ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಅಶ್ಲೀಲ ಮತ್ತು ಅಸಭ್ಯ ಹೇಳಿಕೆ ನೀಡಿದ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಯೂಟ್ಯೂಬರ್ ರಣವೀರ್ ಅಲಾಹಾಬಾದಿಯಾ (ಬೀರ್ ಬೈಸೆಪ್ಸ್) ಅವರು ಪಾಡ್‌ಕಾಸ್ಟ್‌ಗಳಿಗೆ ಸಂಬಂಧಿಸಿದಂತೆ ವಿದೇಶ ಪ್ರಯಾಣ ಕೈಗೊಳ್ಳಲು ಅನುವು ಮಾಡಿಕೊಡುವುದಕ್ಕಾಗಿ ಅವರ ಪಾಸ್‌ಪೋರ್ಟ್ ಮರಳಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
ವಿವಾದಾತ್ಮಕ ಹೇಳಿಕೆಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಗಳ ತನಿಖೆಯ ಬೆನ್ನಿಗೇ ತನ್ನ ಪಾಸ್ಪೋರ್ಟ್ ಒಪ್ಪಿಸುವಂತೆ ಅಲಹಾಬಾದಿಯಾಗೆ ಈ ಹಿಂದೆ ಸೂಚಿಸಲಾಗಿತ್ತು.
ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಒಗ್ಗೂಡಿಸಿ ಆಲಿಸುವಂತೆ ಅಲಾಹಾಬಾದಿಯಾ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಈ ಹಿಂದೆ ವಿವಿಧ ಷರತ್ತುಗಳಿಗೆ ಒಳಪಟ್ಟು ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು. ಆಗ ವಿಧಿಸಲಾದ ಷರತ್ತುಗಳಲ್ಲಿ ನ್ಯಾಯಾಲಯದ ಅನುಮತಿಯಿಲ್ಲದೆ ಭಾರತವನ್ನು ತೊರೆಯಬಾರದು ಎಂಬುದೂ ಸೇರಿತ್ತು.
ಅಲಾಹಾಬಾದಿಯಾ ವಿರುದ್ಧದ ಪೊಲೀಸ್ ತನಿಖೆ ಪೂರ್ಣಗೊಂಡಿರುವುದರಿಂದ ಅವರ ಪಾಸ್‌ಪೋರ್ಟ್ ಮರಳಿಸುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೆ ಸಿಂಗ್ ಅವರಿದ್ದ ಪೀಠ ಇಂದು ಆದೇಶಿಸಿದೆ. ತನಿಖೆಯ ಹಂ ಪರಿಗಣಿಸಿ, ನ್ಯಾಯಾಲಯ ಅಲಾಹಾಬಾದಿಯಾ ವಿರುದ್ಧ ಹೇರಲಾಗಿದ್ದ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
"ಅರ್ಜಿದಾರರು ತಮ್ಮ ಪಾಸ್‌ಪೋರ್ಟ್ ಬಿಡುಗಡೆ ಕೋರಿ ಮಹಾರಾಷ್ಟ್ರ ಸೈಬರ್ ಅಪರಾಧ ಬ್ಯೂರೋಗೆ ಅರ್ಜಿ ಸಲ್ಲಿಸಲು ನಾವು ಅನುಮತಿ ನೀಡುತ್ತೇವೆ. ಅಂತಹ ಅರ್ಜಿಗೆ ಸಂಬಂಧಿಸಿದಂತೆ ಸಮಂಜಸವಾದ ನಿಯಮಗಳು ಮತ್ತು ಷರತ್ತು ವಿಧಿಸಿ ಪಾಸ್‌ಪೋರ್ಟ್ ಅನ್ನು ಹಿಂತಿರುಗಿಸಲಿ. ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗುವಂತೆ ಪಾಸ್‌ಪೋರ್ಟ್ ಹಿಂತಿರುಗಿಸಲು ಆದೇಶಿಸಲಾಗಿದೆ " ಎಂದು ಪೀಠ ಆದೇಶಿಸಿತು.
ಅಲಾಹಾಬಾದಿಯಾ ಮತ್ತೆ ಪೊಲೀಸರ ಮುಂದೆ ಹಾಜರಾಗಬೇಕಾದರೆ, ಅವರು ಇದನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರ ಯೂಟ್ಯೂಬರ್ ಪರವಾಗಿ ವಕೀಲ ಅಭಿನವ್ ಚಂದ್ರಚೂಡ್ ವಾದ ಮಂಡಿಸಿದರು.