ಕಳೆದ 2017ರಿಂದ ಕನಿಷ್ಠ 12 ಹೈಕೋರ್ಟ್ ನ್ಯಾಯಮೂರ್ತಿಗಳು ರಾಜೀನಾಮೆ ನೀಡಿದ್ದು ಬಾಂಬೆ ಹೈಕೋರ್ಟ್‌ನಲ್ಲಿ ಅತಿ ಹೆಚ್ಚು ನ್ಯಾಯಮೂರ್ತಿಗಳು ರಾಜೀನಾಮೆ ನೀಡಿದ್ದಾರೆ.
ಹೆಚ್ಚುವರಿ ನ್ಯಾಯಮೂರ್ತಿಗಳ ರಾಜೀನಾಮೆಯನ್ನೂ ಪರಿಗಣಿಸಿದರೆ ಈ ಸಂಖ್ಯೆ 16ಕ್ಕೆ ಏರುತ್ತದೆ. ಈ ರಾಜೀನಾಮೆಗಳಲ್ಲಿ ಹಲವನ್ನು ಸ್ವಪ್ರೇರಿತ ಮತ್ತು ವೈಯಕ್ತಿಕ ಕಾರಣಕ್ಕೆ ನೀಡಲಾಗಿದ್ದರೆ ಮತ್ತೂ ಕೆಲವನ್ನು ವರ್ಗಾವಣೆ ಇಲ್ಲವೇ ಪದೋನ್ನತಿ ನಿರಾಕರಣೆ ವಿರೋಧಿಸಿ ನೀಡಲಾಗಿದೆ.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ರೋಹಿತ್ ಬಿ ದೇವ್ ಅವರು ಕಳೆದ ಶುಕ್ರವಾರ ಬೆಳಿಗ್ಗೆ ತೆರೆದ ನ್ಯಾಯಾಲಯದಲ್ಲಿ ರಾಜೀನಾಮೆ ಘೋಷಿಸಿದರು. 'ವೈಯಕ್ತಿಕ ಕಾರಣಗಳಿಂದ' ತಾನು ಅಧಿಕಾರ ತ್ಯಜಿಸುತ್ತಿರುವುದಾಗಿ ಅವರು ಹೇಳಿದರು. ಆದರೂ ವರ್ಗಾವಣೆ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೋಹಗಳಿದ್ದು ಅವರಿಗೆ ತಮ್ಮ ಪೋಷಕ ಹೈಕೋರ್ಟ್‌ನಿಂದ ಹೊರಬರಲು ಇಚ್ಛೆಯಿರಲಿಲ್ಲ ಎನ್ನಲಾಗಿದೆ.
ನ್ಯಾ. ಜಯಂತ್ ಪಟೇಲ್
ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ ನ್ಯಾ. ಜಯಂತ್ ಪಟೇಲ್ ಅವರನ್ನು . ಫೆಬ್ರವರಿ 13 ರಂದು , 2016, ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಆದರೆ ಕರ್ನಾಟಕ ಹೈಕೋರ್ಟ್‌ನಲ್ಲಿಯೇ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಥವಾ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವ ಬದಲು ಅಲಾಹಾಬದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2017 ರಲ್ಲಿ ಅವರು ರಾಜೀನಾಮೆ ನೀಡಿದರು. ಕರ್ನಾಟಕ ಹೈಕೋರ್ಟ್‌ನಲ್ಲಿ ಅವರು ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದರು. ಅಲಹಾಬಾದ್ ಹೈಕೋರ್ಟ್‌ಗೆ ಅವರು ವರ್ಗವಾಗಿದ್ದರೆ ಮೂರನೇ ಅತಿ ಹಿರಿಯ ನ್ಯಾಯಮೂರ್ತಿ ಎನಿಸಿಕೊಳ್ಳುತ್ತಿದ್ದ ಅವರು ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡರು.
ರಾಜೀನಾಮೆ ನೀಡಿ, ಹಿಂಪಡೆದ ನ್ಯಾ. ನಕ್ಕಾ ಬಾಲಯೋಗಿ
ಡಿಸೆಂಬರ್ 2018 ರಲ್ಲಿ, ಹೈದರಾಬಾದ್‌ನ ಆಗಿನ ಹೈಕೋರ್ಟ್ ಆಫ್ ಜುಡಿಕೇಚರ್‌ನ ನ್ಯಾಯಮೂರ್ತಿ ನಕ್ಕಾ ಬಾಲಯೋಗಿ ಅವರು ಕಾಯಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ವರ್ಷದ ಬಳಿಕ ರಾಜೀನಾಮೆ ನೀಡಿದರು. ರಾಜೀನಾಮೆ ಕೇಂದ್ರ ಸರ್ಕಾರ ಒಪ್ಪಿದರೂ ಅದು ಜಾರಿಗೆ ಬರುವ ಮುನ್ನ ನ್ಯಾಯಂನೂರ್ತಿಗಳು ಅದನ್ನು ಹಿಂಪಡೆದರು. ಈ ಕುರಿತಂತೆ ಅವರು ಸಲ್ಲಿಸಿದ್ದ ಮನವಿಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದರು.
ಪರಿಣಾಮವಾಗಿ, ನ್ಯಾಯಮೂರ್ತಿ ಬಾಲಯೋಗಿ ಅವರು ಜನವರಿ 2019 ರಲ್ಲಿ ನಿವೃತ್ತರಾಗುವವರೆಗೂ ನ್ಯಾಯಮೂರ್ತಿಗಳಾಗಿ ಅಧಿಕಾರದಲ್ಲಿ ಮುಂದುವರೆದರು.
ನ್ಯಾಯಮೂರ್ತಿ ವಿ ತಹಿಲ್‌ರಮಣಿ (ಸೆಪ್ಟೆಂಬರ್ 2019)
ಬಾಂಬೆ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗೆ ಸೇವೆ ಸಲ್ಲಿಸುತ್ತಿದ್ದ ನ್ಯಾಯಮೂರ್ತಿ ವಿ ತಹಿಲ್‌ರಮಣಿ ಅವರನ್ನು ಆಗಸ್ಟ್ 2018ರಲ್ಲಿ, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾಯಿಸಲಾಯಿತು.
ಆದರೆ ಹನ್ನೊಂದು ತಿಂಗಳೊಳಗೆ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ಅವರನ್ನು ಮೇಘಾಲಯ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸು ಮಾಡಿತು. ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಮೂವರು ನ್ಯಾಯಮೂರ್ತಿಗಳ ಬಲ ಹೊಂದಿದೆ ಈ ಹೈಕೋರ್ಟ್.
ತನ್ನ ನಿರ್ಧಾರ ಮರುಪರಿಶೀಲಿಸುವಂತೆ ಮಾಡಿದ ಮನವಿಯನ್ನು ಕೊಲಿಜಿಯಂ ಕಿವಿಗೆ ಹಾಕಿಕೊಳ್ಳಲಿಲ್ಲ. ಪರಿಣಾಮ ನ್ಯಾ. ತಹಿಲ್‌ರಮಣಿ ರಾಜೀನಾಮೆ ನೀಡುವಂತಾಯಿತು.
ಮುಖ್ಯ ನ್ಯಾಯಮೂರ್ತಿ ತಹಿಲ್‌ರಮಣಿ ಅವರನ್ನು ಮೇಘಾಲಯ ಹೈಕೋರ್ಟ್‌ಗೆ ವರ್ಗಾಯಿಸುವ ಹಠಾತ್ ಪ್ರಸ್ತಾಪ ಹುಬ್ಬೇರುವಂರತೆ ಮಾಡಿತು. ಏಕೆಂದರೆ ಅವರು ದೇಶದ ಹೈಕೋರ್ಟ್‌ಗಳಲ್ಲೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದರು.
ನ್ಯಾ. ತಹಿಲ್ ರಮಣಿ ಅವರಿಗೆ ಸಂಬಂಧಿಸಿದ ಅಕ್ರಮಗಳನ್ನು ಎತ್ತಿ ತೋರಿಸಿರುವ ಗುಪ್ತಚರ ದಳದ (ಐ ಬಿ) ವರದಿಗೆ ಸಂಬಂಧಿಸಿದಂತೆ ಮೇಲೆ ಕ್ರಮ ಕೈಗೊಳ್ಳುವಂತೆ ಸಿಜೆಐ ಗೊಗೊಯ್ ಅವರು ಸಿಬಿಐಗೆ ಒತ್ತಾಯಿಸಿದ್ದರು ಎಂಬುದು ನಂತರ ಬಹಿರಂಗವಾಯಿತು. ಚೆನ್ನೈನಲ್ಲಿ ಎರಡು ಫ್ಲಾಟ್‌ಗಳ ಖರೀದಿ, ಪ್ರಭಾವಿ ರಾಜಕಾರಣಿಗಳನ್ನು ಒಳಗೊಂಡಿರುವ ವಿಗ್ರಹ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಶೇಷ ಪೀಠವನ್ನು ವಿಸರ್ಜಿಸುವ ನಿರ್ಧಾರ ಹಾಗೂ ತಮಿಳುನಾಡು ಸಚಿವರೊಂದಿಗಿನ ನಿಕಟ ಸಂಬಂಧಗಳ ಕುರಿತಂತೆ ಅವರ ವಿರುದ್ಧ ಆರೋಪಗಳು ಕೇಳಿಬಂದಿದ್ದವು.
ಆದರೆ ಯಾವುದೇ ಸಂಜ್ಞೇಯ ಅಪರಾಧ ಕಂಡುಬಾರದ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ದೋಷಮುಕ್ತಗೊಳಿಸಿತು. ತಮ್ಮನ್ನು ದೋಷಮುಕ್ತಗೊಳಿಸಿದ ಬಳಿಕವೂ ಅವರು ಮೌನಕ್ಕೆ ಶರಣಾದರು ಎಂದು ʼಬಾರ್ & ಬೆಂಚ್ʼ ಆಂಗ್ಲ ಆವೃತ್ತಿಗೆ ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ, ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ ಎನ್ ಪ್ರಕಾಶ್ ನೆನೆದಿದ್ದರು.
ನ್ಯಾ. ಅನಂತ್ ಬಿಜಯ್ ಸಿಂಗ್ (ಜನವರಿ 2020)
ಜನವರಿ 2020ರಲ್ಲಿ ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಅನಂತ್ ಬಿಜಯ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದಾದ ಒಂದು ವಾರದೊಳಗೆ, ನ್ಯಾ. ಸಿಂಗ್ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ನ್ಯಾಯಾಂಗ ಸದಸ್ಯರಾಗಿ ನೇಮಕಗೊಂಡರು.
ನ್ಯಾ. ಎಸ್ ಸಿ ಧರ್ಮಾಧಿಕಾರಿ (ಫೆಬ್ರವರಿ 2020)
ಬಾಂಬೆ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಎಸ್ ಸಿ ಧರ್ಮಾಧಿಕಾರಿ ಅವರು ಫೆಬ್ರವರಿ 14, 2020ರಲ್ಲಿ ಮುಕ್ತ ನ್ಯಾಯಾಲಯದಲ್ಲಿ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು.
ರಾಜೀನಾಮೆ ನೀಡುವ ಸಮಯದಲ್ಲಿ, ನ್ಯಾ. ಧರ್ಮಾಧಿಕಾರಿ ಅವರು ಹೈಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಬೇರೆ ಯಾವುದಾದರೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲು ಪ್ರಸ್ತಾಪಿಸಲಾಯಿತಾದರೂ ತಮ್ಮ ಪೋಷಕ ಹೈಕೋರ್ಟ್‌ನಿಂದ ಹೊರಬರಲು ಅವರು ಉತ್ಸಾಹ ತೋರಲಿಲ್ಲ.
ನ್ಯಾ. ಸಂಗೀತಾ ಧಿಂಗ್ರಾ ಸೆಹಗಲ್ (ಮೇ 2020)
ಮೇ 2020 ರಲ್ಲಿ, ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್ ಅವರು ತಮ್ಮ ನಿವೃತ್ತಿ ದಿನಕ್ಕೂ ಮುನ್ನ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ ಅವರು ದೆಹಲಿ ರಾಜ್ಯ ಗ್ರಾಹಕ ವಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡರು.
ನ್ಯಾಯಮೂರ್ತಿ ಸುನಿಲ್ ಕುಮಾರ್ ಅವಸ್ಥಿ (ಜನವರಿ 2021)
ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಸುನಿಲ್ ಕುಮಾರ್ ಅವಸ್ತಿ ಅವರು ಜನವರಿ 2, 2021ರಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
ಅವರು 2016ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಹೈಕೋರ್ಟ್‌ಗೆ ಪದೋನ್ನತಿ ಪಡೆಯುವ ಮೊದಲು ರಾಜ್ಯದಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರನ್ನು ಮಾರ್ಚ್ 2018ರಲ್ಲಿ ಖಾಯಂಗೊಳಿಸಲಾಗಿತ್ತು.
ನ್ಯಾಯಮೂರ್ತಿ ಶರದ್ ಕುಮಾರ್ ಗುಪ್ತಾ (ಮಾರ್ಚ್ 2021)
ಛತ್ತೀಸ್‌ಗಢ ಹೈಕೋರ್ಟ್ ನ್ಯಾಯಮೂರ್ತಿ ಶರದ್ ಕುಮಾರ್ ಗುಪ್ತಾ ತಾವು ನಿವೃತ್ತರಾಗುವ ಕೆಲ ದಿನಗಳ ಮೊದಲು ಮಾರ್ಚ್ 31, 2021ರಿಂದ ಜಾರಿಗೆ ಬರುವಂತೆ ಹುದ್ದೆಗೆ ರಾಜೀನಾಮೆ ನೀಡಿದರು.
ಕುತೂಹಲಕಾರಿಯಾಗಿ ಆಗ ಅವರು ʼರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರ ತಮಗೆ ಬಹಿರಂಗಪಡಿದಂತಹ ಕೆಲಸ ವಹಿಸಿದ್ದಕ್ಕೆ ತಾವು ಸಮ್ಮತಿ ಸೂಚಿಸಿದ್ದಾಗಿ ಅವರು ತಿಳಿಸಿದ್ದರು. ನ್ಯಾಯಮೂರ್ತಿ ಗುಪ್ತಾ ಅವರು ಜೂನ್ 2017ರಿಂದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದರು.
ನ್ಯಾಯಮೂರ್ತಿ ದಾಮಾ ಶೇಷಾದ್ರಿ ನಾಯ್ಡು (ಆಗಸ್ಟ್ 2021)
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ, ನ್ಯಾಯಮೂರ್ತಿ ದಾಮಾ ಶೇಷಾದ್ರಿ ನಾಯ್ಡು ಅವರು ಆಗಸ್ಟ್ 2021ರಲ್ಲಿ 'ಸಂಪೂರ್ಣವಾಗಿ ವೈಯಕ್ತಿಕ ಕಾರಣಗಳನ್ನು' ಉಲ್ಲೇಖಿಸಿ ತಮ್ಮ ರಾಜೀನಾಮೆ ಸಲ್ಲಿಸಿದರು.
ಬಾಂಬೆ ಹೈಕೋರ್ಟ್‌ಗೆ ವರ್ಗಾವಣೆಯಾಗುವ ಮೊದಲು ಮಾರ್ಚ್ 2019ರಲ್ಲಿ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿಯೂ ಅವರು ಸೇವೆ ಸಲ್ಲಿಸಿದರು. ರಾಜೀನಾಮೆ ನೀಡಿದ ಕೆಲವೇ ತಿಂಗಳುಗಳಲ್ಲಿ, ಮಾಜಿ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿಗೆ ಮರಳಿದರು.
ನ್ಯಾ. ಅಜಯ್ ತಿವಾರಿ (ಮಾರ್ಚ್ 2022)
ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಎರಡನೇ ಹಿರಿಯ-ಅತ್ಯಂತ ನ್ಯಾಯಮೂರ್ತಿಗಳಾಗಿದ್ದ ಅಜಯ್ ತಿವಾರಿ ಅವರು ಮಾರ್ಚ್ 2022ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ಏಪ್ರಿಲ್ 6, 2022ರಂದು ನಿವೃತ್ತರಾಗಬೇಕಿತ್ತು.
ಮುಖ್ಯ ನ್ಯಾಯಮೂರ್ತಿ ರವಿಶಂಕರ್ ಝಾ ನಂತರ ನ್ಯಾಯಮೂರ್ತಿ ತಿವಾರಿ ಎರಡನೇ ಸ್ಥಾನದಲ್ಲಿದ್ದರು. ನ್ಯಾಯಮೂರ್ತಿ ತಿವಾರಿ ಅವರು ಜುಲೈ 2008ರಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆಯುವ ಮೊದಲು 26 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು.
ನ್ಯಾ. ಬರೋವಾಲಿಯಾ (ನವೆಂಬರ್ 2022)
ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಚಂದರ್ ಭೂಷಣ್ ಬರೋವಾಲಿಯಾ ಅವರು ನವೆಂಬರ್ 2022ರಲ್ಲಿ ರಾಜೀನಾಮೆ ಸಲ್ಲಿಸಿದರು.
ಏಪ್ರಿಲ್ 2016 ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆಯುವ ಮೊದಲು, ಅವರು ಜನವರಿ 2003ರಿಂದ ರಾಜ್ಯದ ಕೆಳ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಪದೋನ್ನತಿ ಪಡೆಯುವ ಮುನ್ನ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದರು.
ರಾಜೀನಾಮೆ ನೀಡಿದ ಬಾಂಬೆ ಹೈಕೋರ್ಟ್‌ನ ಕೆಲವು ಹೆಚ್ಚುವರಿ ನ್ಯಾಯಮೂರ್ತಿಗಳು
ʼಚರ್ಮದಿಂದ ಚರ್ಮ ಸ್ಪರ್ಶವಾಗಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯʼ ಎಂಬ ಕುಖ್ಯಾತ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗನೇದಿವಾಲಾ ಅವರು ಫೆಬ್ರವರಿ 2022ರಲ್ಲಿ ರಾಜೀನಾಮೆ ನೀಡಿದರು. ತಮ್ಮನ್ನು ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡದೆ ಇಲ್ಲವೇ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡದೇ ಇದ್ದುದರಿಂದ ಅವರು ರಾಜೀನಾಮೆ ನೀಡಿದರು.
ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಇತರ ಹೆಚ್ಚುವರಿ ನ್ಯಾಯಮೂರ್ತಿಗಳಲ್ಲಿ ಅಶುತೋಷ್ ಕುಂಭಕೋಣಿ, ಅನಿಲ್ ಸಾಖ್ರೆ ಹಾಗೂ ಗಿರೀಶ್ ಗೋಡ್ಬೋಲೆ ಸೇರಿದ್ದಾರೆ.