High Court Chief Justices
High Court Chief Justices 
ಸುದ್ದಿಗಳು

ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ಥಿ: ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು

Bar & Bench

ಕರ್ನಾಟಕ ಹೈಕೋರ್ಟ್‌ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ರಿತು ರಾಜ್‌ ಅವಸ್ಥಿ ಅವರ ಹೆಸರನ್ನು ಸುಪ್ರೀಂಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದೆ. ಇದರೊಂದಿಗೆ ದೇಶದ 13 ಹೈಕೋರ್ಟ್‌ಗಳಿಗೆ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು ಹೆಸರಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎ ಎಸ್‌ ಓಕಾ ಅವರು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದ ಬಳಿಕ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಶಿಫಾರಸು ಮಾಡಲಾಗಿದೆ.

ದೇಶದ ವಿವಿಧ ಹೈಕೋರ್ಟ್‌ಗಳಿಗೆ ನೇಮಕವಾಗಿರುವ ಮುಖ್ಯ ನ್ಯಾಯಮೂರ್ತಿಗಳಲ್ಲಿ ಐದು ಮಂದಿ ಬೇರೆ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದು, ವರ್ಗಾವಣೆಗೊಂಡವರಾಗಿದ್ದಾರೆ. ಉಳಿದ ಎಂಟು ಮಂದಿ ಕಿರಿಯ ನ್ಯಾಯಮೂರ್ತಿಗಳಾಗಿದ್ದು ಪದೋನ್ನತಿ ಪಡೆದಿದ್ದಾರೆ.

ಸೆಪ್ಟೆಂಬರ್ 16ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದಲ್ಲಿ ನಡೆದ ಕೊಲಿಜಿಯಂ ಸಭೆ ಈ ನಿರ್ಧಾರ ತೆಗೆದುಕೊಂಡಿದೆ.

ವರ್ಗವಾಣೆಗೊಂಡಿರುವ ಮುಖ್ಯ ನ್ಯಾಯಮೂರ್ತಿಗಳ ಪಟ್ಟಿ ಹೀಗಿದೆ:

1. ನ್ಯಾಯಮೂರ್ತಿ ಅಕಿಲ್‌ ಖುರೇಶಿ - ತ್ರಿಪುರದಿಂದ ರಾಜಸ್ಥಾನಕ್ಕೆ

2. ನ್ಯಾಯಮೂರ್ತಿ ಇಂದ್ರಜಿತ್ ಮಹಂತಿ - ರಾಜಸ್ಥಾನದಿಂದ ತ್ರಿಪುರಕ್ಕೆ

3. ನ್ಯಾಯಮೂರ್ತಿ ಮೊಹಮ್ಮದ್ ರಫೀಕ್ - ಮಧ್ಯಪ್ರದೇಶದಿಂದ ಹಿಮಾಚಲ ಪ್ರದೇಶಕ್ಕೆ

4. ನ್ಯಾಯಮೂರ್ತಿ ಅರುಪ್ ಕುಮಾರ್ ಗೋಸ್ವಾಮಿ - ಆಂಧ್ರ ಪ್ರದೇಶದಿಂದ ಛತ್ತೀಸ್‌ಗಢಕ್ಕೆ

5. ನ್ಯಾಯಮೂರ್ತಿ ಬಿಸ್ವನಾಥ್ ಸೋಮಡ್ಡರ್ - ಮೇಘಾಲಯದಿಂದ ಸಿಕ್ಕಿಂಗೆ

ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದ ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು:

1. ನ್ಯಾಯಮೂರ್ತಿ ರಾಜೇಶ್ ಬಿಂದಾಲ್ – ಅಲಹಾಬಾದ್

2. ನ್ಯಾಯಮೂರ್ತಿ ಪ್ರಕಾಶ್ ಶ್ರೀವತ್ಸ - ಕಲ್ಕತ್ತ

3. ನ್ಯಾಯಮೂರ್ತಿ ಪಿಕೆ ಮಿಶ್ರಾ - ಆಂಧ್ರಪ್ರದೇಶ

4. ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ - ಕರ್ನಾಟಕ

5. ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ - ತೆಲಂಗಾಣ

6. ನ್ಯಾಯಮೂರ್ತಿ ಅರವಿಂದ ಕುಮಾರ್ - ಗುಜರಾತ್

7. ನ್ಯಾಯಮೂರ್ತಿ ಆರ್.ವಿ.ಮಳಿಮಠ - ಮಧ್ಯಪ್ರದೇಶ

8. ನ್ಯಾಯಮೂರ್ತಿ ರಂಜಿತ್ ವಿ ಮೋರ್ - ಮೇಘಾಲಯ

ಕೊಲಿಜಿಯಂ ಕಳೆದ ತಿಂಗಳು ಒಂಬತ್ತು ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿತ್ತು. ಆ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಒಂದು ವಾರದೊಳಗೆ ಅಂಗೀಕರಿಸಿತ್ತು. ಆ ಮೂಲಕ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 24 ರಿಂದ 33 ಕ್ಕೆ ಏರಿಕೆಯಾಗಿತ್ತು.