ಅಂಗಾಂಗ ಕಸಿ ಕುರಿತ ಕಾಯಿದೆ ಬಲಪಡಿಸುವ ಮತ್ತು ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಅದು ಅಸಮಾನವಾಗಿ ಜಾರಿಯಾಗಿರುವುದನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಲವಾರು ನಿರ್ದೇಶನಗಳನ್ನು ನೀಡಿದೆ [ಇಂಡಿಯನ್ ಸೊಸೈಟಿ ಆಫ್ ಆರ್ಗನ್ ಟ್ರಾನ್ಸ್‌ಪ್ಲಾಂಟೇಶನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯಿದೆ- 1994 (ಟಿಎಚ್‌ಒಟಿಎ) ಮತ್ತು 2011ರ ಅದರ ತಿದ್ದುಪಡಿ ಕಾಯಿದೆಯನ್ನು ಜಾರಿಗೊಳಿಸುವಲ್ಲಿ ಇರುವ ಅಸಂಗತತೆಯತತ್ತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರಿದ್ದ ಪೀಠ ಬೆರಳು ಮಾಡಿತು.
ಪ್ರತಿ ರಾಜ್ಯಗಳಲ್ಲಿ 1994ರ ಕಾಯಿದೆ ಜಾರಿಯಲ್ಲಿದ್ದರೂ ಕೆಲವು ಕಡೆಗಳಲ್ಲಿ ಅಂಗಾಂಗ ಕಸಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಉದ್ದೇಶಿಸಲಾದ 2011 ರ ಪ್ರಮುಖ ತಿದ್ದುಪಡಿ ಹಾಗೂ ಸಂಬಂಧಿತ ನಿಯಮಗಳನ್ನು ಜಾರಿಗೆ ತಂದಿಲ್ಲ ಎಂದು ನ್ಯಾಯಾಲಯ ಗಮನ ಸೆಳೆಯಿತು.
ಕರ್ನಾಟಕ, ತಮಿಳುನಾಡು ಮತ್ತು ಮಣಿಪುರ ಇನ್ನೂ ಪರಿಷ್ಕೃತ ನಿಯಮಗಳನ್ನು ಅಳವಡಿಸಿಕೊಂಡಿಲ್ಲ. ಆಂಧ್ರಪ್ರದೇಶ ಇನ್ನೂ 2011 ರ ತಿದ್ದುಪಡಿಗಳನ್ನು ಜಾರಿಗೆ ತಂದಿಲ್ಲ ಎಂದು ಸಿಜೆಐ ಹೇಳಿದರು. ಆಗಸ್ಟ್ 21, 2025 ರಂದು, ಕರ್ನಾಟಕ ಸರ್ಕಾರವು ಅಂಗೀಕರಿಸಿರುವ ನಿರ್ಣಯವು ಪ್ರಕರಣದ ಪ್ರಗತಿಯನ್ನು ಸೂಚಿಸುವಂತಿರುವುದನ್ನು ಅವರು ಗಮನಿಸಿದರು.
"ಆದ್ದರಿಂದ ನಿಯಮಗಳನ್ನು ಜಾರಿಗೆ ತರದ ಎಲ್ಲಾ ರಾಜ್ಯಗಳು ಪ್ರಕರಣದ ಮಹತ್ವವನ್ನು ಪರಿಗಣಿಸಿ ಕಾಯಿದೆ ಮತ್ತು ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ವಿನಂತಿಸುತ್ತೇವೆ " ಎಂದು ನ್ಯಾಯಾಲಯ ಹೇಳಿದೆ.
ಮಣಿಪುರ, ನಾಗಾಲ್ಯಾಂಡ್, ಅಂಡಮಾನ್ - ನಿಕೋಬಾರ್ ದ್ವೀಪ ಹಾಗೂ ಲಕ್ಷದ್ವೀಪ ಸೇರಿದಂತೆ ಹಲವಾರು ಪ್ರದೇಶಗಳು ಇನ್ನೂ ರಾಷ್ಟ್ರೀಯ ನಿಯಮಾವಳಿ ಕಡ್ಡಾಯವಾಗಿರುವ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗಳು (ಎಸ್‌ಒಟಿಒ) ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಪೀಠ ಕಳವಳ ವ್ಯಕ್ತಪಡಿಸಿತು. ಹೀಗಾಗಿ ಎಲ್ಲೆಡೆ ಒಂದೇ ಬಗೆಯ ನಿಯಮ ಅನ್ವಯವಾಗುವಂತಹ ರಾಷ್ಟ್ರೀಯ ನೀತಿ ರೂಪಿಸಲು ಅದು ಸೂಚಿಸಿದ್ದು ಈ ಪ್ರದೇಶಗಳಲ್ಲಿ ಎಸ್‌ಒಟಿಒ ರಚಿಸುವಂತೆಯೂ ಆದೇಶಿಸಿದೆ.
ಹಂಚಿಕೆ ಮಾನದಂಡಗಳಲ್ಲಿ ಈಗಿರುವ ಪ್ರಾದೇಶಿಕ, ಜಾತಿ ಹಾಗೂ ಲಿಂಗ ತಾರತಮ್ಯಗಳನ್ನು ಪರಿಹರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಎಂದು ನ್ಯಾಯಾಲಯ ಗಮನಿಸಿದೆ.
ಬ್ರೈನ್ ಡೆಡ್ (ಮಿದುಳಿನ ಸಾವು) ಆದ ನಂತರ ಅಂಗಾಂಗ ಕಸಿ ಮಾಡಲಾಗಿದೆಯೇ ಎಂಬ ಬಗ್ಗೆ ಜನನ–ಮರಣ ನೊಂದಣಿಗಳ ನಮೂನೆ 4 ಮತ್ತು 4ಎಗಳಲ್ಲಿ ವಿವರಗಳನ್ನು ಸೇರಿಸುವಂತೆ ಅದು ಸೂಚಿಸಿದೆ. ಅಲ್ಲದೆ ಈ ಸಂಬಂಧ ಅಗತ್ಯ ಮಾಹಿತಿ ಒದಗಿಸದ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರಗಳು ದಂಡ ವಿಧಿಸಬೇಕು ಎಂದು ಹೇಳಿದೆ.
ಕುತೂಹಲಕಾರಿ ಅಂಶವೆಂದರೆ ಅಪಘಾತ ಪೀಡಿತರ ಅಂಗಾಂಗಗಳ ಸುತ್ತ ಸಂಘಟಿತ ಅಪರಾಧ ಜಾಲಗಳು (ಮಾಫಿಯಾ) ಕಾರ್ಯನಿರ್ವಹಿಸುವ ಅಪಾಯವಿದೆ ಎಂದು ಕೂಡ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಲಯಾಳಂ ಚಿತ್ರ ಜೋಸೆಫ್ ಮತ್ತು ಅದರ ಹಿಂದಿ ರಿಮೇಕ್ ಅಪ್ನೆಯನ್ನು ಉಲ್ಲೇಖಿಸಿ ನ್ಯಾಯಾಲಯದ ಮಾತಿಗೆ ಸಮ್ಮತಿ ವ್ಯಕ್ತಪಡಿಸಿದರು. ಇವೆರಡೂ ಚಿತ್ರಗಳು ಅಪಘಾತಕ್ಕೀಡಾದವರನ್ನು ಅಂಗಾಂಗ ಕಳ್ಳಸಾಗಣೆ ಜಾಲಗಳು ಶೋಷಿಸುವ ಕುರಿತು ಹೇಳುತ್ತವೆ.