<div class="paragraphs"><p>Phone Call to AOR</p></div>

Phone Call to AOR

 
ಸುದ್ದಿಗಳು

ಪ್ರಧಾನಿ ಭದ್ರತಾ ಲೋಪ ಪ್ರಕರಣದ ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್‌ಗೆ ಎಚ್ಚರಿಕೆ ನೀಡಿ ಎಒಆರ್‌ಗಳಿಗೆ ಬೆದರಿಕೆ ಕರೆ

Bar & Bench

ಪಂಜಾಬ್‌ನ ಹುಸೇನಿವಾಲಾ ಮೇಲ್ಸೇತುವೆ ಮೇಲೆ ಉಂಟಾದ ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣೆಯಲ್ಲಿನ ಭದ್ರತಾ ಲೋಪಕ್ಕೆ ತಾನೇ ಕಾರಣ ಎಂದು ಹೊಣೆ ಹೊತ್ತು ಇಂಗ್ಲೆಂಡ್‌ನಿಂದ ಅನಾಮಧೇಯ ಯಾಂತ್ರಿಕ ಕರೆಯೊಂದು ಹಲವು ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ಗಳಿಗೆ (ಎಒಆರ್‌) ಇಂದು ಬೆಳಿಗ್ಗೆ 10.40ರ ಸುಮಾರಿಗೆ ಬಂದಿದೆ.

ಭದ್ರತಾ ಲೋಪದ ತನಿಖೆ ನಡೆಸುವಂತೆ ಕೋರಿ ಲಾಯರ್ಸ್‌ ವಾಯ್ಸ್‌ ಸರ್ಕಾರೇತರ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸದಂತೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ಕರೆಯಲ್ಲಿ ಎಚ್ಚರಿಕೆ ನೀಡಲಾಗಿದೆ. 'ಸಿಖ್ಸ್‌ ಫಾರ್ ಜಸ್ಟೀಸ್‌' ಎಂಬ ಸಂಘಟನೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಳ್ಳಲಾಗಿದ್ದು ಭದ್ರತಾ ವೈಫಲ್ಯಕ್ಕೆ ತಾನೇ ಹೊಣೆ ಎಂದು ಕರೆಯಲ್ಲಿ ಘೋಷಿಸಿಕೊಳ್ಳಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1984ರಲ್ಲಿ ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾಗಿದ್ದಕ್ಕೆ ಪ್ರತೀಕಾರವಾಗಿ ಸಾವಿರಾರು ಸಿಖ್ಖರನ್ನು ಕೊಂದ ಘಟನೆಯ ಬಗ್ಗೆ ಸುಪ್ರೀಂಕೋರ್ಟ್‌ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರೆ ತಿಳಿಸಿದೆ.

ಭದ್ರತಾ ಲೋಪಕ್ಕೆ ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆರೋಪಿಸಿವೆ. ಆದರೆ ಪ್ರಧಾನಿ ಕೊನೆ ಘಳಿಗೆಯಲ್ಲಿ ತಮ್ಮ ಮಾರ್ಗ ಬದಲಿಸಿದ್ದಾರೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ. ಇಂದು ನ್ಯಾಯಾಲಯದಲ್ಲಿ ಲಾಯರ್ಸ್‌ ವಾಯ್ಸ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಘಟನೆಯ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ.