10 ಮತ್ತು 12 ನೇ ತರಗತಿಗಳಿಗೆ ಸಿಬಿಎಸ್‌ಸಿ, ಐಸಿಎಸ್‌ಸಿ ಹಾಗೂ ರಾಜ್ಯ ಪರೀಕ್ಷಾ ಮಂಡಳಿಗಳು ನಡೆಸುವ ಪರೀಕ್ಷೆಗಳನ್ನು ಭೌತಿಕ/ ಆಫ್‌ಲೈನ್ ವಿಧಾನದಲ್ಲಿ ನಡೆಸುವುದನ್ನು ಪ್ರಶ್ನಿಸಿ ಶಾಲಾ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎ ಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ [ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದೇಶದ 15 ರಾಜ್ಯಗಳ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಮುಂದೆ ಪ್ರಸ್ತಾಪಿಸಿದ ವಕೀಲ ಪ್ರಶಾಂತ್ ಪದ್ಮನಾಭನ್ "ಇದು 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದೆ. ಕೋವಿಡ್ ಕಾರಣ, ಭೌತಿಕವಾಗಿ ತರಗತಿಗಳು ನಡೆಯಲಿಲ್ಲ" ಹೀಗಾಗಿ ತುರ್ತಾಗಿ ಪ್ರಕರಣವನ್ನು ವಿಚಾರಣೆ ನಡೆಸಬೇಕು ಎಂದು ಕೋರಿದರು.
ಸಿಬಿಎಸ್‌ಇಯು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಲಿದ್ದು ಐಸಿಎಸ್‌ಇ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್‌ಐಒಎಸ್) ಇನ್ನೂ ಯಾವುದೇ ಅಧಿಸೂಚನೆ ನೀಡಿಲ್ಲ. ರಾಜ್ಯ ಮಂಡಳಿಗಳಿಗೆ ಸಂಬಂಧಿಸಿದಂತೆ ಕೆಲವರು ವೇಳಾಪಟ್ಟಿ ಪ್ರಕಟಿಸಿದ್ದಾರೆ, ಇನ್ನೂ ಕೆಲವರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಅನುಭಾ ಶ್ರೀವಾಸ್ತವ ಸಹಾಯ್ ಮತ್ತು ಒಡಿಶಾ ವಿದ್ಯಾರ್ಥಿ ಒಕ್ಕೂಟ ಅರ್ಜಿ ಸಲ್ಲಿಸಿತ್ತು.
ಪರೀಕ್ಷೆ ನಡೆಸುವ ಬದಲು ಪರ್ಯಾಯ ಮೌಲ್ಯಮಾಪನ ಸೂತ್ರವೊಂದನ್ನು ರೂಪಿಸಬೇಕು. ವಿದ್ಯಾರ್ಥಿಗಳು ಅನೇಕ ಸವಾಲುಗಳನ್ನು ಎದುರಿಸುತ್ತಿರುವುದರಿಂದ ನಿಗದಿತ ಸಮಯದೊಳಗೆ ಫಲಿತಾಂಶ ಘೋಷಿಸಲು ಮತ್ತು ಸುಧಾರಣಾ ಪರೀಕ್ಷೆಯ ಆಯ್ಕೆ ಒದಗಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ತಿಳಿಸಿದ್ದರು.