Yasin Malik in prison 
ಸುದ್ದಿಗಳು

ದೆಹಲಿಯ ತಿಹಾರ್ ಜೈಲಿನಿಂದಲೇ ಯಾಸಿನ್ ಮಲಿಕ್ ವರ್ಚುವಲ್ ವಿಚಾರಣೆಗೆ ಸುಪ್ರೀಂ ಸಮ್ಮತಿ

ಯಾಸಿನ್ ಮಲಿಕ್ ವರ್ಚುವಲ್ ವಿಧಾನದಲ್ಲಿ ಸಾಕ್ಷಿಗಳ ಪಾಟಿಸವಾಲು ನಡೆಸಬಹುದಾಗಿದ್ದು ಈಗಿರುವ ವಿಡಿಯೋ ಕಾನ್ಫರೆನ್ಸ್ ಮೂಲಸೌಕರ್ಯ ಗಮನಿಸಿದರೆ ಜಮ್ಮುವಿನಲ್ಲಿ ಆತನ ಭೌತಿಕ ಹಾಜರಾತಿ ಅನಗತ್ಯ ಎಂದು ನ್ಯಾಯಾಲಯ ಹೇಳಿದೆ.

Bar & Bench

ಭಾರತೀಯ ವಾಯುಪಡೆಯ (ಐಎಎಫ್‌) ನಾಲ್ವರು ಸಿಬ್ಬಂದಿ ಹತ್ಯೆಗೆ ಸಂಬಂಧಿಸಿದಂತೆ ಜಮ್ಮು ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ನನ್ನು ದೆಹಲಿಯ ತಿಹಾರ್‌ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.

ಮಲಿಕ್ ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಟಿ ಸವಾಲು ಮಾಡಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಹೇಳಿದೆ.

ಈ ನಿಟ್ಟಿನಲ್ಲಿ ಸಾಕ್ಷಿಗಳ ವಿಚಾರಣೆಗೆ ಮಲಿಕ್‌ ಖುದ್ದು ಹಾಜರಾತಿ ಕಡ್ಡಾಯಗೊಳಿಸಿ ಜಮ್ಮುವಿನ ಟಾಡಾ ನ್ಯಾಯಾಲಯ 2022ರಲ್ಲಿ ನೀಡಿದ್ದ ಆದೇಶವನ್ನು ಅದು ಮಾರ್ಪಡಿಸಿತು.

ದೆಹಲಿಯಾಚೆಗೆ ಮಲಿಕ್‌ ಪ್ರಯಾಣಿಸುವುದನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಮತ್ತು ಈಗಿರುವ ವಿಡಿಯೋ ಕಾನ್ಫರೆನ್ಸ್ ಮೂಲಸೌಕರ್ಯ ಗಮನಿಸಿದ ನ್ಯಾಯಾಲಯ ಯಾಸಿನ್‌ ಮಲಿಕ್‌ನನ್ನು ಭೌತಿಕವಾಗಿ ಕಳಿಸಿಕೊಡುವುದು ಅನಗತ್ಯ ಎಂದು ಅಭಿಪ್ರಾಯಪಟ್ಟಿತು.

ವಿಚಾರಣಾ ಪ್ರಕ್ರಿಯೆಗಳಲ್ಲಿ ಮಲಿಕ್ ಭೌತಿಕ ಉಪಸ್ಥಿತಿಗೆ ಅವಕಾಶ ನೀಡಬೇಕೆಂಬ ಜಮ್ಮು ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಪೀಠದಲ್ಲಿ ನಡೆಯಿತು. ಏಪ್ರಿಲ್ 2023 ರಲ್ಲಿ, ಸುಪ್ರೀಂ ಕೋರ್ಟ್‌ ಈ ಆದೇಶಕ್ಕೆ ತಡೆ ನೀಡಿತ್ತು.  

 ನಾಲ್ವರು ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಯ ಹತ್ಯೆ ಹಾಗೂ 1989ರಲ್ಲಿ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅಪಹರಣಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಸಾಕ್ಷಿಗಳ ಪಾಟಿ ಸವಾಲಿಗೆ ಹಾಜರಾಗುವಂತೆ ಜಮ್ಮು ನ್ಯಾಯಾಲಯ ಮಲಿಕ್‌ಗೆ ಆದೇಶಿಸಿತ್ತು.

ಆದರೆ ದೆಹಲಿಯ ತಿಹಾರ್‌ ಜೈಲಿನಿಂದ ಜಮ್ಮುವಿಗೆ ಮಲಿಕ್‌ನನ್ನು ಕರೆದೊಯ್ಯುವುದಕ್ಕೆ ಸಂಬಂಧಿಸಿದಂತೆ ಭದ್ರತಾ ಅಪಾಯಗಳಿವೆ ಎಂದು ಸಿಬಿಐ ಆಕ್ಷೇಪಿಸಿತ್ತು.

ಮಲಿಕ್ ತನ್ನ ವಿರುದ್ಧದ ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿದ್ದು ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯಿದೆ (ಯುಎಪಿಎ) ಅಡಿಯ ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದು ತಿಹಾರ್‌ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.