ಫ್ಯೂಚರ್ – ರಿಲಯನ್ಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ಯೂಚರ್ ಸಮೂಹ ಸಂಸ್ಥೆಗಳು ಮತ್ತು ಕಿಶೋರ್ ಬಿಯಾನಿ ಆಸ್ತಿ ವಶಕ್ಕೆ ಪಡೆಯದಂತೆ ತಡೆ ನೀಡಿ ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇ-ಕಾಮರ್ಸ್ ದೈತ್ಯ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪುರಸ್ಕರಿಸಿದೆ. ಇದರಿಂದಾಗಿ ಫ್ಯೂಚರ್ - ರಿಲಯನ್ಸ್ ಒಪ್ಪಂದವನ್ನು ಪ್ರಶ್ನಿಸಿದ್ದ ಬಹುರಾಷ್ಟ್ರೀಯ ಕಂಪೆನಿ ಅಮೆಜಾನ್‌ಗೆ ನ್ಯಾಯ ಪ್ರಕ್ರಿಯೆಯಲ್ಲಿ ಜಯವಾಗಿದೆ.
ಮಧ್ಯಸ್ಥಿಕೆದಾರರ ಕಾಯಿದೆ ಸೆಕ್ಷನ್ 17(2)ರ ಅನ್ವಯ ಮುಕೇಶ್ ಅಂಬಾನಿ ಅವರ ರಿಲಯನ್ಸ್ ರಿಟೇಲ್ ಜೊತೆ ಫ್ಯೂಚರ್ ರಿಟೇಲ್ ವಿಲೀನ ಮಾಡದಂತೆ ಸಿಂಗಪುರ್ ತುರ್ತು ಮಧ್ಯಸ್ಥಿಕೆ ಮಂಡಳಿ ತಡೆ ಹಿಡಿದಿರುವ ಕ್ರಮ ಭಾರತದಲ್ಲಿ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ಬಿ ಆರ್ ಗವಾಯಿ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
“ನಾವು ಎರಡು ಪ್ರಶ್ನೆಗಳನ್ನು ಎತ್ತಿದ್ದು ಅವುಗಳಿಗೆ ಉತ್ತರಿಸಿದ್ದೇವೆ. ತುರ್ತು ಮಧ್ಯಸ್ಥಿಕೆದಾರರ ತೀರ್ಪು ಉತ್ತಮವಾಗಿದೆ. ಹೀಗಾಗಿ ಅದನ್ನು ಸೆಕ್ಷನ್ 17(2)ರ ಅಡಿ ಜಾರಿ ಮಾಡಬಹುದಾಗಿದೆ. ಅಲ್ಲದೇ ಮೇಲ್ಮನವಿಯನ್ನು ಪುರಸ್ಕರಿಸಿದ್ದೇವೆ” ಎಂದು ತೀರ್ಪು ಓದಿದ ನ್ಯಾ. ನಾರಿಮನ್ ಅವರು ಹೇಳಿದರು.
ತುರ್ತು ಮಧ್ಯಸ್ಥಿಕೆದಾರರ ತೀರ್ಪು ಆಧರಿಸಿ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಫ್ಯೂಚರ್ – ರಿಲಯನ್ಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ಯೂಚರ್ ಸಮೂಹ ಕಂಪೆನಿಗಳು ಮತ್ತು ಕಿಶೋರ್ ಬಿಯಾನಿ ಆಸ್ತಿಗಳನ್ನು ವಶಕ್ಕೆ ಪಡೆಯುವಂತೆ ಆದೇಶ ಮಾಡಿದ್ದಕ್ಕೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ತಡೆ ನೀಡಿತ್ತು.
ತುರ್ತು ಮಧ್ಯಸ್ಥಿಕೆ ಮಂಡಳಿ ತೀರ್ಪನ್ನು ಎತ್ತಿ ಹಿಡಿದಿದ್ದ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಆಸ್ತಿ ವಶಕ್ಕೆ ಪಡೆಯಲು ಆದೇಶಿಸಿತ್ತಲ್ಲದೇ ರಿಲಯನ್ಸ್ ರಿಟೇಲ್ ಜೊತೆ ₹24,713 ಕೋಟಿ ವಿಲೀನ ಪ್ರಕ್ರಿಯೆ ಮುಂದುವರಿಸದಂತೆ ಫ್ಯೂಚರ್ ರಿಟೇಲ್ ಲಿಮಿಟೆಡ್‌ಗೆ ನಿರ್ಬಂಧಿಸಿತ್ತು. ಇದಕ್ಕೆ ವಿಭಾಗೀಯ ಪೀಠ ತಡೆ ನೀಡಿದ್ದರಿಂದ ಅಮೆಜಾನ್ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ತುರ್ತು ಮಧ್ಯಸ್ಥಿಕೆದಾರ ಮಂಡಳಿ ತೀರ್ಪನ್ನು ಮಧ್ಯಸ್ಥಿಕೆದಾರರು ಮತ್ತು ಸಂಧಾನ ಕಾಯಿದೆ 1996ರ ಸೆಕ್ಷನ್ 17(1) ಒಳಗೊಳ್ಳಲಿದೆಯೇ ಮತ್ತು ಇದನ್ನು ಸೆಕ್ಷನ್ 17(2) ಅಡಿ ಜಾರಿ ಮಾಡಬಹುದೇ ಎಂಬ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಾಗುವುದು ಎಂದು ಪೀಠವು ಹೇಳಿತ್ತು. ಇದೀಗ ತೀರ್ಪಿನಲ್ಲಿ ನ್ಯಾಯಾಲಯವು ಈ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸಿದೆ.