ಅಂಗಾಂಗ ದಾನಕ್ಕೆ ತ್ವರಿತಗತಿಯ ಅನುಮತಿ: ಆಸ್ಪತ್ರೆಗಳಲ್ಲಿಯೇ ಅನುಮೋದನಾ ಸಮಿತಿ ರಚನೆಗೆ ಕೇರಳ ಹೈಕೋರ್ಟ್ ಸೂಚನೆ

ವಿವಿಧ ಕ್ಷೇತ್ರಗಳಲ್ಲಿ ಅನುಭವ ಮತ್ತು ಜ್ಞಾನ ಹೊಂದಿರುವ ವ್ಯಕ್ತಿಗಳು ಅನುಮೋದನಾ ಸಮಿತಿಗಳಲ್ಲಿ ಇಲ್ಲದಿರುವ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ.
Kerala High Court
Kerala High Court
Published on

ಸಂಬಂಧಿಕರಲ್ಲದವರ ನಡುವೆ ಅಂಗಾಂಗ ದಾನಕ್ಕೆ ಅನುಮತಿ ಕೋರುವ ಅರ್ಜಿಗಳ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವುದಕ್ಕಾಗಿ ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿಯೇ ಅನುಮೋದನಾ ಸಮಿತಿ ಸ್ಥಾಪಿಸುವಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ [ ಜಿಲೆಟ್ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮಾನವ ಅಂಗಗಳು ಮತ್ತು ಅಂಗಾಂಶ ಕಸಿ ನಿಯಮಾವಳಿ- 2014ರ ನಿಯಮ 11 (4) ರ ಪ್ರಕಾರ ವಾರ್ಷಿಕವಾಗಿ 25 ಅಥವಾ ಅದಕ್ಕಿಂತ ಹೆಚ್ಚಿನ ಅಂಗಾಂಗ ಕಸಿ ನಡೆಸುವ ಆಸ್ಪತ್ರೆಗಳಲ್ಲಿ ಅಂಗಾಂಗ ದಾನಕ್ಕಾಗಿ ಆಸ್ಪತ್ರೆಗಳಲ್ಲೇ ಅನುಮೋದನಾ ಸಮಿತಿಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ನ್ಯಾಯಾಲಯ ವಿವರಿಸಿದೆ.

Also Read
ಪತ್ನಿಯ ಆಕ್ಷೇಪ ಬದಿಗೊತ್ತಿದ ಮಧ್ಯಪ್ರದೇಶ ಹೈಕೋರ್ಟ್‌: ಸಹೋದರನಿಗೆ ಅಂಗಾಂಗ ದಾನ ಮಾಡಲು ಪತಿಗೆ ಅನುವು

ಕೇರಳದಲ್ಲಿ ಅಂಗಾಂಗ ದಾನಕ್ಕೆ ಅನುಮತಿ ನೀಡುವಂತೆ ಕೋರುವ ಎಲ್ಲಾ ಅರ್ಜಿಗಳನ್ನು ಜಿಲ್ಲಾ ಮಟ್ಟದ ಅನುಮೋದನಾ ಸಮಿತಿ  ಮಾತ್ರ ಪರಿಗಣಿಸುತ್ತಿದೆ ಎಂಬ ಬಗ್ಗೆ  ಅಕ್ಟೋಬರ್ 14 ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ವಿ ಜಿ ಅರುಣ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗಳಲ್ಲೇ ಅನುಮತಿ ನೀಡುವ ಸಮಿತಿ ರಚನೆಯಾಗದಿರುವುದರಿಂದ ಅನುಮೋದನೆ ಪಡೆಯುವುದಕ್ಕೆ ಅನಿರ್ದಿಷ್ಟಾವಧಿಯ ವಿಳಂಬ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಅನುಭವ ಮತ್ತು ಜ್ಞಾನ ಹೊಂದಿರುವ ವ್ಯಕ್ತಿಗಳು ಅನುಮೋದನಾ ಸಮಿತಿಗಳಲ್ಲಿ ಇಲ್ಲದಿರುವ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ. ಅಂತಹ ಸದಸ್ಯರನ್ನು ಸೇರ್ಪಡೆ ಮಾಡುವುದರಿಂದ ಸಮಿತಿಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅದು ಹೇಳಿದೆ. ಹೀಗಾಗಿ ಈ ಎರಡೂ ವಿಚಾರಗಳನ್ನು ಸರಿಪಡಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಹೀಗೆ ಮಾಡದಿದ್ದರೆ ಕಾಯಿದೆಯ ಉದ್ದೇಶಕ್ಕೇ ಸೋಲುಂಟಾಗುತ್ತದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

ಕಿಡ್ನಿ ದಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಮತ್ತು ರಾಜ್ಯ ಸಮಿತಿಗಳು ತಿರಸ್ಕರಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

Also Read
[ಅಪ್ರಾಪ್ತ ವಯಸ್ಕರ ಅಂಗಾಂಗ ದಾನ] ಅಸಾಧಾರಣ ಸಂದರ್ಭಗಳ ಕುರಿತು ನಿರ್ದಿಷ್ಟವಾಗಿ ಮಾರ್ಗಸೂಚಿ ರೂಪಿಸಿ: ದೆಹಲಿ ಹೈಕೋರ್ಟ್

ಪ್ರಕರಣದಲ್ಲಿ, ರೋಗಿ ಮತ್ತು ದಾನಿ ಒಟ್ಟಿಗೆ ಇರುವ ಯಾವುದೇ ಛಾಯಚಿತ್ರ ಇಲ್ಲದಿರುವುದರಿಂದ ಇಬ್ಬರೂ ಅಪರಿಚಿತರು ಮತ್ತು ಅಂಗಾಂಗ ದಾನ ವಾಣಿಜ್ಯ ಹಿತಾಸಕ್ತಿಗಳಿಂದ ಕೂಡಿದೆ ಎಂಬ ಅನುಮಾನಗಳನ್ನು ತನ್ನಿಂತಾನೇ ವ್ಯಕ್ತಪಡಿಸಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಛಾಯಾಚಿತ್ರ ಇಲ್ಲ ಎಂದ ಮಾತ್ರಕ್ಕೆ ದಾನಿ ಪ್ರೀತಿ ಮತ್ತು ವಾತ್ಸಲ್ಯದಿಂದ ಅಂಗಾಂಗ ದಾನಕ್ಕೆ ಮುಂದಾಗಿದ್ದನ್ನು ನಿರಾಕರಿಸುವಂತಿಲ್ಲ ಎಂದು ಅದು ಹೇಳಿದೆ.

ಅಂಗಾಂಗ ಸ್ವೀಕರಿಸುತ್ತಿರುವವರು ಆಟೋ ಚಾಲಕರಾಗಿದ್ದು ಕಸಿ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದು ಜನರ ಧನಸಹಾಯದಿಂದ ಎಂಬ ಅಂಶ ಗಮನಿಸಿದ ನ್ಯಾಯಾಲಯ ಅಂಗಾಂಗ ದಾನವನ್ನು ವಾಣಿಜ್ಯ ಹಿತಾಸಕ್ತಿಯಿಂದ ಮಾಡುತ್ತಿದ್ದಾರೆ ಎಂಬ ಮಾತನ್ನು ಒಪ್ಪಲಿಲ್ಲ. ಅಂತೆಯೇ ಅರ್ಜಿ ತಿರಸ್ಕರಿಸಿದ್ದ ಆದೇಶ ಬದಿಗೆ ಸರಿಸಿ ಹೊಸದಾಗಿ ಪ್ರಕರಣ ನಿರ್ಧರಿಸುವಂತೆ ಅನುಮೋದನಾ ಸಮಿತಿಗೆ ಅದು ಸೂಚಿಸಿತು.

Kannada Bar & Bench
kannada.barandbench.com