ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಸುಗಮಗೊಳಿಸಲು ಸುಪ್ರೀಂ ಕೋರ್ಟ್ ಹೊಸ ನೀತಿಯೊಂದನ್ನು ಅಂಗೀಕರಿಸಿದೆ. ಇದರ ಅನುಸಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿರುವವರು ಸಂಬಂಧಿತ ಹೈಕೋರ್ಟ್‌ನಲ್ಲಿ ಆ ಹುದ್ದೆ ತೆರವಾಗಲಿರುವ ಎರಡು ತಿಂಗಳ ಮೊದಲೇ , ವರ್ಗಾವಣೆಗೊಳ್ಳಲು ಅವಕಾಶ ಇರಲಿದೆ.
ಅದರಂತೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಲಿಸಾ ಗಿಲ್ ಅವರನ್ನು ಪಂಜಾಬ್ ಹೈಕೋರ್ಟ್‌ನಿಂದ ಆಂಧ್ರಪ್ರದೇಶ ಹೈಕೋರ್ಟ್‌ಗೆ ಪೂರ್ವಭಾವಿ ವರ್ಗಾವಣೆಗೆ ಅದು ಶಿಫಾರಸು ಮಾಡಿದೆ. ಈ ಶಿಫಾರಸನ್ನು ಕೇಂದ್ರ ಒಪ್ಪಿದರೆ ನ್ಯಾ. ಲಿಸಾ ಅವರು ಆಂಧ್ರ ಪ್ರದೇಶ ಹೈಕೋರ್ಟ್‌ನ ಎರಡನೇ ಅತಿಹಿರಿಯ ನ್ಯಾಯಮೂರ್ತಿ ಎನಿಸಿಕೊಳ್ಳಲಿದ್ದಾರೆ. ಸುಮಾರು ಎರಡು ತಿಂಗಳ ನಂತರ ಏಪ್ರಿಲ್ 25 ರಂದು ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆ ಅಲಂಕರಿಸಲಿದ್ದಾರೆ.
ಫೆಬ್ರವರಿ 26, 2026 ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ನೀತಿ ಅಂಗೀಕರಿಸಿದ್ದು ಹೀಗೆ ಮಾಡುವುದರಿಂದ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸುವವರಿಗೆ ನಿರ್ದಿಷ್ಟ ಹೈಕೋರ್ಟ್‌ನ ಕಾರ್ಯವೈಖರಿ ಮತ್ತು ಆಡಳಿತಾತ್ಮಕ ವ್ಯವಸ್ಥೆಯ ಪೂರ್ವ ಪರಿಚಯ ದೊರೆಯಲಿದೆ. ಇದರಿಂದ ಹಾಲಿ ಮುಖ್ಯ ನ್ಯಾಯಮೂತಿ ನಿವೃತ್ತರಾದ ಬಳಿಕ ಅಧಿಕಾರ ಹಸ್ತಾಂತರ ಸುಗಮವಾಗಲಿದ್ದು ನ್ಯಾಯಾಲಯ ಕಾರ್ಯಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸುಗೊಂಡವರು ಆ ಹೈಕೋರ್ಟ್‌ನ ಕಾರ್ಯಚಟುವಟಿಕೆಗಳಿನ್ನು ಸಮರ್ಪಕವಾಗಿ ಪರಿಚಯ ಮಾಡಿಕೊಂಡು, ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಸ್ವೀಕರಿಸಬಹುದು,” ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಹೊರಡಿಸಿದ ನೋಟಿಸ್ ಹೇಳಲಾಗಿದೆ.
ನ್ಯಾಯಾಂಗ ಸೇವೆಗಳ ಕಾರ್ಯಕ್ಷಮತೆ ಮತ್ತು ನ್ಯಾಯ ವಿತರಣೆಯ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ಹೊಸ ನೀತಿಯಂತೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಲಿಸಾ ಗಿಲ್ ಅವರನ್ನು ಪಂಜಾಬ್ ಹೈಕೋರ್ಟ್‌ನಿಂದ ಆಂಧ್ರಪ್ರದೇಶ ಹೈಕೋರ್ಟ್‌ಗೆ ಪೂರ್ವಭಾವಿ ವರ್ಗಾವಣೆ ಮಾಡಿದೆ.