Eknath Shinde, Uddhav Thackeray with Supreme Court
Eknath Shinde, Uddhav Thackeray with Supreme Court  
ಸುದ್ದಿಗಳು

ಅಸಲಿ ಶಿವಸೇನೆ ವಿವಾದ: ಏಕನಾಥ್ ಶಿಂಧೆ ಬಣದ ಮನವಿ ನಿರ್ಧರಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bar & Bench

ತಮ್ಮದೇ ಅಸಲಿ ಶಿವಸೇನೆ ಎಂದು ಪ್ರತಿಪಾದಿಸಿ, ಶಿವಸೇನೆ ಪಕ್ಷದ ಚಿಹ್ನೆಯಾದ ಬಿಲ್ಲು ಬಾಣವನ್ನು ತಮಗೆ ನೀಡಬೇಕು ಎಂದು ಕೋರಿರುವ ಏಕನಾಥ್ ಶಿಂಧೆ ಬಣದ ಮನವಿಯನ್ನು ನಿರ್ಧರಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮತಿ ನೀಡುವುದರೊಂದಿಗೆ ಉದ್ಧವ್‌ ಠಾಕ್ರೆ ಬಣಕ್ಕೆ ತೀವ್ರ ಹಿನ್ನೆಡೆಯಾಗಿದೆ.

ಶಿಂಧೆ ಪಾಳಯಕ್ಕೆ ಸೇರಿದ ಶಾಸಕರ ಅನರ್ಹತೆಗೆ ಕುರಿತಾದ ಅರ್ಜಿಯನ್ನು ಮನವಿಯನ್ನು ಸುಪ್ರೀಂ ಕೋರ್ಟ್ ನಿರ್ಧರಿಸುವವರೆಗೆ ಚುನಾವಣಾ ಆಯೋಗದ ಪ್ರಕ್ರಿಯೆಗಳಿಗೆ ತಡೆ ನೀಡುವಂತೆ ಕೋರಿ ಠಾಕ್ರೆ ಬಣ ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಂ ಆರ್‌ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ತಿರಸ್ಕರಿಸಿತು.

"ಚುನಾವಣಾ ಆಯೋಗದ ಮುಂದೆ ನಡೆಯುವ ಪ್ರಕ್ರಿಯೆಗಳಿಗೆ ಯಾವುದೇ ತಡೆಯಾಜ್ಞೆ ಇರಬಾರದು ಎಂದು ನಾವು ನಿರ್ದೇಶಿಸುತ್ತೇವೆ. ತಡೆ ಕೋರಿ ಸಲ್ಲಿಸಲಾದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠ ಹೇಳಿದೆ.

ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆಲಿಸಿದ್ದು ಅದಕ್ಕೆ ಸಂಬಂಧಿಸದಂತೆ ಇನ್ನೂ ಅನೇಕ ಪ್ರಕರಣಗಳು ಬಾಕಿ ಇರುವುದರಿಂದ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪೀಠ ಮೌಖಿಕವಾಗಿ ಹೇಳಿದ್ದನ್ನು ಇಸಿಐಗೆ ತಿಳಿಸಿದ್ದೆವು. ಅಲ್ಲದೆ ಆತುರದ ಕ್ರಮ ಕೈಗೊಳ್ಳದಂತೆ ಹೇಳಿದ್ದನ್ನು ಕೂಡ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿತ್ತು ಎಂದು ಠಾಕ್ರೆ ಬಣ ವಾದಿಸಿತ್ತು.

ಇಸಿಐಗೆ ವಿಚಾರಣೆ ಮುಂದುವರೆಸಲು ಅವಕಾಶ ನೀಡಿದರೆ ಅದು ಸಾಂವಿಧಾನಿಕ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ಅರ್ಜಿದಾರರಾದ ತಮಗೆ ಸರಿಪಡಿಸಲು ಅಸಾಧ್ಯವಾದ ಧಕ್ಕೆ ಉಂಟು ಮಾಡುತ್ತದೆ. ಇದರಿಂದ ನ್ಯಾಯಾಂಗ ವಿಚಾರಣೆಯಲ್ಲಿ ಇಸಿಐ ಮೂಗು ತೂರಿಸಿದಂತಾಗುತ್ತದೆ. ಇದು ನ್ಯಾಯಾಂಗ ನಿಂದನೆಗೂ ಕಾರಣವಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.