ ಸ್ಥಿತಿಗತಿಯನ್ನು ನೊಂದುಕೊಳ್ಳುತ್ತಲೇ ವಿವರಿಸುತ್ತಾರೆ. ಶಮಾ.

ಸರ್ಕಾರೇತರ ಸಂಸ್ಥೆಯಾದ ʼಮುನ್ನಡೆʼಯ ನೆರವಿನಿಂದ ಬದುಕು ನಡೆಯುತ್ತಿದೆ.‌ ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ನೀಡುವುದಾಗಿ ಹೇಳುತ್ತಿದ್ದಾರೆ. ಪುತ್ರನಿಗೆ ಮೊಬೈಲ್ ಕೊಡಿಸಲು ಹಣವಿಲ್ಲದೇ ಇರುವುದರಿಂದ ಆನ್‌ಲೈನ್‌ ತರಗತಿಗಳು ಮಿಸ್‌ ಆಗುತ್ತಿವೆ. ಸ್ನೇಹಿತರ ಬಳಿ ಪಡೆದುಕೊಂಡು ನೋಟ್ಸ್‌ ಮಾಡಿಕೊಳ್ಳುತ್ತಿದ್ದಾನೆ. ಪತಿಯ ಗಾರೆ ಕೆಲಸವೂ ನಿಂತು ಹೋಗಿದೆ ಎಂದು ಅವರು ತಮ್ಮ ಸಂಕಟ ಬಿಚ್ಚಿಡುತ್ತಾರೆ.

ಕಷ್ಟ ಕಾಲದಲ್ಲಿಯೇ ವೇತನ ಕಡಿತ ಮಾಡಿ, ಹಿಂಬಡ್ತಿ ನೀಡಿದ್ದಾರೆ; ಇದ್ದ ಸ್ವಲ್ಪ ಭವಿಷ್ಯ ನಿಧಿಯನ್ನೂ ಹಿಂಪಡೆದಿದ್ದೇನೆ: ಜಯಾ, ಗಾರ್ಮೆಂಟ್‌ ಮೇಲ್ವಿಚಾರಕಿ 

ಗಾರ್ಮೆಂಟ್‌ ಒಂದರಲ್ಲಿ ಮೇಲ್ವಿಚಾರಕಿಯಾಗಿರುವ 39 ವರ್ಷದ ಜಯಾ ಅವರ ಮಾಸಿಕ ವೇತನ 14 ಸಾವಿರ ರೂಪಾಯಿ. ಕೋವಿಡ್‌ ಕಾರಣದಿಂದ ವೇತನ ಕಡಿತಗೊಳಿಸಿ, ಹಿಂಬಡ್ತಿ ನೀಡಲಾಗಿದೆ. ಪತಿಯನ್ನು ಕಳೆದುಕೊಂಡಿರುವ ಜಯಾ ಅವರ ಮೇಲೆ ಇಬ್ಬರು ಮಕ್ಕಳ ಊಟ-ಬಟ್ಟೆ, ಶಿಕ್ಷಣ ಕೊಡಿಸುವ ಜವಾಬ್ದಾರಿ ಇದೆ. ಜೀವನ ನಿರ್ವಹಣೆ ಕಷ್ಟವಾಗಿ ಅಷ್ಟಿಷ್ಟು ಕೂಡಿಟ್ಟಿದ್ದ ಭವಿಷ್ಯ ನಿಧಿ ಹಣವನ್ನೂ ಹಿಂಪಡೆದಿದ್ದಾರೆ.

ಖಾಸಗಿ ಶಾಲೆಗೆ ಹೋಗುತ್ತಿದ್ದ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಸಾಲ ಮಾಡಿ ಮೊಬೈಲ್‌ ಖರೀದಿಸಿದ್ದೇನೆ. ಕಷ್ಟದ ಕಾಲದಲ್ಲಿ ಸಾಲದ ಹೊರೆ ಹೆಚ್ಚಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ಮನೆಗೆ ಬಾಡಿಗೆ ಪಾವತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚು ಕೆಲಸ ಮಾಡಲೂ ದೇಹ ಸ್ಪಂದಿಸುತ್ತಿಲ್ಲ. ಕೇವಲ ಸರ್ಕಾರ ನೀಡುವ ಪಡಿತರದಿಂದ ಮಾತ್ರವೇ ಬದುಕು ನಡೆಸಲಾಗುತ್ತದೆಯೇ? ಎಂದು ಅವರು ಪ್ರಶ್ನಿಸುತ್ತಾರೆ.

ಮಗನ ಕಾಲೇಜು ಶಿಕ್ಷಣ ದೂರದ ಮಾತಾಗಿದೆ, ಬರುವ 5 ಸಾವಿರ ರೂ ವೇತನದಲ್ಲಿ ಏನು ಮಾಡಲಿ? ಲಕ್ಷ್ಮಿಅವರ ಕಾಡುವ ಪ್ರಶ್ನೆಗಳು... 

ಪತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ 32 ವರ್ಷದ ಲಕ್ಷ್ಮಿ ತಾವೇ ಸಂಸಾರದ ನೌಕೆ ಸಾಗಿಸುತ್ತಿದ್ದಾರೆ. ಮೊದಲೇ ಸಂಕಷ್ಟದ ಸರಮಾಲೆಗಳನ್ನು ಹೊತ್ತಿದ್ದ ಅವರಿಗೆ ಈಗ ಆರ್ಥಿಕ ಮುಗ್ಗಟ್ಟು ಕಾಡಿದೆ. ಹಣಕಾಸಿನ ಸಮಸ್ಯೆಯಿಂದಾಗಿಯೇ ಹೈಸ್ಕೂಲು ಶಿಕ್ಷಣ ಪೂರೈಸಿರುವ ಮಗನನ್ನು ಪ್ರಥಮ ಪಿಯುಸಿಗೆ ಸೇರಿಸಲು ಆಗಿಲ್ಲ ಎನ್ನುವಾಗ ಅವರಿಗೆ ಮಗನ ಭವಿಷ್ಯದ ಬಗ್ಗೆ ತೀವ್ರ ದುಗುಡ ಕಾಣುತ್ತದೆ.

ಪೀಸ್‌ ವರ್ಕ್‌ ಮಾಡುತ್ತಿರುವುದರಿಂದ ಹೆಚ್ಚು ದುಡಿಯಲು ಆಗುತ್ತಿಲ್ಲ. ಸಿಗುವ 5 ಸಾವಿರ ರೂಪಾಯಿಯಲ್ಲಿ ಮನೆ ಬಾಡಿಗೆ ಪಾವತಿಸಿ, ಜೀವನ ನಿರ್ವಹಣೆ ಮಾಡುವುದು ಕಡುಕಷ್ಟವಾಗಿದೆ ಎಂದು ಕಣ್ಣೀರಾಗುತ್ತಾರೆ. ಈ ಮೊದಲು ತಮ್ಮ ತಾಯಿಯ ಜೊತೆಯಲ್ಲಿ ನೆಲೆಸಿದ್ದ ಲಕ್ಷ್ಮಿ ಅವರು ಮಗನನ್ನು ಅಮ್ಮ ನೋಡಿಕೊಳ್ಳಲು ಇಚ್ಛಿಸದೇ ಇದ್ದುದರಿಂದ ಅವರಿಂದಲೂ ದೂರಾಗಿದ್ದಾರೆ. ಪ್ರತ್ಯೇಕ ಮನೆ ಮಾಡಿಕೊಂಡು ಮಗನೊಂದಿಗೆ ಬದುಕು ದೂಡುತ್ತಿದ್ದಾರೆ. ತಮ್ಮ ತಾಯಿ ಪಡಿತರ ಚೀಟಿಯನ್ನು ಬಳಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ದೂರಾಗಿರುವ ಪತಿ, ಅಸ್ವಸ್ಥ ಪುತ್ರ, ಜೀವನಾಂಶಕ್ಕೆ ತತ್ವಾರ: ಸಮಸ್ಯೆಗಳ ಸುಳಿಯಲ್ಲಿ ರೇಶ್ಮಾರ ಬದುಕು 

ಎರಡನೇ ವಿವಾಹವಾಗಿರುವ ಪತಿಯು ಮಗಳು ಮತ್ತು ತನ್ನ ಜೀವನ ನಿರ್ವಹಣೆಗೆ ನ್ಯಾಯಾಲಯದ ಆದೇಶವಿದ್ದರೂ ಜೀವನಾಂಶ ನೀಡುತ್ತಿಲ್ಲ. ಹೀಗಾಗಿ ತವರು ಮನೆಯವರ ಜೊತೆ ಕಷ್ಟದಲ್ಲಿ ಬದುಕು ದೂಡುತ್ತಿರುವುದಾಗಿ ತಿಳಿಸುತ್ತಾರೆ ರೇಶ್ಮಾ.

ಜೀವನಾಂಶ ನೀಡಲು ತಿಳಿಸಿರುವ ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಪತಿ ಮನೆ ಬದಲಿಸಿಕೊಂಡು ಕಣ್ಣುತಪ್ಪಿಸಿ ಬದುಕುತ್ತಿದ್ದಾರೆ. ಇತ್ತ ಮಗಳ ಶಾಲಾ ಶುಲ್ಕವನ್ನೂ ಪಾವತಿಸಲಾಗುತ್ತಿಲ್ಲ, ಇದರಿಂದ ಶಿಕ್ಷಣಕ್ಕೆ ತೊಂದರೆಯಾಗುವ ಭಯವಿದೆ. ಇನ್ನು ಕಕ್ಷಿದಾರಳಾದ ನನ್ನನ್ನು ನ್ಯಾಯಾಲಯದ ಒಳಗೂ ಬಿಡುವುದಿಲ್ಲ. ಪತಿಯಿಂದ ಜೀವನಾಂಶ ಪಡೆದುಕೊಳ್ಳುವ ದಾರಿಯೂ ಕಾಣುತ್ತಿಲ್ಲ ಎಂದು ನಿಟ್ಟುಸಿರುಡುವ ಅವರು ದೈನಂದಿನ ಜೀವನ ನಡೆಸುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ.

ಅಸ್ವಸ್ಥ ಪುತ್ರ, ಮನೆಗೆಲಸವೇ ಜೀವನಾಧಾರ: ಪುಷ್ಪಾ, ಮನೆಗೆಲಸ ಸಹಾಯಕಿ

ಮಾನಸಿಕ ಅಸ್ವಸ್ಥ ಪುತ್ರನನ್ನು ಸಂಭಾಳಿಸುವುದು ಒಂದೆಡೆಯಾದರೆ ಮನೆ ಕೆಲಸ ಮಾಡಿಯೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಮತ್ತೊಂದೆಡೆ. ಕುಟುಂಬದ ಈ ಗುರುತರ ಜವಾಬ್ದಾರಿಯಿಂದಾಗಿ ಬಳಲಿ ಹೋಗಿದ್ದಾರೆ ಪುಷ್ಪಾ. ಮನೆಗೆಲಸದ ದುಡಿಯಮೆಯೇ ಅವರಿಗೆ ಜೀವನಾಧಾರ. ಪುಣ್ಯಕ್ಕೆ ಕೋವಿಡ್‌ನಿಂದಾಗಿ ಅವರ ಕೆಲಸಕ್ಕೆ ತೊಂದರೆಯೇನೂ ಆಗಿಲ್ಲ. ಆದರೂ ಕೆಲಸ ಮಾಡುವ ಮನೆಯವರಿಗೆ ಹಾಗೂ ತಮಗೆ ಆತಂಕ ತಪ್ಪಿಲ್ಲ ಎನ್ನುತ್ತಾರೆ.

ಪುತ್ರನಿಗಿರುವ ಮಾನಸಿ ಆರೋಗ್ಯ ಸಮಸ್ಯೆಯಿಂದಾಗಿ ಆತನಿಗೆ ಸಾಮಾನ್ಯ ಶಾಲೆಯಲ್ಲಿ ಪ್ರವೇಶಾತಿ ದೊರೆಯುತ್ತಿಲ್ಲ. ವಿಶೇಷ ಮಕ್ಕಳ ಶಾಲೆಗೆ ಸೇರಿಸಲೂ ಆಗುತ್ತಿಲ್ಲ. ಆತನ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲಾಗದೇ ನಿಸ್ಸಹಾಯಕಳಾಗಿಬಿಟ್ಟಿದ್ದೇನೆ ಎಂದು ಚಿಂತಿತರಾಗುತ್ತಾರೆ ಪುಷ್ಪಾ.

ಪತಿಯಿಂದ ದೊರೆಯುವುದು ಬರಿದೇ ಬೈಗುಳ, ಪುತ್ರನ ಶಾಲಾ ಶುಲ್ಕವೂ ಕಟ್ಟಲಾಗಿಲ್ಲ: ಅನನ್ಯಾ

ದೊಡ್ಡ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಪತಿ ಎರಡನೇ ವಿವಾಹವಾಗಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ನೀಡದೇ ಇರುವುದರಿಂದ ಅದನ್ನು ಪಡೆಯಲು ಅವರಿರುವ ಮನೆಯ ಬಳಿಗೆ ತೆರಳಿ ಬೇಡುವ ದಯನೀಯ ಸ್ಥಿತಿಯಲ್ಲಿ ಅನನ್ಯಾ ಸಿಲುಕಿಕೊಂಡಿದ್ದಾರೆ. ತನ್ನ ಮನೆಯ ಬಾಗಿಲಿಗೆ ಪತ್ನಿ ಬರುವುದನ್ನು ಸಹಿಸದ ಪತಿರಾಯ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೆ ತುಚ್ಛವಾಗಿ ಮಾತನಾಡುತ್ತಾರೆ ಎನ್ನುವುದು ಅವರ ಅಳಲು.

Also Read
ಕೋವಿಡ್ ಹೊಡೆತದಿಂದ ಸುಧಾರಿಸಿಕೊಳ್ಳಲು ವರ್ಷಗಟ್ಟಲೇ ಸಮಯ ಬೇಕಿದೆ: ಯುವ ವಕೀಲೆ ಪ್ರಭಾವತಿ ಗೂಗಲ್‌

ಹಣಕಾಸಿನ ಸಮಸ್ಯೆಯಿಂದಾಗಿ ಪುತ್ರನ ಶಾಲಾ ಶುಲ್ಕ ಪಾವತಿಸದೇ ಇರುವುದರಿಂದ ಅಲ್ಲಿ ಅವಮಾನವಾಗುತ್ತಿದೆ. ಬಾಡಿಗೆ ಮನೆಯಲ್ಲಿ ಒಬ್ಬನೇ ಮಗನೊಂದಿಗೆ ಇರುವುದರಿಂದ ಹಲವರು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನ್ಯಾಯಾಲಯವು ಸೂಕ್ತ ಆದೇಶ ಹೊರಡಿಸದೇ ಇರುವುದರಿಂದ ಒತ್ತಡದಲ್ಲಿಯೇ ಬದುಕು ನಡೆಸುವಂತಾಗಿದೆ ಎಂದು ಕೊರಗುತ್ತಾರೆ ಅನನ್ಯಾ.

ವಿ.ಸೂ: ಲೇಖನದಲ್ಲಿ ಉಲ್ಲೇಖಿಸಲಾಗಿರುವ ಹೆಸರುಗಳನ್ನು ಗೋಪ್ಯತೆಯ ದೃಷ್ಟಿಯಿಂದ ಬದಲಿಸಲಾಗಿದೆ.

ಕೋವಿಡ್‌ ಕಾಲಘಟ್ಟದಲ್ಲಿ ದ್ವಿತೀಯ ಹಂತದ ನಗರಗಳಲ್ಲಿ ಅಸಂಘಟಿತ ವಲಯದ ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಬವಣೆಗಳನ್ನು ನೈಜ ಬದುಕಿನ ಚಿತ್ರಣಗಳೊಂದಿಗೆ ಇಲ್ಲಿ ಕಟ್ಟಿಕೊಟ್ಟಿರುವವರು ವಕೀಲೆ, ಸಾಮಾಜಿಕ ಕಾರ್ಯಕರ್ತೆಯಾದ ಸುಮಿತ್ರಾ ಆಚಾರ್ಯ.

ಸುಮಿತ್ರಾ ಅವರು ಕೌಟುಂಬಿಕ ದೌರ್ಜನ್ಯ ಪ್ರಕರಣ, ಅತ್ಯಾಚಾರ, ಆಸಿಡ್‌ ದಾಳಿಗೆ ತುತ್ತಾದವರು, ಕರ್ತವ್ಯದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದಾರೆ. ವಿವಿಧ ಎನ್‌ಜಿಒಗಳು ಹಾಗೂ ಅಸಂಘಟಿತ ವಲಯದ ಮಹಿಳೆಯರ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ

Kannada Bar & Bench
kannada.barandbench.com