ಗರ್ಭಿಣಿ ಮಹಿಳೆ ಮತ್ತು ಸುಪ್ರೀಂ ಕೋರ್ಟ್ 
ಸುದ್ದಿಗಳು

ಅವಿವಾಹಿತೆಯರು ಬಾಡಿಗೆ ತಾಯ್ತನದ ಮೂಲಕ ಮಕ್ಕಳ ಪಡೆಯಲು ಅವಕಾಶ ಕೋರಿ ಮನವಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Bar & Bench

ಒಂಟಿ ಹಾಗೂ ಅವಿವಾಹಿತ ಮಹಿಳೆಯರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಅನುಮತಿ ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಆರಂಭದಲ್ಲಿ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಳ್ಳಿಹಾಕಿದರೂ ಕಡೆಗೆ ಅರ್ಜಿ ಪರಿಶೀಲಿಸಲು ನಿರ್ಧರಿಸಿ ಕೇಂದ್ರದ ಪ್ರತಿಕ್ರಿಯೆ ಕೇಳಿತು.

ಸುಪ್ರೀಂ ಕೋರ್ಟ್ ವಕೀಲೆ ನೀಹಾ ನಾಗಪಾಲ್‌ ಅವರು ಅರ್ಜಿ ಸಲ್ಲಿಸಿದ್ದು, ಮಹಿಳೆಯರು ಮದುವೆಯಾಗದೆ ಮಗು ಪಡೆಯಲು ಅವಕಾಶ ನೀಡಬೇಕು ಎಂದಿದ್ದಾರೆ.

ಅರ್ಜಿದಾರೆಯ ವಾದದ ಪ್ರಮುಖ ಸಂಗತಿಗಳು

ತಾನು ತನ್ನ ಖಾಸಗಿ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲದೆ ಬಾಡಿಗೆ ತಾಯ್ತನದ ಲಭ್ಯತೆ ಪಡೆಯಲು ಹಾಗೂ ತಾಯ್ತನ ಅನುಭವಿಸಲು ಇರುವ ಹಕ್ಕನ್ನು ರಕ್ಷಿಸಿಕೊಳ್ಳಬಯಸುವೆ.

ಮದುವೆಯಾಗದೆ ಸಂತಾನೋತ್ಪತ್ತಿ ಮಾಡುವ ಮತ್ತು ತಾಯಿಯಾಗುವ ಹಕ್ಕು ತನಗಿದೆ.

ಅವಿವಾಹಿತ ಮಹಿಳೆಯರಿಗೆ ಬಾಡಿಗೆ ತಾಯ್ತನ ಪಡೆಯದಂತೆ ನಿಷೇಧಿಸಿರುವುದು ಅರ್ಜಿದಾರರ ಸಂತಾನೋತ್ಪತ್ತಿ ಹಕ್ಕು, ಸಂಸಾರ ಆರಂಭಿಸುವ ಹಕ್ಕು, ಅರ್ಥಪೂರ್ಣ ಕೌಟುಂಬಿಕ ಜೀವನ ನಡೆಸುವ ಹಕ್ಕು ಹಾಗೂ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ.

ಬಾಡಿಗೆ ತಾಯಿಗೆ ಯಾವುದೇ ವಿತ್ತೀಯ ಪರಿಹಾರ / ಪರಿಗಣನೆ ನೀಡುವುದಕ್ಕೆ ನಿಷೇಧ ಹೇರಿರುವುದರಿಂದ ತನಗೆ ಬಾಡಿಗೆ ತಾಯಿಯನ್ನು ಹುಡುಕಲು ಅಸಾಧ್ಯವಾಗುತ್ತಿದೆ.

ಬಾಡಿಗೆ ತಾಯ್ತನವನ್ನು ನಿಯಂತ್ರಿಸುವ ಬದಲು ಕಾನೂನು ಅದನ್ನು ಆದರ್ಶಯುತವಾದ ಬಾಡಿಗೆ ತಾಯ್ತನದ ವಿಚಾರದ ಮೂಲಕ ನಿಷೇಧಿಸಲು ಹೊರಟಿದೆ.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಸೌರಭ್ ಕಿರ್ಪಾಲ್ , ಪ್ರಸ್ತುತ ಬಾಡಿಗೆ ತಾಯ್ತನ ನಿಯಮಗಳಲ್ಲಿ ಭಾರಿ ಕಂದರ ಇದೆ ಎಂದು ವಾದಿಸಿದರು. ಒಂಟಿ ಮಹಿಳೆಯರು ಬಾಡಿಗೆ ತಾಯ್ತನವನ್ನು ಆರಿಸಿಕೊಳ್ಳುವುದನ್ನು ನಿಷೇಧಿಸಿರುವುದು ಸಂವಿಧಾನದ 14ನೇ (ಸಮಾನತೆಯ ಹಕ್ಕು) ಮತ್ತು 21ನೇ (ಜೀವಿಸುವ ಹಕ್ಕು) ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರು ಅವಿವಾಹಿತ ಮಹಿಳೆಯರು ಬಾಡಿಗೆ ತಾಯ್ತನ ಆರಿಸಿಕೊಳ್ಳುವ ವಿಚಾರ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಸಂತಾನೋತ್ಪತ್ತಿ ನೆರವು ತಂತ್ರಜ್ಞಾನದ (ಎಆರ್‌ಟಿ) ಮೂಲಕ ಒಂಟಿ, ಅವಿವಾಹಿತ ಮಹಿಳೆಯರಿಗೆ ಈಗಲೂ ಮಕ್ಕಳನ್ನು ಪಡೆಯುವ ಅವಕಾಶವಿದೆ ಎಂದು ಗಮನ ಸೆಳೆದರು.

ಆಗ ನ್ಯಾ. ನಾಗರತ್ನ "ನಾವೊಂದು ಗೊಂದಲ ಎದುರಿಸುತ್ತಿದ್ದೇವೆ. ಭಾರತದಲ್ಲಿ ಎಷ್ಟು ಅವಿವಾಹಿತ ಮಹಿಳೆಯರು ಎಆರ್‌ಟಿ ವಿಧಾನ ಬಳಸಿಕೊಂಡಿದ್ದಾರೆ? ನಾವು ಭಾರತೀಯ ಸಮಾಜದ ನಾಡಿಮಿಡಿತವನ್ನೂ ಸಹ ಅರಿಯಬೇಕಿದೆ" ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಕಿರ್ಪಾಲ್‌ "ಹಾಗೆ ಹೇಳಬಹುದಾದರೂ ಸಾಂವಿಧಾನಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಿದೆ. ಪ್ರಕರಣವನ್ನು ಆಲಿಸುವ ಅಗತ್ಯವಿದೆ. ಪ್ರಕರಣದ ಅರ್ಹತೆಗಳನ್ನು ನ್ಯಾಯಾಲಯಕ್ಕೆ ನಾನು ಮನವರಿಕೆ ಮಾಡಿಕೊಡುವೆ. ನಾವು ಮಧ್ಯಂತರ ತಡೆಗೆ ಒತ್ತಾಯಿಸುತ್ತಿಲ್ಲ" ಎಂದರು.

ನಂತರ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್‌ ನೀಡಿತು. ವಾಣಿಜ್ಯ ಬಾಡಿಗೆ ತಾಯ್ತನದ ಮೇಲಿನ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ (ಪಿಐಎಲ್) ಜೊತೆಗೆ ಈ ಅರ್ಜಿಯನ್ನೂ ಇಂದು ಆಲಿಸಲಾಯಿತು.