ಯಾಸಿನ್ ತಪ್ಪಿಸಿಕೊಳ್ಳುತ್ತಿದ್ದ ಇಲ್ಲವೇ ಕೊಲೆಗೀಡಾಗುತ್ತಿದ್ದ: ಖುದ್ದು ಹಾಜರಿ ಬಗ್ಗೆ ಆಕ್ಷೇಪಿಸಿ ಎಸ್‌ಜಿ ಪತ್ರ

ಯಾಸಿನ್ ಖುದ್ದು ಹಾಜರಿಯಾಗುವುದನ್ನು ಸುಪ್ರೀಂ ಕೋರ್ಟ್ ಬಯಸಿರಲಿಲ್ಲ ಇಲ್ಲವೇ ಭೌತಿಕವಾಗಿ ಹಾಜರುಪಡಿಸಲು ಸುಪ್ರೀಂ ಕೋರ್ಟ್‌ನ ಯಾವುದೇ ಅಧಿಕಾರಿಯಿಂದ ಅನುಮತಿ ಪಡೆಯಲಾಗಿರಲಿಲ್ಲ ಎಂದು ಪತ್ರದಲ್ಲಿ ಎಸ್‌ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Yasin malik, SG Tushar Mehta and Supreme Court
Yasin malik, SG Tushar Mehta and Supreme Court
Published on

ಭಯೋತ್ಪಾದನೆ ಪ್ರಕರಣದ ತಪ್ಪಿತಸ್ಥ ಯಾಸಿನ್‌ ಮಲಿಕ್‌ನನ್ನು ಸುಪ್ರೀಂ ಕೋರ್ಟ್‌ಗೆ ಖುದ್ದು ಹಾಜರುಪಡಿಸುವ ಮೂಲಕ ಗಂಭೀರ ಭದ್ರತಾ ಲೋಪ ಎಸಗಲಾಗಿದೆ ಎಂದು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರಿಗೆ ಬರೆದ ಪತ್ರದಲ್ಲಿ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಶುಕ್ರವಾರ ಕಟುವಾಗಿ ಆಕ್ಷೇಪಿಸಿದ್ದು ಆತ ತಪ್ಪಿಸಿಕೊಳ್ಳುವ ಇಲ್ಲವೇ ಕೊಲೆಗೀಡಾಗುವ ಸಾಧ್ಯತೆ ಇತ್ತು ಎಂದಿದ್ದಾರೆ.  

ಜಮ್ಮುವಿನಲ್ಲಿ ನಡೆಯುವ ವಿಚಾರಣೆಗೆ ಮಲಿಕ್‌ನನ್ನು ಖುದ್ದು ಹಾಜರುಪಡಿಸಬೇಕು ಎಂದು ಜಮ್ಮುವಿನ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗಾಗಿ   ಸುಪ್ರೀಂ ಕೋರ್ಟ್‌ಗೆ ಯಾಸಿನ್‌ ಮಲಿಕ್‌ ಶುಕ್ರವಾರ ಭೌತಿಕವಾಗಿ ಹಾಜರಾಗಿದ್ದು ಕಳವಳಕ್ಕೆ ಕಾರಣವಾಗಿತ್ತು. ಮಲಿಕ್ ಖುದ್ದು ಹಾಜರಾತಿ ಬಗ್ಗೆ ಶುಕ್ರವಾರ ಬೆಳಗ್ಗೆ ಪ್ರಕರಣದ ವಿಚಾರಣೆ ನಡೆದಾಗ ಸುಪ್ರೀಂ ಕೋರ್ಟ್‌ ದಿಗ್ಭ್ರಮೆ ವ್ಯಕ್ತಪಡಿಸಿತ್ತು.

Also Read
ಸುಪ್ರೀಂನಲ್ಲಿ ಪ್ರತ್ಯೇಕತಾವಾದಿ ಯಾಸೀನ್‌ ಮಲಿಕ್‌ ಭೌತಿಕ ಹಾಜರಿ: ಕೇಂದ್ರ ಸರ್ಕಾರದ ಗಂಭೀರ ಆಕ್ಷೇಪ

ಘಟನೆಗೆ ಸಂಬಂಧಿಸಿದಂತೆ ಶುಕ್ರವಾರವೇ ಸಾಲಿಸಿಟರ್‌ ಜನರಲ್‌ ಅವರು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದು “ಯಾಸಿನ್‌ ಖುದ್ದು ಹಾಜರಿಯಾಗುವುದನ್ನು ಸುಪ್ರೀಂ ಕೋರ್ಟ್‌ ಬಯಸಿರಲಿಲ್ಲ. ಇಲ್ಲವೇ ಖುದ್ದು ಹಾಜರುಪಡಿಸಲು ಸುಪ್ರೀಂ ಕೋರ್ಟ್‌ನ ಯಾವುದೇ ಅಧಿಕಾರಿಯಿಂದ ಅನುಮತಿ ಪಡೆಯಲಾಗಿರಲಿಲ್ಲ" ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

“ಭಯೋತ್ಪದಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾತ್ರ ಯಾಸಿನ್‌ ತಪ್ಪಿತಸ್ಥನಾಗಿರಲಿಲ್ಲ. ಬದಲಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಆತ ತಪ್ಪಿಸಿಕೊಳ್ಳಬಹುದಿತ್ತು ಅಥವಾ  ಅವನನ್ನು ಬಲವಂತವಾಗಿ ಕರೆದೊಯ್ಯುವ ಸಾಧ್ಯತೆಗಳಿದ್ದವು ಇಲ್ಲವೇ ಆತ ಕೊಲೆಗೀಡಾಗಬಹುದಿತ್ತು” ಎಂದು ಎಸ್‌ಜಿ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

Also Read
ಮಲಿಕ್‌ ಮತ್ತು ಲಾಡೆನ್‌ ನಡುವಿನ ಹೋಲಿಕೆ ತರವಲ್ಲ, ಲಾಡೆನ್ ವಿಚಾರಣೆಯನ್ನು ಎದುರಿಸಲಿಲ್ಲ: ದೆಹಲಿ ಹೈಕೋರ್ಟ್

ಎಲ್ಲಾ ದಾವೆದಾರರಿಗೆ ಕಳಿಸುವ ಸಾಮಾನ್ಯ ನೋಟಿಸನ್ನೇ ಯಾಸಿನ್‌ಗೂ ಕಳಿಸಲಾಗಿದ್ದು ಇದು ಖುದ್ದು ಹಾಜರುಪಡಿಸಿಬೇಕೆಂದು ಎಲ್ಲಿಯೂ ಅಧಿಕೃತವಾಗಿ ಹೇಳುವುದಿಲ್ಲ ಇಲ್ಲವೇ ಅದಕ್ಕೆ ಅನುಮತಿಸುವುದೂ ಇಲ್ಲ. ಜೈಲು ಅಧಿಕಾರಿಗಳು ಪ್ರತಿದಿನ ಇಂತಹ ನೂರಾರು ಆದೇಶ ಇಲ್ಲವೇ ನೋಟಿಸ್‌ ಪಡೆಯುತ್ತಿದ್ದರೂ ಯಾವುದೇ ಆರೋಪಿ ಅಥವಾ ಅಪರಾಧಿಯ ಖುದ್ದು ಹಾಜರಿಯ ಅಗತ್ಯತೆಯ ಆದೇಶವನ್ನು ಅವರು ಅರ್ಥೈಸಿಕೊಂಡಂತಿಲ್ಲ. ಯಾವುದೇ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಸುಪ್ರೀಂ ಕೋರ್ಟ್‌ನ ಭದ್ರತೆಗೂ ಧಕ್ಕೆಯೊದಗುತ್ತಿತ್ತು ಎಂಬುದಾಗಿ ಪತ್ರ ಆತಂಕ ವ್ಯಕ್ತಪಡಿಸಿದೆ.

ಯಾಸಿನ್‌ ರೀತಿಯ ವ್ಯಕ್ತಿಗಳನ್ನು ಜೈಲಿನಿಂದ ಹೊರಗೆ ಕರೆದೊಯ್ಯುವುದನ್ನು ಸಿಆರ್‌ಪಿಸಿ ಸೆಕ್ಷನ್‌ 268ರಡಿ ನಿರ್ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯದ ಆದೇಶವಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‌ಜಿ ಅವರು ಗೃಹ ಕಾರ್ಯದರ್ಶಿಗಳನ್ನು ಕೋರಿದ್ದಾರೆ.

ನಾಲ್ವರು ಭಾರತೀಯ ವಾಯುಪಡೆ ಸಿಬ್ಬಂದಿಯ ಹತ್ಯೆ ಮತ್ತು 1989ರಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಪುತ್ರಿ ರುಬಯ್ಯ ಸಯೀದ್ ಅವರ ಅಪಹರಣ ಪ್ರಕರಣಗಳಲ್ಲಿ ಸಾಕ್ಷಿಗಳ ಪಾಟಿ ಸವಾಲಿಗಾಗಿ ಜಮ್ಮುವಿನ ವಿಶೇಷ ನ್ಯಾಯಾಲಯ ಖುದ್ದು ಹಾಜರಾಗುವಂತೆ ಯಾಸಿನ್‌ಗೆ ಸೂಚಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ ನೋಟಿಸ್‌ ನೀಡಿದ್ದ ಸುಪ್ರೀಂ ಕೋರ್ಟ್‌ ಯಾಸಿನ್‌ ಭೌತಿಕ ಹಾಜರಾತಿ ಸೂಚಿಸುವ ಆದೇಶಗಳಿಗೆ ತಡೆ ನೀಡಿತ್ತು.

Kannada Bar & Bench
kannada.barandbench.com