ಕಾನೂನು ಶಿಕ್ಷಣ ಕುರಿತಂತೆ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್‌ನ ಜಾಗತಿಕ ಜಾಲಗೋಷ್ಠಿಯಲ್ಲಿ ಅವರು ʼಮಹಿಳೆ ಕಾನೂನು ಹಾಗೂ ನ್ಯಾಯಿಕ ವೃತ್ತಿʼ ಎಂಬ ವಿಷಯವಾಗಿ ಮಾತನಾಡಿದರು. ಅಲ್ಲದೆ ಅವರು ಮಹಿಳೆಯರ ನಿರ್ದಿಷ್ಟ ಅಗತ್ಯಗಳಿಗೆ ಕಾನೂನು ವೃತ್ತಿ ಹೇಗೆ ಸ್ಪಂದಿಸುವುದಿಲ್ಲ ಎಂಬುದರ ಬಗ್ಗೆಯೂ ಗಮನ ಸೆಳೆದರು.
ಮಹಿಳೆಯರು ತಮ್ಮ ವೃತ್ತಿಯಲ್ಲಿ ಎತ್ತರವನ್ನು ತಲುಪುವುದನ್ನು ತಡೆಯುವ ಅದೃಶ್ಯ ಅಡೆತಡೆಗಳನ್ನು ವಿವರಿಸಲು ಬಳಸುವ ʼಗಾಜಿನ ನಿರ್ಬಂಧʼ (Glass Ceiling) ಪರಿಕಲ್ಪನೆ ಕುರಿತು ಪ್ರಧಾನವಾಗಿ ಮಾತನಾಡಿದ ಅವರು ಅಂತಹ ನಿರ್ಬಂಧ ಮಹಿಳೆಯರನ್ನು ತಾರತಮ್ಯಕ್ಕೆ ಒಳಪಡಿಸುತ್ತದೆ ಎಂದು ಟೀಕಿಸಿದರು.
ಕಾನೂನು ಪದವಿ ಪಡೆಯುವಲ್ಲಿ ಪುರುಷರು ಮತ್ತು ಮಹಿಳೆಯರ ಸಂಖ್ಯೆ ಸಮಾನವಾಗಿದ್ದರೂ ಉನ್ನತ ಸ್ಥಾನಗಳ ವಿಷಯದಲ್ಲಿ ಪುರುಷರು ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದ ಅವರು ಉನ್ನತ ನ್ಯಾಯಾಂಗದ ನೇಮಕಾತಿಯಲ್ಲಿ ಕಂಡು ಬರುತ್ತಿರುವ ಲಿಂಗ ಅಸಮಾನತೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ನೇಮಕಾತಿ ಮತ್ತು ಬಡ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ವಿವೇಚನಾಧಿಕಾರ ಚಲಾಯಿಸಿದರೆ ಅದು ಮಹಿಳಾ ನೇಮಕಾತಿ ಸಂಖ್ಯೆಯನ್ನು ಮೊಟಕುಗೊಳಿಸುತ್ತದೆ” ಎಂದರು.
“ವಿವೇಚನಾಧಿಕಾರ ಬಳಸಿ ಆಯ್ಕೆ ಮಾಡುವ ಸಂದರ್ಭದಲ್ಲಿ ಮಾತ್ರ ಅಸಮಾನತೆ ಕಂಡುಬರುತ್ತಿದೆ. ಆಯ್ಕೆ ಮಾಡುವ ಗುಂಪಿನಲ್ಲಿ ಮಹಿಳೆಯರು ಇಲ್ಲ. ಹೀಗಾಗಿ ಹೆಚ್ಚು ಹೆಚ್ಚು ಮಹಿಳೆಯರು ಹೊರಗೆ ಉಳಿಯುತ್ತಿದ್ದಾರೆ” ಎಂದು ಅವರು ಹೇಳಿದರು.
ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುವ ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಸವಾಲುಗಳ ಬಗ್ಗೆ ಮಾತನಾಡಿದ ಮದ್ರಾಸ್ ಹೈಕೋರ್ಟ್ ವಕೀಲೆ ಗೀತಾ ರಮೇಶನ್ ಅವರು “ಪುರುಷ ಸಹೋದ್ಯೋಗಿಗಳಿಗೆ ಹೋಲಿಸಿದರೆ ಮಹಿಳಾ ವಕೀಲರು ಹೆಚ್ಚು ಬೇಡಿಕೆಯಲ್ಲಿದ್ದಾರೆ. ಏಕೆಂದರೆ ಮಹಿಳಾ ವಕೀಲರು ಹೆಚ್ಚು ಸಮರ್ಥರಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸಿದರು.
ಜಿಂದಾಲ್ ಗ್ಲೋಬಲ್ ಕಾನೂನು ಶಾಲೆಯ ಪ್ರಾಧ್ಯಾಪಕಿ ಝುಮಾ ಸೇನ್ ಅವರು ಆರಂಭಿಕ ಕಾಲಘಟ್ಟದ ಮಹಿಳಾ ವಕೀಲರು ಪ್ರತಿಕೂಲ ಸಂದರ್ಭಗಳನ್ನು ನಿಭಾಯಿಸಿ ತಮ್ಮ ಕಾಲಕ್ಕೆ ಗಮನಾರ್ಹವಾಗಿದ್ದ ತಮ್ಮ ಮೈಲುಗಲ್ಲನ್ನು ಹೇಗೆ ರೂಪಿಸಿಕೊಂಡರು ಎಂಬುದನ್ನು ವಿವರಿಸಿದರು.