ಕರ್ನಾಟಕ ಹೈಕೋರ್ಟ್‌ನಿಂದ ಮೂವರು ನ್ಯಾಯಮೂರ್ತಿಗಳನ್ನು ಬೇರೆ ಹೈಕೋರ್ಟ್‌ಗಳಿಗೆ ಹಾಗೂ ಬೇರೆ ಹೈಕೋರ್ಟ್‌ಗಳ ಇಬ್ಬರು ನ್ಯಾಯಮೂರ್ತಿಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿರುವುದು ಸೇರಿ ಒಟ್ಟು 21 ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕೇರಳ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಮತ್ತು ಅಲಾಹಾಬಾದ್ ಹೈಕೋರ್ಟ್ ನ್ಯಾ. ಜಯಂತ್ ಬ್ಯಾನರ್ಜಿ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್ ಅವರನ್ನು ಅವರ ಮಾತೃ ಹೈಕೋರ್ಟ್ ದೆಹಲಿಗೆ, ಸಿ ಸುಮಲತಾ ಮತ್ತು ಲಲಿತಾ ಕನ್ನೆಗಂಟಿ ಅವರನ್ನು ತೆಲಂಗಾಣ ಹೈಕೋರ್ಟ್‌ಗೆ ವರ್ಗಾಯಿಸಲು ಶಿಫಾರಸ್ಸು ಮಾಡಲಾಗಿದೆ. ನ್ಯಾ. ಸುಮಲತಾ ಅವರು ಮಾತೃ ಹೈಕೋರ್ಟ್ ತೆಲಂಗಾಣವಾಗಿದ್ದು, ನ್ಯಾ.ಲಲಿತಾ ಅವರ ಮಾತೃ ಹೈಕೋರ್ಟ್ ಆಂಧ್ರಪ್ರದೇಶವಾಗಿದೆ.
ಉಳಿದಂತೆ ತೆಲಂಗಾಣ ಹೈಕೋರ್ಟ್‌ನ ನ್ಯಾ. ಸುಜಯ್ ಪಾಲ್‌ರನ್ನು ಕಲ್ಕತ್ತಾ ಹೈಕೋರ್ಟ್‌ಗೆ, ಗುವಾಹಟಿ ಹೈಕೋರ್ಟ್ ನ್ಯಾ. ಲನುಸುಂಗಕುಮ್ ಜಮೀರ್ ಅವರನ್ನು ಕಲ್ಕತ್ತಾ ಹೈಕೋರ್ಟ್‌ಗೆ, ಗುವಾಹಟಿ ಹೈಕೋರ್ಟ್ ನ್ಯಾ. ಮನಶ್ ರಂಜನ್ ಪಾಠಕ್‌ರನ್ನು ಒಡಿಶಾ ಹೈಕೋರ್ಟ್‌ಗೆ, ಬಾಂಬೆ ಹೈಕೋರ್ಟ್ ನ್ಯಾ. ನಿತಿನ್ ಸಾಂಬ್ರೆ ಅವರನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ಅಲ್ಲದೆ, ಅಲಾಹಾಬಾದ್ ಹೈಕೋರ್ಟ್ ನ್ಯಾ. ಅಶ್ವನಿ ಕುಮಾರ್ ಮಿಶ್ರಾ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ, ಗುವಾಹಟಿಯ ನ್ಯಾ. ಸುಮನ್ ಶ್ಯಾಮ್ ಅವರನ್ನು ಬಾಂಬೆ ಹೈಕೋರ್ಟ್‌ಗೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ಅವರನ್ನು ಅವರ ಮಾತೃ ಹೈಕೋರ್ಟ್ ರಾಜಸ್ಥಾನಕ್ಕೆ, ಅಲಾಹಾಬಾದ್ ಹೈಕೋರ್ಟ್ ನ್ಯಾ. ವಿವೇಕ್ ಚೌಧರಿ ಅವರನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಮದ್ರಾಸ್ ಹೈಕೋರ್ಟ್ ನ್ಯಾ. ವಿವೇಕ್ ಕುಮಾರ್ ಸಿಂಗ್ ಅವರನ್ನು ಮಧ್ಯ ಪ್ರದೇಶ್ ಹೈಕೋರ್ಟ್, ಆಂಧ್ರ ಪ್ರದೇಶ ಹೈಕೋರ್ಟ್ ನ್ಯಾ. ಬಟ್ಟು ದೇವಾನಂದ್ ಅವರನ್ನು ಅವರ ಮಾತೃ ಹೈಕೋರ್ಟ್ ಮದ್ರಾಸ್‌ಗೆ, ಅಲಾಹಾಬಾದ್ ಹೈಕೋರ್ಟ್ ನ್ಯಾ. ಓಂ ಪ್ರಕಾಶ್ ಶುಕ್ಲಾ ಅವರನ್ನು ದೆಹಲಿ ಹೈಕೋರ್ಟ್‌ಗೆ, ರಾಜಸ್ಥಾನ ಹೈಕೋರ್ಟ್ ನ್ಯಾ. ಶ್ರೀ ಚಂದ್ರಶೇಖರ್ ಅವರನ್ನು ಬಾಂಬೆ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.
ಪಟ್ನಾ ಹೈಕೋರ್ಟ್ ನ್ಯಾ. ಸುಧೀರ್ ಸಿಂಗ್ ಅವರನ್ನು ಅವರ ಮಾತೃ ಹೈಕೋರ್ಟ್ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನ್ಯಾ. ಅನಿಲ್ ಕ್ಷೇತ್ರಪಾಲ್ ಅವರನ್ನು ದೆಹಲಿ ಹೈಕೋರ್ಟ್‌ಗೆ, ರಾಜಸ್ಥಾನ ಹೈಕೋರ್ಟ್ ನ್ಯಾ. ಅರುಣ್ ಕುಮಾರ್ ಮೊಂಗಾ ಅವರನ್ನು ದೆಹಲಿ ಹೈಕೋರ್ಟ್‌ಗೆ, ಪಟ್ನಾ ಹೈಕೋರ್ಟ್ ನ್ಯಾ. ಅನ್ನೀರ್‌ರೆಡ್ಡಿ ಅಭಿಷೇಕ್ ರೆಡ್ಡಿ ಅವರನ್ನು ಅವರ ಮಾತೃ ಹೈಕೋರ್ಟ್ ತೆಲಂಗಾಣಕ್ಕೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ.