Supreme Court and CBI 
ಸುದ್ದಿಗಳು

ಡಿಫೆನ್ಸ್‌ ಕಾಲನಿ ನಿವಾಸಿಗಳ ಕಲ್ಯಾಣ ಸಂಘದಿಂದ ಚಾರಿತ್ರಿಕ ಸಮಾಧಿ ಅತಿಕ್ರಮಣ: ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಆದೇಶ

ಗುಮ್ಟಿ ಅಷ್ಟಭುಜಾಕೃತಿಯ ಸಮಾಧಿಯಾಗಿದ್ದು, ಇದನ್ನು 500 ವರ್ಷಗಳ ಹಿಂದೆ ಲೋದಿ ರಾಜವಂಶ ಆಳುತ್ತಿದ್ದ ಕಾಲದಲ್ಲಿ ನಿರ್ಮಿಸಲಾಗಿತ್ತು.

Bar & Bench

ನವದೆಹಲಿಯ ಐತಿಹಾಸಿಕ ಶೇಖ್‌ ಅಲಿ ಗುಮ್ಟಿ ಸಮಾಧಿಯನ್ನು ಡಿಫೆನ್ಸ್‌ ಕಾಲನಿ ನಿವಾಸಿಗಳ ಕಲ್ಯಾಣ ಸಂಘ ಹೇಗೆ ಅತಿಕ್ರಮಿಸಿಕೊಂಡಿತು ಎಂಬುದನ್ನು ಪತ್ತೆಹಚ್ಚಲು ಪ್ರಾಥಮಿಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಈಚೆಗೆ ಸಿಬಿಐಗೆ ನಿರ್ದೇಶನ ನೀಡಿದೆ [ರಾಜೀವ್‌ ಸೂರಿ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡುವಣ ಪ್ರಕರಣ].

ಕಟ್ಟಡವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸುವ ತಮ್ಮ ಹಿಂದಿನ ನಿರ್ಧಾರದಿಂದ ಕೇಂದ್ರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಿಂದೆ ಸರಿದಿದ್ದು ಹೇಗೆ ಎಂಬುದನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸಿಬಿಐಗೆ ನಿರ್ದೇಶನ ನೀಡಿದೆ.

ಗುಮ್ಟಿ ಸ್ಥಳದಲ್ಲಿ ಮಾಡಲಾದ ಕಾಮಗಾರಿ ಮತ್ತು ಮಾರ್ಪಾಡುಗಳನ್ನು ತನಿಖೆ ಮಾಡಲು ಅಧಿಕಾರಿಗಳು ಇನ್ನೂ ಏಕೆ ಮುಂದಾಗಿಲ್ಲ ಎಂಬುದನ್ನು ಪತ್ತೆ ಹಚ್ಚುವಂತೆ ನ್ಯಾಯಾಲಯ ಸಿಬಿಐಗೆ ಸೂಚಿಸಿದೆ.

ಡಿಫೆನ್ಸ್ ಕಾಲೋನಿ ಮಾರುಕಟ್ಟೆಯ ಪಕ್ಕದಲ್ಲಿರುವ ಸಮಾಧಿಯ ಸಂರಕ್ಷಣೆಗೆ ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನು ನೀಡಿದೆ.

ಸ್ಮಾರಕಗಳು ಮತ್ತು ಪ್ರಾಚೀನ ವಸ್ತುಗಳ ರಾಷ್ಟ್ರೀಯ ಮಿಷನ್ ಪ್ರಕಾರ, ಗುಮ್ಟಿಯು ಅಷ್ಟಭುಜಾಕೃತಿಯ ಸಮಾಧಿಯಾಗಿದ್ದು, ಇದನ್ನು 500 ವರ್ಷಗಳ ಹಿಂದೆ ಲೋದಿ ರಾಜವಂಶಸ್ಥರ ಆಡಳಿತಾವಧಿಯಲ್ಲಿ ನಿರ್ಮಿಸಲಾಗಿದೆ.

ಸಮಾಧಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಲು ಕೋರಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಲು ದೆಹಲಿ ಹೈಕೋರ್ಟ್ ಈ ಹಿಂದೆ ನಿರಾಕರಿಸಿತ್ತು.

ಕಾಲಕ್ರಮೇಣ ಸ್ಥಳೀಯ ನಿವಾಸಿಗಳು ಕಟ್ಟಡವನ್ನು ಬದಲಾಯಿಸಿದ್ದು ಅದು ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದೆ ಎಂಬ ಕೇಂದ್ರದ ನಿಲುವನ್ನು ಹೈಕೋರ್ಟ್ ಒಪ್ಪಿಕೊಂಡಿತ್ತು. ಆದರೆ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜುಲೈ 2019 ರಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತು. ಕಳೆದ ಮಾರ್ಚ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು.

ಸಮಾಧಿಯ ಸುತ್ತಲಿನ ತೆರೆದ ಭೂಮಿಯಲ್ಲಿ ಬಹು ಹಂತದ ಕಾರ್ ಪಾರ್ಕಿಂಗ್ ಮತ್ತು ಶಾಪಿಂಗ್ ಪ್ಲಾಜಾವನ್ನು ನಿರ್ಮಿಸಲು ಡಿಫೆನ್ಸ್‌ ಕಾಲನಿ ನಿವಾಸಿಗಳ ಕಲ್ಯಾಣ ಸಂಘ ಯತ್ನಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. ಈ ಕಟ್ಟಡವನ್ನು ಡಿಸಿಡಬ್ಲ್ಯೂಎಗೆ ಎಂದಿಗೂ ಹಂಚಿರಲಿಲ್ಲ ಎಂದು ಎಎಸ್ಐ ಮತ್ತು ಕೇಂದ್ರ ಸರ್ಕಾರಗಳ ಪರ ವಕೀಲರು ಕಳೆದ ಏಪ್ರಿಲ್‌ನಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಆಗಸ್ಟ್ 27 ರಂದು, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ  2004ರಲ್ಲಿ ಕೇಂದ್ರವು ಗುಮ್ಟಿಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಲು ಯೋಜಿಸಿತ್ತು. ಆದರೆ ಡಿಸಿಡಬ್ಲ್ಯೂಎ ಗುಮ್ಟಿಯನ್ನು ಕಚೇರಿಯಾಗಿ ಬಳಸುತ್ತಿರುವುದರಿಂದ ಅದನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಲು ಸಾಧ್ಯವಿಲ್ಲ ಎಂದು 2008ರಲ್ಲಿ ಎಎಸ್‌ಐ ಮತ್ತು ಕೇಂದ್ರ ಸರ್ಕಾರ ತನ್ನ ನಿಲುವು ಬದಲಿಸಿರುವುದಕ್ಕೆ ಸುಪ್ರೀಂ ಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 12ರಂದು ನಡೆಯಲಿದೆ.