ಅಸಲಿ ಶಿವಸೇನೆ ವಿವಾದ: ಚುನಾವಣಾ ಆಯೋಗದ ಕ್ರಮಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಉದ್ಧವ್ ಬಣ

ಚುನಾವಣಾ ಆಯೋಗದ ಮುಂದಿರುವ ಪ್ರಕ್ರಿಯೆಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಗಳ ಪಾವಿತ್ರ್ಯಕ್ಕೆ ಹಾಗೂ ಆಯೋಗದ ಅಪೇಕ್ಷಿತ ಪಾತ್ರಕ್ಕೆ ಅಗೌರವ ಸೂಚಿಸುವಂತಿದೆ ಎಂದು ಆಕ್ಷೇಪ.
Eknath Shinde, Uddhav Thackeray with Supreme Court
Eknath Shinde, Uddhav Thackeray with Supreme Court

ತಮ್ಮದೇ ನೈಜ ಶಿವಸೇನೆ ಎಂದು ಘೋಷಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಸಲ್ಲಿಸಿರುವ ಮನವಿ ಮೇರೆಗೆ ಕೇಂದ್ರ ಚುನಾವಣಾ ಆಯೋಗ (ಇಸಿಐ) ಆರಂಭಿಸಿರುವ ಪ್ರಕ್ರಿಯೆಗಳಿಗೆ ತಡೆ ನೀಡುವಂತೆ ಶಿವಸೇನೆಯ ಉದ್ಧವ್‌ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ [ಸುಭಾಷ್‌ ದೇಸಾಯಿ ಮತ್ತು ಪ್ರಧಾನ ಕಾರ್ಯದರ್ಶಿ ನಡುವಣ ಪ್ರಕರಣ].

ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆಲಿಸಿದ್ದು ಅದಕ್ಕೆ ಸಂಬಂಧಿಸದಂತೆ ಇನ್ನೂ ಅನೇಕ ಪ್ರಕರಣಗಳು ಬಾಕಿ ಇರುವುದರಿಂದ ಪ್ರಕರಣದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಪೀಠ ಮೌಖಿಕವಾಗಿ ಹೇಳಿದ್ದನ್ನು ಇಸಿಐಗೆ ತಿಳಿಸಿದ್ದೆವು. ಅಲ್ಲದೆ ಆತುರದ ಕ್ರಮ ಕೈಗೊಳ್ಳದಂತೆ ಹೇಳಿದ್ದನ್ನು ಕೂಡ ಚುನಾವಣಾ ಆಯೋಗದ ಗಮನಕ್ಕೆ ತರಲಾಗಿತ್ತು. ಇಷ್ಟಾದರೂ ಜುಲೈ 22 ರಂದು ತಮಗೆ ಇಸಿಐ ನೋಟಿಸ್ ನೀಡಿದೆ. ಚುನಾವಣಾ ಆಯೋಗ ಕ್ರಮ ಕೈಗೊಂಡರೆ ಅದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಗಳ ಪಾವಿತ್ರ್ಯಕ್ಕೆ ಧಕ್ಕೆ ತಂದಂತಾಗುತ್ತದೆ ಮತ್ತು ಸಾಂವಿಧಾನಿಕ ಸಂಸ್ಥೆಯಾಗಿ ಚುನಾವಣಾ ಆಯೋಗದ ಅಪೇಕ್ಷಿತ ಪಾತ್ರವನ್ನು ಸಂಪೂರ್ಣ ಕಡೆಗಣಿಸಿದಂತಾಗುತ್ತದೆ ಎಂದು ಉದ್ಧವ್‌ ಠಾಕ್ರೆ ಬಣ ಪ್ರತಿಪಾದಿಸಿದೆ.

ಇಸಿಐಗೆ ವಿಚಾರಣೆಯನ್ನು ಮುಂದುವರಿಸಲು ಅವಕಾಶ ನೀಡಿದರೆ ಅದು ಸಾಂವಿಧಾನಿಕ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ಅರ್ಜಿದಾರರಾದ ತಮಗೆ ಸರಿಪಡಿಸಲಸಾಧ್ಯವಾದ ಧಕ್ಕೆ ಉಂಟು ಮಾಡುತ್ತದೆ. ಅಲ್ಲದೆ ನ್ಯಾಯಾಂಗ ವಿಚಾರಣೆಯಲ್ಲಿ ಇಸಿಐ ಮೂಗು ತೂರಿಸಿದಂತಾಗುತ್ತದೆ. ಇದು ನ್ಯಾಯಾಂಗ ನಿಂದನೆಗೂ ಕಾರಣವಾಗುತ್ತದೆ ಎಂದು ಅರ್ಜಿ ತಿಳಿಸಿದೆ.

Also Read
[ಮಹಾ ರಾಜಕಾರಣ] ಮುಖ್ಯಮಂತ್ರಿ ಬದಲಾದ ಮಾತ್ರಕ್ಕೆ ದೇವಲೋಕ ಬೀಳದು ಎಂದ ಸಾಳ್ವೆ; ಇದು 'ಯೋಜಿತ ಬಹುಮತ'ವೆಂದ ಸಿಂಘ್ವಿ

ಹೀಗಾಗಿ ಇಸಿಐ ಪ್ರಕ್ರಿಯೆಗಳಿಗೆ ತಡೆ ನೀಡಬೇಕು ಅಲ್ಲದೆ ಪ್ರತಿಕೂಲ ಆದೇಶಗಳನ್ನು ತಡೆಯುವ ನಿಟ್ಟಿನಲ್ಲಿ ಇಸಿಐಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿರುವ ಪ್ರಕರಣಗಳಲ್ಲಿ ಪಕ್ಷಕಾರನಾಗಿ ಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಲಾಗಿದೆ.

Also Read
ಮಹಾರಾಷ್ಟ್ರ ಬಿಕ್ಕಟ್ಟು: ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ನಕಾರ

ವಿಧಾನಸಭೆ ಉಪ ಸ್ಪೀಕರ್‌ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಶಿಂಧೆ ಹಾಗೂ ಇತರ 14 ಶಾಸಕರು ಸಲ್ಲಿಸಿದ್ದ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಕಳೆದ ವಾರ ನೋಟಿಸ್‌ ನೀಡಿ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಿತ್ತು. ಆಗಸ್ಟ್ 1ಕ್ಕೆ ಪ್ರಕರಣ ಮುಂದೂಡಿತ್ತು.

ಈ ತಿಂಗಳ ಆರಂಭದಲ್ಲಿ, 53 ಶಿವಸೇನಾ ಶಾಸಕರಿಗೆ ನೀಡಲಾದ ಹೊಸ ಅನರ್ಹತೆಯ ನೋಟಿಸ್‌ಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಮಹಾರಾಷ್ಟ್ರ ವಿಧಾನಸಭೆಯ ಹೊಸ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ನ್ಯಾಯಾಲಯ ಸೂಚಿಸಿತ್ತು.

Related Stories

No stories found.
Kannada Bar & Bench
kannada.barandbench.com