ಹಿಂದೂ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡಿದ ಆರೋಪದಲ್ಲಿ ಮಧ್ಯ ಪ್ರದೇಶ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಹಾಸ್ಯ ಕಲಾವಿದ ಮುನಾವರ್ ಫಾರೂಖಿ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕಳೆದ ಒಂದು ತಿಂಗಳಿಂದ ಫಾರೂಖಿ ಜೈಲಿನಲ್ಲಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯಾಗಿರುವ ಫಾರೂಖಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಕುರಿತಾದ ಉತ್ತರ ಪ್ರದೇಶ ಪೊಲೀಸರ ವಾರೆಂಟ್‌ಗೂ (ಪ್ರೊಡಕ್ಷನ್ ವಾರೆಂಟ್) ನ್ಯಾಯಮೂರ್ತಿಗಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠವು ತಡೆಯಾಜ್ಞೆ ನೀಡಿದೆ.
ಅರ್ನೇಶ್ ಕುಮಾರ್ ವರ್ಸಸ್ ಬಿಹಾರ ರಾಜ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ ರೂಪಿಸಿರುವ ಕಾನೂನನ್ನು ಪಾಲಿಸಲಾಗಿಲ್ಲ. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 41ರ ಅಡಿ ಕಾನೂನು ಅನುಸರಣೆಯಾಗಿಲ್ಲ ಎಂದು ಪೀಠವು ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯಿಸುವಂತೆ ಆದೇಶ ಮಾಡಿದೆ.
ಹಾಸ್ಯ ಕಾರ್ಯಕ್ರಮದಲ್ಲಿ ಫಾರೂಖಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಜನವರಿ 1ರಂದು ಮಧ್ಯ ಪ್ರದೇಶ ಪೊಲೀಸರು ಅವರನ್ನು ಬಂಧಿಸಿದ್ದರು. ಹಿಂದ್ ರಕ್ಷಕ್ ಸಂಘಟನೆಯ ಮುಖ್ಯಸ್ಥ ಏಕಲವ್ಯ ಸಿಂಗ್ ಗೌರ್ ದೂರು ದಾಖಲಿಸಿದ್ದರು.