ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಲ್ಲಿ 54 ಅಭ್ಯರ್ಥಿಗಳೊಂದಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಂದರ್ಶನ ನಡೆಸಿದೆ.
ಮಧ್ಯಪ್ರದೇಶ, ಪಾಟ್ನಾ, ಅಲಹಾಬಾದ್, ತೆಲಂಗಾಣ, ಆಂಧ್ರಪ್ರದೇಶ, ಗುವಾಹಟಿ ಹಾಗೂ ದೆಹಲಿ ಸೇರಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ವಿಕ್ರಮ್ ನಾಥ್ ಅವರನ್ನು ಒಳಗೊಂಡ ಕೊಲಿಜಿಯಂ ಜುಲೈ 1ರಿಂದ ಸಂದರ್ಶನ ನಡೆಸುತ್ತಿದೆ.
ನ್ಯಾಯಾಂಗ ನೇಮಕಾತಿ ಹೊಣೆ ನಿಭಾಯಿಸುವ ಕೊಲಿಜಿಯಂ ಮೊದಲ ದಿನ 20 ಅಭ್ಯರ್ಥಿಗಳೊಂದಿಗೆ ಮತ್ತು ಎರಡನೇ ದಿನ 34 ಅಭ್ಯರ್ಥಿಗಳೊಂದಿಗೆ ಸಂದರ್ಶನ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ್ ವರ್ಮಾ ಅವರ ಮನೆಯಲ್ಲಿ ಭಾರೀ ಪ್ರಮಾಣದ ನಗದು ಪತ್ತೆ ಹಾಗೂ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ ಹೇಳಿಕೆಯಿಂದ ವಿವಾದ ಉಂಟಾದ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಕೊಲಿಜಿಯಂ ವಿಭಿನ್ನ ವಿಧಾನ ಆಯ್ಕೆ ಮಾಡಿಕೊಂಡಿದೆ.
ಕೆಲ ಅಭ್ಯರ್ಥಿಗಳ ಸಂದರ್ಶನವನ್ನು ಸುಮಾರು ಅರ್ಧ ತಾಸು ನಡೆಸಲಾಗಿದೆ. ಜುಲೈ 1ರ ವೇಳೆಗೆ ದೇಶದ 25 ಹೈಕೋರ್ಟ್‌ಗಳಲ್ಲಿ 371 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಉಳಿದಿವೆ.