ಭಾರತೀಯ ಸ್ಪರ್ಧಾ ಅಯೋಗ (ಸಿಸಿಐ) ತನಿಖೆಯನ್ನು ಪ್ರಶ್ನಿಸಿ ತಾವು ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ-ವಾಣಿಜ್ಯ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿದೆ. ಸ್ಪರ್ಧಾ ಕಾನೂನುಗಳ ಉಲ್ಲಂಘನೆಯ ಕುರಿತಾಗಿ ಈ ಎರಡೂ ಸಂಸ್ಥೆಗಳ ವಿರುದ್ಧ ತನಿಖೆಗೆ ಆಗ್ರಹಿಸಲಾಗಿತ್ತು.
ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮ ಹಾಗೂ ನಟರಾಜ್ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠವು ಇ-ವಾಣಿಜ್ಯ ದೈತ್ಯ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳು ಏಕಸದಸ್ಯ ಪೀಠದ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಅಂತಿಮವಾಗಿ, ಏಕಸದಸ್ಯ ಪೀಠವು ಜೂ.11ರಂದು ನೀಡಿದ್ದ ಆದೇಶವನ್ನು ಎತ್ತಿಹಿಡಿದ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ಹೇಳಿತು.
ಈ ವೇಳೆ ಪೀಠವು, “ಈ ಹಂತದಲ್ಲಿ ಯಾವುದೇ ರೀತಿಯಲ್ಲಿ ಊಹಿಸಿದರೂ ಸಹ ತನಿಖೆಯನ್ನು ರದ್ದುಗೊಳಿಸಲಾಗದು… ಸಿಸಿಐ ನಡೆಸುವ ತನಿಖೆಯ ಬಗ್ಗೆ ಮನವಿದಾರರು ಹೆದರಬೇಕಾದ ಅಗತ್ಯವಿಲ್ಲ… ಮನವಿದಾರರು ಸಲ್ಲಿಸಿರುವ ಮನವಿಯು ಅರ್ಹತೆಯಿಂದ ಕೂಡಿಲ್ಲವಾಗಿದ್ದು ವಜಾಗೊಳಿಸಲು ಯೋಗ್ಯವಾಗಿದೆ ಎನ್ನುವುದು ನ್ಯಾಯಾಲಯದ ಪರಿಶೀಲಿತ ಅಭಿಪ್ರಾಯವಾಗಿದೆ…” ಎಂದಿತು. ಪ್ರಕರಣದ ಸಂಬಂಧ ಆದೇಶವನ್ನು ಜೂ.25ರಂದು ನೀಡಲಾಗುವುದು ಎಂದು ಪೀಠವು ತಿಳಿಸಿತ್ತು.
ತನ್ನ ಆನ್‌ಲೈನ್ ವೇದಿಕೆಯಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಸಂಬಂಧಿಸಿದಂತೆ ಸ್ಪರ್ಧಾ ವಿರೋಧಿ ನಡೆ ಅನುಸರಿಸುತ್ತಿರುವುದನ್ನು ತನಿಖೆ ಮಾಡುವಂತೆ ಸಂಸ್ಥೆಯ ಮಹಾ ನಿರ್ದೇಶಕರಿಗೆ ಸಿಸಿಐ ಆದೇಶಿಸಿದ್ದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಅಮೆಜಾನ್ ಪ್ರಶ್ನಿಸಿತ್ತು.
ಇ ಕಾಮರ್ಸ್ ದೈತ್ಯ ಕಂಪೆನಿಗಳು ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿಯಲ್ಲಿ ಬೆಲೆ ನಿಗದಿ ಮಾಡಿವೆ, ಭಾರಿ ರಿಯಾಯಿತಿ, ಆದ್ಯತೆಯ ಮಾರಾಟಗಾರರ ಪಟ್ಟಿ ಮತ್ತು ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಇತ್ಯಾದಿ ಹಲವು ಆರೋಪಗಳ ಕುರಿತು ಸಿಸಿಐಗೆ ಈ ಹಿಂದೆ ದೆಹಲಿ ವ್ಯಾಪಾರ ಮಹಾಸಂಘ (ಡಿವಿಎಂ) ದೂರು ನೀಡಿತ್ತು. ಡಿವಿಎಂ ಸಂಘಟನೆ ಅನೇಕ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ನಡೆಸುವ ವ್ಯಾಪಾರಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದ್ದು ಸ್ಮಾರ್ಟ್‌ಫೋನ್ ಮತ್ತು ಸಂಬಂಧಿತ ಪರಿಕರಗಳ ವ್ಯಾಪಾರವನ್ನೂ ಅವರು ಅವಲಂಬಿಸಿದ್ದಾರೆ.
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿದ್ದ ಮನವಿಯನ್ನು ಜೂನ್ 11ರಂದು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ವಜಾ ಮಾಡಿತ್ತು. ಇದನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.