Supreme Court, Exams

 
ಸುದ್ದಿಗಳು

[ಬೋರ್ಡ್‌ ಪರೀಕ್ಷೆಗಳು] ಭೌತಿಕ ಪರೀಕ್ಷೆ ವಿರೋಧಿಸಿರುವ ಅರ್ಜಿ; ನಾಳೆ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌

ಒಂದಿಲ್ಲೊಂದು ಸಮಸ್ಯೆಗಳು ಕಳೆದ ಎರಡು ವರ್ಷದಿಂದ ಬಾಧಿಸುತ್ತಿವೆ. ಕೋವಿಡ್‌ ಪರಿಸ್ಥಿತಿ ಉತ್ತಮವಾಗಿದ್ದರೂ ಆಫ್‌ಲೈನ್‌ (ಭೌತಿಕ) ತರಗತಿಗಳು ವಿದ್ಯಾರ್ಥಿಗಳಿಗೆ ನಡೆದಿಲ್ಲ ಎನ್ನುವುದು ಅರ್ಜಿದಾರರ ಅಳಲು.

Bar & Bench

ಐಸಿಎಸ್‌ಸಿ, ಸಿಬಿಎಸ್‌ಸಿ ಸೇರಿದಂತೆ ರಾಜ್ಯ ಪರೀಕ್ಷಾ ಮಂಡಳಿಗಳು ನಡೆಸುವ ಹತ್ತು ಮತ್ತು ಹನ್ನೆರಡನೇ ತರಗತಿಯ ಪರೀಕ್ಷೆಗಳನ್ನು ಭೌತಿಕವಾಗಿ ನಡೆಸದೆ ಇರಲು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರಿಂ ಕೋರ್ಟ್‌ ನಾಳೆ (ಬುಧವಾರ) ನಡೆಸಲಿದೆ.

ನ್ಯಾ. ಎ ಎಂ ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠದ ಮುಂದೆ ಮಂಗಳವಾರ ವಕೀಲ ಪ್ರಶಾಂತ್‌ ಪದ್ಮನಾಭನ್ ಅವರು ಪ್ರಕರಣವನ್ನು ಉಲ್ಲೇಖಿಸಿದರು. "ಒಂದಿಲ್ಲೊಂದು ಸಮಸ್ಯೆಗಳು ಕಳೆದ ಎರಡು ವರ್ಷದಿಂದ ಬಾಧಿಸುತ್ತಿವೆ. ಕೋವಿಡ್‌ ಪರಿಸ್ಥಿತಿ ಉತ್ತಮವಾಗಿದ್ದರೂ ಆಫ್‌ಲೈನ್‌ (ಭೌತಿಕ) ತರಗತಿಗಳು ವಿದ್ಯಾರ್ಥಿಗಳಿಗೆ ನಡೆದಿಲ್ಲ," ಎಂದು ಪದ್ಮನಾಭನ್‌ ಪೀಠದ ಮುಂದೆ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಸಿಬಿಎಸ್‌ಸಿ ಕುರಿತಾದ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದರು. ನಾಳೆ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಹೇಳಿದರು. ನಾಳೆ ನಡೆಯುವ ವಿಚಾರಣೆಯು ಸಿಬಿಎಸ್‌ಸಿ ಪರೀಕ್ಷೆಗಳಿಗಷ್ಟೇ ಸೀಮಿತವಾಗಿರಲಿದೆ.

ವಿವಿಧ ರಾಜ್ಯ ಪರೀಕ್ಷಾ ಮಂಡಳಿಗಳು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಂಡಳಿಗಳು ಹತ್ತು ಮತ್ತು ಹನ್ನೆರಡನೇ ತರಗತಿಗಳಿಗೆ ಭೌತಿಕ ಪರೀಕ್ಷೆಗಳ ನಡೆಸುವುದನ್ನು ವಿರೋಧಿಸಿ ಪರ್ಯಾಯ ಮೌಲ್ಯಮಾಪನ ವಿಧಾನ ಜಾರಿಗೆ ತರುವಂತೆ ಕೋರಿ ದೇಶದ ಹದಿನೈದಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪ್ರಕರಣದ ಕುರಿತು ನಿನ್ನೆ ಸಿಜೆಐ ಎನ್‌ ವಿ ರಮಣ ಅವರ ಪೀಠದ ಮುಂದೆ ಉಲ್ಲೇಖಿಸಲಾಗಿತ್ತು. ಸಿಜೆಐ ಅವರು ಪ್ರಕರಣವನ್ನು ನ್ಯಾ. ಎ ಎಂ ಖಾನ್ವಿಲ್ಕರ್‌ ಅವರ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡುವಂತೆ ಸೂಚಿಸಿದ್ದರು.