Supreme Court, RTI 
ಸುದ್ದಿಗಳು

ಆರ್‌ಟಿಐ ಆನ್‌ಲೈನ್‌ ವೇದಿಕೆ ಸ್ಥಾಪಿಸದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ನೋಟಿಸ್

ಮಾರ್ಚ್ 2023ರಲ್ಲಿ ನೀಡಿದ್ದ ನಿರ್ದೇಶನದ ಹೊರತಾಗಿಯೂ, ಏಳು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಆನ್‌ಲೈನ್‌ ಆರ್‌ಟಿಐ ವೇದಿಕೆ ಸ್ಥಾಪಿಸಿಲ್ಲ ಎಂದು ಅರ್ಜಿ ದೂರಿತ್ತು.

Bar & Bench

ಆನ್‌ಲೈನ್ ಮಾಹಿತಿ ಹಕ್ಕು (ಆರ್‌ಟಿಐ) ವೇದಿಕೆ ಸ್ಥಾಪಿಸಲು ನ್ಯಾಯಾಲಯ ನೀಡಿದ ನಿರ್ದೇಶನ  ಪಾಲಿಸದ ಕಾರಣ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ [ಅನುಜ್‌ ನಾಕಡೆ ಮತ್ತು ಡಾ ಪೂನಮ್‌ ಮಾಲಕೊಂಡಯ್ಯ ಆಂಧ್ರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಅಕ್ಟೋಬರ್ 21ರೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ನೋಟಿಸ್ ನೀಡಿತು.

ಅನುಜ್ ನಾಕಡೆ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ.

ಮೂರು ತಿಂಗಳೊಳಗೆ ವೇದಿಕೆ ರೂಪಿಸುವಂತೆ ಸುಪ್ರೀಂ ಕೋರ್ಟ್ ಮಾರ್ಚ್ 2023ರಲ್ಲಿ ನಿರ್ದೇಶನ ನೀಡಿದ್ದರೂ ಏಳು ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಅವುಗಳನ್ನು ಸ್ಥಾಪಿಸಿಲ್ಲ ಎಂದು ನಾಕಡೆ ಹೇಳಿದ್ದಾರೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ, ದಾಮನ್, ದಿಯು, ದಾದ್ರಾ ನಗರ್‌ ಹವೇಲಿ, ಜಮ್ಮು ಕಾಶ್ಮೀರ ಹಾಗೂ ಲಕ್ಷದ್ವೀಪ ಇನ್ನೂ ವೇದಿಕೆ ರೂಪಿಸಿಲ್ಲ ಎಂದು ದೂರಲಾಗಿದೆ.

ಆರ್‌ಟಿಐ ಪೋರ್ಟಲ್‌ನಲ್ಲಿ ಹಲವಾರು ಸಾರ್ವಜನಿಕ ಅಧಿಕಾರಿಗಳು ಆನ್‌ಬೋರ್ಡ್ ಆಗಿಲ್ಲ ಎಂದು ಅದು ಆರೋಪಿಸಿದೆ.