Supreme Court of India, Trees
Supreme Court of India, Trees 
ಸುದ್ದಿಗಳು

ಆಸ್ತಿ ವಿವಾದ: 100 ವರ್ಷ ಹಳೆಯ ಮರಗಳ ಸಂರಕ್ಷಣೆಗಾಗಿ ಸಂವಿಧಾನದ 142ನೇ ವಿಧಿ ಅನ್ವಯಿಸಿದ ಸುಪ್ರೀಂ ಕೋರ್ಟ್

Bar & Bench

ಮಹಾರಾಷ್ಟ್ರದ ಶಿರಡಿಯಲ್ಲಿ ಭೂಮಾಲೀಕರು, ನಿವೇಶನದಾರರು ಹಾಗೂ ಪಂಚಾಯತ್‌ ನಡುವಿನ ಕಾನೂನು ಸಮರದ ತೂಗುಗತ್ತಿ ಎದುರಿಸುತ್ತಿದ್ದ 100 ವರ್ಷ ಹಳೆಯ ಮರಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಂವಿಧಾನದ 142 ನೇ ವಿಧಿಯಡಿ ತನ್ನ ಪರಮಾಧಿಕಾರ ಚಲಾಯಿಸಿತು [ಶಿರಡಿ ನಗರ ಪಂಚಾಯತ್ ಮತ್ತು ಕಿಶೋರ್‌ ಶರದ್‌ ಬೋರೆವಾಕ್‌ ಇನ್ನಿತರರ ನಡುವಣ ಪ್ರಕರಣ].

ಈಜುಕೊಳ ಮತ್ತು ಆಟದ ಅಂಗಳ ನಿರ್ಮಿಸುವುದಕ್ಕಾಗಿ ಬೇರೊಂದು ಜಮೀನು ಬಳಸಲು ಪಂಚಾಯತ್‌ಗೆ ಮನವಿ ಮಾಡಲು ಪ್ರಕರಣದಲ್ಲಿ ಸೋತ ಪಕ್ಷಕಾರರಿಗೆ (ಭೂಮಾಲೀಕರು ಮತ್ತು ಪ್ಲಾಟ್ ಹೊಂದಿರುವವರು)  ಅನುವು ಮಾಡಿಕೊಡುವುದು ಸಮಂಜಸವಾಗುತ್ತದೆ ಎಂದು ಇದೇ ವೇಳೆ ತಿಳಿಸಿದ ಪೀಠ ಅದಕ್ಕಾಗಿ ಪತ್ರ ಸಲ್ಲಿಸಲು ಪಕ್ಷಕಾರರಿಗೆ ಅನುಮತಿ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2019ರಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದುಗೊಳಿಸುವಾಗ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ  ಪೀಠ ಈ ನಿರ್ದೇಶನ ನೀಡಿದೆ.

ಈ ಪ್ರದೇಶವನ್ನು ಅಭಿವೃದ್ಧಿ ನಿಷಿದ್ಧ ವಲಯದ ಬದಲು ವಸತಿ ವಲಯಕ್ಕೆ ಪರಿವರ್ತಿಸಿದ್ದ ಸರ್ಕಾರದ ಅಧಿಸೂಚನೆ ಪ್ರಶ್ನಿಸಲು ಹೈಕೋರ್ಟ್‌ ಭಾಗಶಃ ಅನುಮತಿ ನೀಡಿತ್ತು. ಇತ್ತ, ನಿವೇಶನದಾರರ ವಸತಿ ಅನುಭೋಗದ ಸೀಮಿತ ಉದ್ದೇಶದ ಪ್ರದೇಶಾಭಿವೃದ್ಧಿಗೆ ಮಾತ್ರ ತನಗೆ ಅವಕಾಶ ಕಲ್ಪಿಸಿದ್ದ ಹೈಕೋರ್ಟ್‌ ಆದೇಶವನ್ನು ಶಿರಡಿ ನಗರ ಪಂಚಾಯತ್ ಪ್ರಶ್ನಿಸಿತ್ತು.

ಇನ್ನೊಂದೆಡೆ ಈಜುಕೊಳ ಮತ್ತು ಒಳಾಂಗಣ ಆಟದ ಸಭಾಂಗಣವನ್ನು ಅಭಿವೃದ್ಧಿಪಡಿಸಲು ವ್ಯಾಜ್ಯಕ್ಕೊಳಪಟ್ಟಿದ್ದ ಭೂಮಿಯ ಭಾಗವೊಂದರ ಸ್ವಾಧೀನಕ್ಕೆ ಪಂಚಾಯತ್‌ ಮುಂದಾಗಿತ್ತು. ಪಂಚಾಯತ್‌ನ ಕೆಲವು ವಾದಗಳಲ್ಲಿ ಹುರುಳಿರುವುದನ್ನು ಕಂಡುಕೊಂಡ ಸುಪ್ರೀಂ ಕೋರ್ಟ್‌ ಪರಿಹಾರ ಪಡೆಯಲು ಹೈಕೋರ್ಟ್‌ಗೆ ತೆರಳಲು ವಿಳಂಬ ಮಾಡಿದ್ದಕ್ಕಾಗಿ ಭೂಮಾಲೀಕರನ್ನು ದೂಷಿಸಿತು.

ಆದರೂ ವಿವಾದಿತ ಸ್ಥಳದಲ್ಲಿರುವ 100 ವರ್ಷಗಳಷ್ಟು ಹಳೆಯದಾದ ಮರಗಳನ್ನು ರಕ್ಷಿಸುವ ಸಲುವಾಗಿ ಮತ್ತೊಂದು ಭಾಗದಲ್ಲಿ ಭೂಮಿಯನ್ನು ಕೊಡಲು ತಾವು ಸಿದ್ಧವಾಗಿರುವುದಾಗಿ ಭೂಮಾಲೀಕರು ಮತ್ತು ನಿವೇಶನದಾರರು ಹೇಳಿದ್ದರು. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌, ಕೋರಿಕೆಯು ಸಮರ್ಥನೀಯವಾಗಿದೆ ಎಂದಿತು. ಈ ಹಿನ್ನೆಲೆಯಲ್ಲಿ ಮತ್ತೊಂದೆಡೆ ಇರುವ ಭೂಮಿ ಬಳಸಲು ಭೂಮಾಲೀಕರು ಮತ್ತು ನಿವೇಶನದಾರರು ಸ್ಥಳೀಯ ಸಂಸ್ಥೆಗೆ ಅರ್ಜಿ ಸಲ್ಲಿಸಲು ಸೂಚಿಸಿ ಆದೇಶಿಸಿತು.