Italian marines and Supreme Court 
ಸುದ್ದಿಗಳು

ರೂ.10 ಕೋಟಿ ಪರಿಹಾರ ಜಮೆ: ಇಟಲಿಯ ನೌಕಾಯೋಧರ ವಿರುದ್ಧದ ಕಾನೂನು ಪ್ರಕ್ರಿಯೆ ಮುಕ್ತಾಯಗೊಳಿಸಿದ ಸುಪ್ರೀಂ

ಸುಪ್ರೀಂ ರಿಜಿಸ್ಟ್ರಿ ಖಾತೆಗೆ ಜಮೆಯಾಗಿರುವ ₹10 ಕೋಟಿ ಪರಿಹಾರದ ಮೊತ್ತವನ್ನು ಕೇರಳದ ಹೈಕೋರ್ಟ್‌ ರಿಜಿಸ್ಟ್ರಿಗೆ ವರ್ಗಾಯಿಸಲಾಗುವುದು. ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ₹4 ಕೋಟಿ, ಉಳಿದ ₹2 ಕೋಟಿಯನ್ನು ಹಡಗಿನ ಮಾಲೀಕರಿಗೆ ಪಾವತಿಸಲಾಗುವುದು.

Bar & Bench

ಕೇರಳದ ಕರಾವಳಿಯಲ್ಲಿ 2012ರಲ್ಲಿ ಭಾರತದ ಇಬ್ಬರು ಮೀನುಗಾರರನ್ನು ಕೊಂದ ಆರೋಪಕ್ಕೆ ಗುರಿಯಾಗಿದ್ದ ಇಟಲಿ ನೌಕಾಪಡೆಯ ಯೋಧರಾದ ಸಾಲ್ವಟೋರ್‌ ಜಿರೋನ್‌ ಮತ್ತು ಮಸ್ಸಿಮಿಲಿಯಾನೊ ಲಟ್ಟೊರೆ ಅವರ ವಿರುದ್ಧದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿಲು ಸೂಚಿಸಿ ಶುಕ್ರವಾರ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಮೀನುಗಾರರನ್ನು ಕೊಂದಿರುವುದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರ ವಿತರಿಸಲು ರೂ. 10 ಕೋಟಿ ಮೊತ್ತವನ್ನು ಇಟಲಿ ವರ್ಗಾಯಿಸಿದ್ದು, ಅದನ್ನು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯ ಖಾತೆಗೆ ಕಳೆದ ವಾರ ಜಮೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಆರ್‌ ಶಾ ಅವರ ನೇತೃತ್ವದ ಪೀಠಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ಮಾಡಿದೆ.

“ನ್ಯಾಯಮಂಡಳಿಯ ಅದೇಶದಂತೆ ರೂ. 10 ಕೋಟಿ ಪರಿಹಾರಕ್ಕೆ ಭಾರತ ಒಪ್ಪಿಕೊಂಡಿದ್ದು, ಪರಿಹಾರದ ಹಣವನ್ನು ಈಗಾಗಲೇ ವರ್ಗಾಯಿಸಲಾಗಿದೆ. ಇಟಲಿ ಸರ್ಕಾರವು ಹಣವನ್ನು ಪಾವತಿಸಿದ್ದು, ಈ ಹಣವನ್ನು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ವರ್ಗಾಯಿಸಲಾಗಿದೆ. ಪರಿಹಾರ ವಿತರಿಸಿರುವುದು ನಮಗೆ ಸಮಾಧಾನ ಉಂಟು ಮಾಡಿದೆ. ಹೀಗಾಗಿ, ಭಾರತ ಸಂವಿಧಾನದ 142ನೇ ವಿಧಿಯ ಅನ್ವಯ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿ ಖಾತೆಗೆ ಜಮೆಯಾಗಿರುವ ರೂ. 10 ಕೋಟಿ ಪರಿಹಾರದ ಮೊತ್ತವನ್ನು ಕೇರಳದ ಹೈಕೋರ್ಟ್‌ ರಿಜಿಸ್ಟ್ರಿಗೆ ವರ್ಗಾಯಿಸಲಾಗುವುದು. ಈ ಪೈಕಿ ತಲಾ 4 ಕೋಟಿ ರೂಪಾಯಿಗಳನ್ನು ಘಟನೆಯಲ್ಲಿ ಮೃತರಾದ ಇಬ್ಬರು ಸಂತ್ರಸ್ತರ ಕುಟುಂಬಸ್ಥರಿಗೆ ಮತ್ತು ಉಳಿದ ಎರಡು ಕೋಟಿ ರೂಪಾಯಿಯನ್ನು ಹಡಗಿನ ಮಾಲೀಕರಿಗೆ ಪಾವತಿಸಲಾಗುವುದು ಎಂದು ನ್ಯಾಯಾಲಯ ಆದೇಶ ಮಾಡಿದೆ.

ಅಲ್ಲದೇ, ಇಟಲಿ ಸರ್ಕಾರವು ಪ್ರಕರಣದ ಸಂಬಂಧ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆಯನ್ನು ಆರಂಭಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇಟಲಿಯ ʼಎನ್ರಿಕಾ ಲೆಕ್ಸಿʼ ಹಡಗಿನಲ್ಲಿದ್ದ ಜಿರೋನ್‌ ಮತ್ತು ಲಟ್ಟೊರೆ ಅವರು ಕಡಲ್ಗಳ್ಳರು ಎಂದು ಭಾವಿಸಿ ಭಾರತದ ಇಬ್ಬರು ಮೀನುಗಾರರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.