ಹಿಂದೂ ದೈವಗಳ ನಿಂದನೆ ಆರೋಪ: ಹಾಸ್ಯ ಕಲಾವಿದ ಮುನಾವರ್‌ ಫಾರೂಖಿಗೆ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್‌

ಸೋಮವಾರ ಆದೇಶ ಕಾಯ್ದಿರಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ ರೋಹಿತ್‌ ಆರ್ಯ ಅವರಿದ್ದ ಏಕಸದಸ್ಯ ಪೀಠವು ಇಂದು ಆದೇಶ ಹೊರಡಿಸಿದೆ.
Munawar Faruqui, Madhya Pradesh High Court
Munawar Faruqui, Madhya Pradesh High Court

ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪ ಎದುರಿಸುತ್ತಿರುವ ಹಾಸ್ಯ ಕಲಾವಿದ ಮುನಾವರ್‌ ಫಾರೂಖಿ ಮತ್ತು ನಳಿನ್‌ ಯಾದವ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶದ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದೆ.

ಸೋಮವಾರ ಆದೇಶ ಕಾಯ್ದಿರಿಸಿ ಇಂದು ನಿರ್ಣಯ ಹೊರಡಿಸಿರುವ ನ್ಯಾಯಮೂರ್ತಿ ರೋಹಿತ್‌ ಆರ್ಯ ಅವರಿದ್ದ ಏಕಸದಸ್ಯ ಪೀಠವು “ವಶಪಡಿಸಿಕೊಂಡಿರುವ ವಸ್ತುಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಆಧರಿಸಿ, ತನಿಖೆ ನಡೆಸಲಾಗುತ್ತಿದೆ. ಈಗ ಜಾಮೀನು ಮಂಜೂರು ಮಾಡುವ ಸಂದರ್ಭ ನಿರ್ಮಾಣವಾಗಿಲ್ಲ” ಎಂದಿದೆ.

ತಮ್ಮ ಆದೇಶದಲ್ಲಿ ನ್ಯಾಯಮೂರ್ತಿ ಆರ್ಯ ಅವರು ಧರ್ಮ, ಭಾಷೆ, ವಿಭಾಗ ಮತ್ತು ಪ್ರಾದೇಶಿಕ ವಿಭಿನ್ನತೆಯನ್ನು ಮೀರಿ ಶಾಂತಿ ಮತ್ತು ಭ್ರಾತೃತ್ವವನ್ನು ಉತ್ತೇಜಿಸುವುದು ಪ್ರತಿಯೊಬ್ಬ ಪ್ರಜೆಯ ಹಾಗೂ ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ (ಸಂವಿಧಾನದ 51ಎ(ಇ) ಮತ್ತು (ಎಫ್‌) ವಿಧಿ).

ಸಂವಿಧಾನದ 51ಎ(ಇ) ಮತ್ತು (ಎಫ್‌) ವಿಧಿಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿರುವ ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಅವುಗಳನ್ನು ಪ್ರತಿಪಾದಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

“ಸಂವಿಧಾನವು ಮೂಲಭೂತ ಹಕ್ಕುಗಳನ್ನು ಕಲ್ಪಿಸುವುದರ ಜೊತೆಗೆ ಕರ್ತವ್ಯ ಮತ್ತು ನಿರ್ಬಂಧಗಳನ್ನು ವಿಧಿಸುತ್ತದೆ. ಪ್ರತಿಯೊಂದು ಹಕ್ಕಿನ ಜೊತೆಗೆ ಕರ್ತವ್ಯ ಮಿಳಿತವಾಗಿರುತ್ತದೆ. ಸಹ ನಿವಾಸಿಗಳೆಡೆಗೆ ವ್ಯಕ್ತಿಯ ಸ್ವಾತಂತ್ರ್ಯವು ಆತನ ಕರ್ತವ್ಯ ಮತ್ತು ಬಾಧ್ಯತೆಯ ಜೊತೆ ಸಮತೋಲನ ಸಾಧಿಸಬೇಕು,” ಎಂದು ನ್ಯಾಯಾಲಯ ಹೇಳಿದೆ. ಮುಂದುವರೆದು, "ನಮ್ಮ ಕಲ್ಯಾಣ ಸಮಾಜದಲ್ಲಿ ಸಹಬಾಳ್ವೆಯ ಈ ಪರಿಸರವು ದುಷ್ಟ ಶಕ್ತಿಗಳಿಂದ ಕಲುಷಿತವಾಗದಂತೆ ನೋಡಿಕೊಳ್ಳಲು ಸರ್ಕಾರವು ಪ್ರಯತ್ನಿಸಬೇಕು," ಎಂದು ಕೋರ್ಟ್ ಹೇಳಿದೆ.

“ಧರ್ಮ, ಭಾಷೆ, ಸಂಸ್ಕೃತಿ, ಭೌಗೋಳಿಕ ಪ್ರದೇಶಗಳು ಇತ್ಯಾದಿ ವಿಚಾರಗಳೂ ಸೇರಿದಂತೆ ನಮ್ಮ ಸುಂದರ ದೇಶವು ಜಾಗತಿಕ ಮಟ್ಟದಲ್ಲಿ ಸಹಬಾಳ್ವೆ ಮತ್ತು ವೈವಿಧ್ಯತೆಗೆ ಉದಾಹರಣೆಯಾಗಿದೆ. ಕಾನೂನಿನಿಂದ ನಿಯಂತ್ರಿಸಲ್ಪಡುವ ಕಲ್ಯಾಣ ಸಮಾಜವಾದ ಭಾರತದ ಎಲ್ಲಾ ನಾಗರಿಕರಲ್ಲಿ ಪರಸ್ಪರ ಗೌರವ, ನಂಬಿಕೆ ಮತ್ತು ವಿಶ್ವಾಸವು ಸಹಬಾಳ್ವೆಯ ಮೂಲ ಸಿದ್ಧಾಂತಗಳಾಗಿವೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಹಾಸ್ಯ ಕಾರ್ಯಕರ್ಮದ ಸೋಗಿನಲ್ಲಿ ಫಾರೂಖಿ ಮತ್ತು ಯಾದವ್‌ ಅವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಹೊಂದಿದ್ದರು ಎಂಬುದು ಮೇಲ್ನೋಟಕ್ಕೆ ಭಾಸವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕ್ರಿಮಿನಲ್‌ ದೂರಿನಲ್ಲಿ ಉಲ್ಲೇಖಿಸಿರುವಂತೆ ಫಾರೂಖಿಯವರು ಯಾವುದೇ ಹೇಳಿಕೆ ನೀಡಿಲ್ಲ ಎಂಬ ಅವರ ವಕೀಲರ ವಾದವನ್ನು ನ್ಯಾಯಾಲಯವು ವಜಾಗೊಳಿಸಿತು. ಪ್ರಕರಣದಲ್ಲಿ ಸಾಕ್ಷಿ ಮತ್ತು ಕಾರ್ಯಕ್ರಮದ ವಿಡಿಯೋ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಫಾರೂಖಿ ವಾದವನ್ನು ಒಪ್ಪಲಾಗದು ಎಂದು ಹೇಳಿದೆ.

Also Read
“ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದ ಬಳಿಕ ಜಾಮೀನು ನೀಡಲು ನ್ಯಾಯಾಧೀಶರು ಮುಂದಾಗುವುದಿಲ್ಲ:” ನ್ಯಾ. ಅತುಲ್ ಶ್ರೀಧರನ್‌

ತನಿಖೆ ಪ್ರಗತಿಯಲ್ಲಿದ್ದು, ಇನ್ನಿತರರು ಈ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪ್ರಚೋದನಾಕಾರಿ ವಸ್ತುಗಳು ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಹೇಳಿ ನ್ಯಾಯಾಲಯವು ಜಾಮೀನು ವಜಾಗೊಳಿಸಿತು.

ಜನವರಿ 1ರಂದು ಮಧ್ಯಪ್ರದೇಶದ ಪೊಲೀಸರು ಫಾರೂಖಿಯವರನ್ನು ಬಂಧಿಸಿದ್ದು, ಜನವರಿ 2ರಂದು ಅವರು ಸೆಷನ್ಸ್‌ ನ್ಯಾಯಾಲಯದಲ್ಲಿ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಪ್ರಕರಣವು ಗಂಭೀರವಾಗಿರುವುದರಿಂದ ಜಾಮೀನು ನೀಡಲಾಗದು ಎಂದು ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಬಳಿಕ ಫಾರೂಖಿ ಮತ್ತು ಇತರ ಮೂವರನ್ನು ಜನವರಿ 13ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಮಧ್ಯಪ್ರದೇಶ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಇತ್ತೀಚೆಗಿನ ಹಾಸ್ಯದ ಕಾರ್ಯಕ್ರಮದಲ್ಲಿ ಫಾರೂಖಿ ಅವರು ಹಿಂದೂ ದೇವರುಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಹಿಂದ್‌ ರಕ್ಷಕ್‌ ಸಂಘಟನೆಯ ಮುಖ್ಯಸ್ಥ ಏಕಲವ್ಯ ಸಿಂಗ್‌ ಗೌರ್‌ ಅವರು ದೂರು ದಾಖಲಿಸಿದ್ದರು.

Kannada Bar & Bench
kannada.barandbench.com