ಸುದ್ದಿಗಳು

ಲಖಿಂಪುರ್ ಖೇರಿ ಪ್ರಕರಣದ ತನಿಖೆಯ ಮೇಲ್ವಿಚಾರಣೆ: ನ್ಯಾ. ರಾಕೇಶ್ ಕುಮಾರ್ ಜೈನ್ ನೇಮಕ ಮಾಡಿದ ಸುಪ್ರೀಂಕೋರ್ಟ್

Bar & Bench

ರೈತರು ಸೇರಿದಂತೆ ಎಂಟು ಮಂದಿ ಸಾವಿಗೆ ಕಾರಣವಾಗಿದ್ದ ಉತ್ತರ ಪ್ರದೇಶ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಮೇಲ್ವಿಚಾರಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ಸುಪ್ರೀಂಕೋರ್ಟ್ ಇಂದು ನೇಮಿಸಿದೆ.

ಅಲ್ಲದೆ ಘಟನೆಯ ತನಿಖೆಗಾಗಿ ರೂಪುಗೊಂಡಿದ್ದ ವಿಶೇಷ ತನಿಖಾ ತಂಡವನ್ನು ಕೂಡ ಮರು ರಚಿಸಿರುವ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಉತ್ತರ ಪ್ರದೇಶ ಐಜಿ ಪದ್ಮಜಾ ಚೌಹಾಣ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿದೆ.

“ಜಸ್ಟೀಸ್ ಜೈನ್ ಅವರನ್ನೊಳಗೊಂಡ ಆಯೋಗ ನಿಷ್ಪಕ್ಷಪಾತ ಮತ್ತು ಮುಕ್ತ ತನಿಖೆಯನ್ನು ಖಾತ್ರಿಪಡಿಸಲಿದೆ. ನ್ಯಾ. ಜೈನ್ ಅವರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸಲಿದ್ದು ಆರೋಪಪಟ್ಟಿ ಸಲ್ಲಿಸಿದ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ” ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾ. ಜೈನ್ ಅವರು ಮೇ 1982 ರಲ್ಲಿ ಪಂಜಾಬ್ ಮತ್ತು ಹರಿಯಾಣದ ವಕೀಲರ ಪರಿಷತ್ತಿನ ಸದಸ್ಯರಾದರು. ಹಿಸ್ಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ಆರಂಭಿಸಿದ್ದ ಅವರು ಡಿಸೆಂಬರ್ 5, 2007ರಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನಿಯುಕ್ತಿಗೊಂಡರು. ಸೆಪ್ಟೆಂಬರ್ 30, 2020ರಂದು ನಿವೃತ್ತಿ ಹೊಂದಿದರು.