ದೇಶದ 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರನ್ನು ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕರ್ನಾಟಕದ ಇಬ್ಬರು ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ಮಾಡಬೇಕೆಂದು ಕೊಲಿಜಿಯಂ ತನ್ನ ಶಿಫಾರಸಿನಲ್ಲಿ ಪುನರುಚ್ಚರಿಸಿದೆ.
68 ಹೆಸರುಗಳನ್ನು ಆಯ್ಕೆ ಮಾಡುವ ಮೊದಲು 100 ಹೆಸರುಗಳನ್ನು ಕೊಲಿಜಿಯಂ ಪರಿಗಣಿಸಿತ್ತು. 68ರಲ್ಲಿ 44 ವಕೀಲರು ಮತ್ತು 24 ನ್ಯಾಯಾಂಗ ಅಧಿಕಾರಿಗಳು ಸೇರಿದ್ದಾರೆ. ಇವರಲ್ಲಿ 11 ಮಂದಿ ಮಹಿಳೆಯರು ಕೂಡ ಇದ್ದಾರೆ.
ಶಿಫಾರಸ್ಸು ಮಾಡಿರುವವರಲ್ಲಿ ನ್ಯಾಯಾಧೀಶೆ ಮಾರ್ಲಿ ವಕುಂಗ್ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅಲ್ಲದೆ ಅವರು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸುಗೊಂಡ ಮಿಜೋರಾಂನ ಮೊಟ್ಟಮೊದಲ ಮಹಿಳಾ ಜಿಲ್ಲಾ ನ್ಯಾಯಾಧೀಶೆ ಕೂಡ ಆಗಿದ್ದಾರೆ. ನಾಗಾಲ್ಯಾಂಡ್‌ನಿಂದ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ ಮೊದಲ ವ್ಯಕ್ತಿ ಕಹ್ಕೆಟೋ ಸೆಮಾ.
ಕೊಲಿಜಿಯಂ 12 ನ್ಯಾಯಮೂರ್ತಿಗಳ ಹೆಸರನ್ನು ಪುನರುಚ್ಚರಿಸಿದೆ. ಇವರಲ್ಲಿ 5 ಹೈಕೋರ್ಟ್‌ಗಳ 9 ವಕೀಲರು, 3 ನ್ಯಾಯಾಂಗ ಅಧಿಕಾರಿಗಳು ಸೇರಿದ್ದಾರೆ. ಈ ಹೆಸರುಗಳನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಈ ಹಿಂದೆ ಕೊಲಿಜಿಯಂಗೆ ಮನವಿ ಮಾಡಿತ್ತು.
ವಿವಿಧ ಹೈಕೋರ್ಟ್‌ಗಳಿಗೆ ಪದೋನ್ನತಿ ಮಾಡಲು ಶಿಫಾರಸುಗೊಂಡ ನ್ಯಾಯಾಧೀಶರ ಸಂಖ್ಯಾವಾರು ವಿವರ ಇಲ್ಲಿದೆ:
ಶಿಫಾರಸಿಗೆ ಕೇಂದ್ರದಿಂದ ಒಪ್ಪಿಗೆ ದೊರೆತರೆ ಕರ್ನಾಟಕ, ಮದ್ರಾಸ್, ಅಲಾಹಾಬಾದ್, ಕಲ್ಕತ್ತ, ರಾಜಸ್ಥಾನ, ಜಾರ್ಖಂಡ್, ಜಮ್ಮು- ಕಾಶ್ಮೀರ ಮತ್ತು ಲಡಾಖ್, ಮಧ್ಯಪ್ರದೇಶ, ಪಂಜಾಬ್, ಹರ್ಯಾಣ, ಛತ್ತೀಸ್‌ಗಡ, ಅಸ್ಸಾಂ, ಕೇರಳ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳು ನೇಮಕಗೊಳ್ಳಲಿದ್ದಾರೆ.
ಅತಿಹೆಚ್ಚು ಸಂಖ್ಯೆಯ ನ್ಯಾಯಮೂರ್ತಿಗಳನ್ನು ಅಲಾಹಾಬಾದ್ ಹೈಕೋರ್ಟ್‌ಗೆ ಶಿಫಾರಸು ಮಾಡಲಾಗಿದೆ. ಅವರಲ್ಲಿ 13 ವಕೀಲರು 3 ನ್ಯಾಯಮೂರ್ತಿಗಳು ಸೇರಿದ್ದಾರೆ. 10 ಹೆಸರುಗಳನ್ನು ಕಲ್ಕತ್ತಾ ಹೈಕೋರ್ಟ್‌ಗೆ ಶಿಫಾರಸು ಮಾಡಲಾಗಿದ್ದರೆ 8 ನ್ಯಾಯಮೂರ್ತಿಗಳ ಹೆಸರನ್ನು ಕೇರಳ ಹೈಕೋರ್ಟ್‌ಗೆ ಸೂಚಿಸಲಾಗಿದೆ. ಮಧ್ಯಪ್ರದೇಶ ಹೈಕೋರ್ಟ್‌ಗೆ ಒಬ್ಬ ವಕೀಲರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಆಗಸ್ಟ್ 24 ರಂದು ಮತ್ತು ಸೆಪ್ಟೆಂಬರ್ 1ರಂದು ನಡೆದಿದ್ದ ಸಭೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಕೊಲಿಜಿಯಂ ನ್ಯಾಯಮೂರ್ತಿಗಳ ಹೆಸರನ್ನು ಅಂತಿಮಗೊಳಿಸಿತ್ತು
ಪಿಡಿಎಫ್ ರೂಪದಲ್ಲಿ ಆಯ್ಕೆಗಳ ಸಂಪೂರ್ಣ ಪಟ್ಟಿ ಓದಲು ಇಲ್ಲಿ ಡೌನ್‌ಲೋಡ್ ಮಾಡಿ: