ಸುದ್ದಿಗಳು

25 ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು

ಇಪ್ಪತ್ತೈದು ನ್ಯಾಯಮೂರ್ತಿಗಳ ವರ್ಗಾವಣೆ ಮಾಡುವ ಪ್ರಸ್ತಾವನೆ ಅಂತಿಮ ಹಂತದಲ್ಲಿದ್ದು, ಸಂಬಂಧಿತ ಪೋಷಕ ಹೈಕೋರ್ಟ್ಗಳಿಂದ ಬಂದು ಸುಪ್ರೀಂ ಕೋರ್ಟ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಲೋಚಕ ನ್ಯಾಯಮೂರ್ತಿಗಳಿಂದ ಕೊಲಿಜಿಯಂ ಅಭಿಪ್ರಾಯ ಪಡೆಯುತ್ತಿದೆ.

Bar & Bench

ದೇಶದ ವಿವಿಧ ಹೈಕೋರ್ಟ್‌ಗಳ 25 ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸು ಮಾಡುವ ಕುರಿತು ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧರಿಸಿದ್ದು ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗಳ ಪುನಾರಚನೆ ಕಾರ್ಯಕ್ಕೆ ಚಾಲನೆ ದೊರೆತಂತಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಇಪ್ಪತ್ತೈದು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲು ನಿರ್ಣಯ ಅಂಗೀಕರಿಸಿದೆ.

ಈ ಕುರಿತಂತೆ ಸಂಬಂಧಿತ ಪೋಷಕ ಹೈಕೋರ್ಟ್‌ಗಳಿಂದ ಪದೋನ್ನತಿ ಪಡೆದು ಈಗ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಲೋಚಕ ನ್ಯಾಯಮೂರ್ತಿಗಳಿಂದ ಕೊಲಿಜಿಯಂ ಅಭಿಪ್ರಾಯ ಪಡೆಯುತ್ತಿದೆ.

ಈ ಪ್ರಕ್ರಿಯೆಗೆ ಆಕ್ಷೇಪಣೆ ಇದ್ದರೆ ಅದನ್ನು ಸಲ್ಲಿಸುವಂತೆಯೂ ವರ್ಗಾವಣೆಯಾಗಲಿರುವ ನ್ಯಾಯಮೂರ್ತಿಗಳಿಗೆ ಕೊಲಿಜಿಯಂ ತಿಳಿಸಿದೆ.

25 ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡುವ ನಿರ್ಧಾರ ಅಂತಿಮವಾಗಿದ್ದು ನ್ಯಾಯಮೂರ್ತಿಗಳು ಬೇರೆ ಹೈಕೋರ್ಟ್‌ಗೆ ವರ್ಗಾವಣೆಯಾಗಲು ವಿನಂತಿಸಿದರೆ ಅಥವಾ ವರ್ಗಾವಣೆ ಮಾಡಲೇಬಾರದು ಎಂದು ತಿಳಿಸಿದರೆ ಮಾತ್ರ ಬದಲಾಯಿಸಬಹುದು ಎಂದು ಮೂಲಗಳು ವಿವರಿಸಿವೆ.

ಈ ವರ್ಗಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ರೋಹಿತ್‌ ಬಿ ದೇವ್‌ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು. ತಮ್ಮನ್ನು ವರ್ಗಾವಣೆ ಮಾಡುತ್ತಾರೆ ಎಂಬುದೇ ಅವರ ರಾಜೀನಾಮೆಗೆ ಕಾರಣ ಎಂದು ಮೂಲಗಳು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿವೆ.