A1
A1
ಸುದ್ದಿಗಳು

ದಶಕಗಳ ಹಿಂದಿನ ಕೊಲೆ ಪ್ರಕರಣ: ಕೃತ್ಯ ಮುಚ್ಚಿಹಾಕಲು ಪೊಲೀಸರೇ ಕತೆ ಕಟ್ಟಿರಬಹುದು ಎಂದ ಸುಪ್ರೀಂ; ನಾಲ್ವರ ಖುಲಾಸೆ

Bar & Bench

ಅಸ್ಸಾಂನಲ್ಲಿ 1989ರಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದ್ದು ಅವರ ವಿರುದ್ಧದ ಸಾಕ್ಷ್ಯಗಳು ವಿಶ್ವಾಸಾರ್ಹವಲ್ಲ. ಜೊತೆಗೆ ಪ್ರಾಸಿಕ್ಯೂಷನ್‌ ವಾದ ಪೊಲೀಸರ ಕಟ್ಟುಕತೆಯಾಗಿರುವ ಸಾಧ್ಯತೆಗಳಿವೆ ಎಂದು ತಿಳಿಸಿದೆ [ಪುಲೆನ್ ಫುಕಾನ್ ಮತ್ತಿತರರು ಹಾಗೂ ಅಸ್ಸಾಂ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮೃತನನ್ನು ಬಂಧಿಸುವಾಗ ಪೊಲೀಸರೇ ಆಕಸ್ಮಿಕವಾಗಿ ಹತ್ಯೆಗೈದಿರಬಹುದು. ಅದನ್ನು ಮುಚ್ಚಿಹಾಕಲು ಆರೋಪಿಗಳ ನಡುವಿನ ಪೂರ್ವ ದ್ವೇಷದ ಬಗ್ಗೆ ತಿಳಿದು ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರಿದ್ದ ತ್ರಿಸದಸ್ಯ ಪೀಠ ಹೇಳಿದೆ.

“ಎಫ್‌ಐಆರ್‌ ಬರೆದವರನ್ನು ಹಾಜರುಪಡಿಸಿಲ್ಲ, ಇಲ್ಲವೇ ಸಹಿಗಳನ್ನೂ ಸಾಬೀತು ಮಾಡಿಲ್ಲ. ಇದು ಸಂಪೂರ್ಣ ಪೊಲೀಸರ ಕಟ್ಟುಕತೆ ಆಗಿರುವ ಸಾಧ್ಯತೆ ಇದೆ. ಮೃತ ವ್ಯಕ್ತಿಯನ್ನು ಬಂಧಿಸುವ ಭರದಲ್ಲಿ ಕೊಲೆ ಮಾಡಿದ್ದಾರೆ. ನಂತರ ಕಕ್ಷಿದಾರರ ನಡುವೆ ವೈಷಮ್ಯ ಇತ್ತು ಎಂದು ತಿಳಿದು ಆರೋಪಿಗಳ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲಾಗಿದೆ” ಎಂಬುದಾಗಿ ತೀರ್ಪಿನಲ್ಲಿ ವಿವರಿಸಲಾಗಿದೆ.

ಕೊಲೆ ನಡೆದಿದೆ ಎನ್ನಲಾದ ಸಮಯದಲ್ಲಿ ಘಟನಾ ಸ್ಥಳ ಸೇರಿದಂತೆ ಘಟನೆಯ ಉದ್ದಕ್ಕೂ ಪೊಲೀಸ್‌ ಸಿಬ್ಬಂದಿ ಇರುವುದೇ ಇದಕ್ಕೆ ಸಾಕ್ಷಿ ಎಂದು ನ್ಯಾಯಾಲಯ ಹೇಳಿದೆ.

ವಿಚಾರಣಾ ನ್ಯಾಯಾಲಯ ಮೇಲ್ಮನವಿದಾರರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಗುವಾಹಟಿ ಹೈಕೋರ್ಟ್‌ 2015ರಲ್ಲಿ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ಪ್ರದೀಪ್ ಫುಕನ್ ಎಂಬುವವರು ಜೂನ್ 13, 1989ರಲ್ಲಿ ಕೊಲೆಯಾಗಿದ್ದರು. ಅಂದು ತನ್ನ ಮನೆಗೆ ಬಂದ ಹದಿಮೂರು ಆರೋಪಿಗಳು ಮೈದುನನ ತಲೆಗೆ ಹರಿತವಾದ ಆಯುಧಗಳಿಂದ ಘಾಸಿಗೊಳಿಸಿದ್ದರು ಎಂದು ಮೃತನ ಅತ್ತೆ ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಮೇ 3, 1991ರಂದು ಪೊಲೀಸರು ಸಲ್ಲಿಸಿದ ಆರೋಪಪಟ್ಟಿ ಸಲ್ಲಿಸಿದರು. ನಂತರ ಇತರ ಮೂವರನ್ನು ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಆದರೆ, ಇಬ್ಬರು ತಲೆಮರೆಸಿಕೊಂಡಿದ್ದು, ಪತ್ತೆಯಾಗಿರಲಿಲ್ಲ. ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಪ್ರಾಸಿಕ್ಯೂಷನ್ ಸಾಕ್ಷ್ಯ ಪ್ರಶ್ನಾತೀತವಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದವು. ಆದ್ದರಿಂದ ವಿಚಾರಣೆಯಲ್ಲಿದ್ದ ಎಲ್ಲಾ ಹನ್ನೊಂದು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದವು.

ಕೊಲೆ ನಡೆದ ಸ್ಥಳದಲ್ಲಿ ಪೊಲೀಸರು ಏಕೆ ಇದ್ದರು ಮತ್ತು ಅವರು ಏಕೆ ಕೃತ್ಯ ತಡೆಯಲು ಏಕೆ ಮುಂದಾಗಲಿಲ್ಲ ಎಂಬ ಬಗ್ಗೆ ಪ್ರಾಸಿಕ್ಯೂಷನ್‌ನಿಂದ ಉತ್ತರ ಪಡೆಯಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ. ಪೊಲೀಸ್‌ ಸಿಬ್ಬಂದಿ ಆರೋಪಿಗಳ ಜೊತೆಗಿದ್ದರು ಮತ್ತು ಮೃತನ ಮನೆಯ ಹೊರಗೆ ನಿಂತಿದ್ದರು ಎನ್ನುವ ವಾದ ಕಟ್ಟುಕತೆ ಇರಬಹುದು ಎಂಬ ಗಂಭೀರ ಅನುಮಾನ ಉಂಟುಮಾಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು.