ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರನ್ನು ಹಿಂದೂ ಉತ್ತರಾಧಿಕಾರ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವ ಕಾಯಿದೆಯ ಸೆಕ್ಷನ್ 2(2)ಕ್ಕೆ ತಿದ್ದುಪಡಿ ಮಾಡುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ [ಕಮಲಾ ನೇತಿ ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿ ನಡುವಣ ಪ್ರಕರಣ].
ಒಂದು ಸಮುದಾಯದ ಮಹಿಳಾ ಸದಸ್ಯರಿಗೆ ಉತ್ತರಜೀವಿತಾಧಾರದ ಹಕ್ಕನ್ನು ನಿರಾಕರಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
“ಬುಡಕಟ್ಟು ಜನಾಂಗಕ್ಕೆ ಸೇರದ ಸಮುದಾಯದ ಮಗಳು ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹಳಾಗುವುದಾದರೆ, ಬುಡಕಟ್ಟು ಸಮುದಾಯದ ಮಗಳಿಗೆ ಅಂತಹ ಹಕ್ಕನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ. ಬುಡಕಟ್ಟು ಮಹಿಳೆಯರು, ಬುಡಕಟ್ಟು ಸಮುದಾಯದ ಪುರುಷರಂತೆಯೇ ಸಮಾನತೆಗೆ ಅರ್ಹರು” ಎಂದು ತೀರ್ಪು ಹೇಳಿದೆ.
ಸಂವಿಧಾನದ 70 ವರ್ಷಗಳ ನಂತರವೂ ಬುಡಕಟ್ಟು ಕುಟುಂಬದ ಪುತ್ರಿಗೆ ಸಮಾನ ಹಕ್ಕುಗಳನ್ನು ನಿರಾಕರಿಸಲಾಗುತ್ತಿರುವುದರಿಂದ ಕಾಯಿದೆಯ ನಿಬಂಧನೆಗಳನ್ನು ಮರುಪರಿಶೀಲಿಸಲು ನ್ಯಾಯಾಲಯಕ್ಕೆ ಇದು ಸಕಾಲ ಎಂದು ಪೀಠ ಹೇಳಿದೆ.
"ಕೇಂದ್ರ ಸರ್ಕಾರವು ಪ್ರಕರಣದ ಪರಿಶೀಲನೆ ನಡೆಸಿ ಸಂವಿಧಾನದ 14 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಒದಗಿಸಲಾದ ಸಮಾನತೆಯ ಹಕ್ಕಿನ ಪ್ರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ." ಎಂದು ನ್ಯಾಯಾಲಯ ಭರವಸೆ ವ್ಯಕ್ತಪಡಿಸಿದೆ.
ಸ್ವಾಧೀನಪಡಿಸಿಕೊಂಡ ಭೂಮಿಯ ಪರಿಹಾರದ ಮೊತ್ತದ ಹಂಚಿಕೆಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಒಡಿಶಾ ಹೈಕೋರ್ಟ್‌ನ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಪರಿಶಿಷ್ಟ ಪಂಗಡದ ಮಹಿಳೆಗೆ ಪರಿಹಾರದಲ್ಲಿ ಪಾಲು ನೀಡಲು ಕೆಳ ನ್ಯಾಯಾಲಯ ನಿರಾಕರಿಸಿತ್ತು. ಇದೇ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅರ್ಜಿದಾರರು ಪರಿಶಿಷ್ಟ ಪಂಗಡದ ಮಹಿಳೆಗೆ ಉತ್ತರಾಧಿಕಾರದ ಹಕ್ಕನ್ನು ನಿರಾಕರಿಸುವುದು ಸಂವಿಧಾನದ 21ನೇ ವಿಧಿಯಡಿಯಲ್ಲಿ ಜೀವನೋಪಾಯದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಅಹವಾಲು ಸಲ್ಲಿಸಿದ್ದರು.
ಕಾಯಿದೆಯ ಸೆಕ್ಷನ್ 2 (2)ಕ್ಕೆ ತಿದ್ದುಪಡಿ ಮಾಡದೇ ಇರುವವರೆಗೆ, ಕಕ್ಷಿದಾರರು ಆ ಸೆಕ್ಷನ್ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಮೇಲ್ಮನವಿದಾರರ ಹಕ್ಕನ್ನು ಅಂಗೀಕರಿಸಿದರೆ, ತಾನು ಕಾನೂನಿಗೆ ತಿದ್ದುಪಡಿ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.