ಸುಪ್ರೀಂ ಕೋರ್ಟ್ ಕೊಲಿಜಿಯಂನ ಇತ್ತೀಚಿನ ಚರ್ಚೆಗಳ ಬಗ್ಗೆ ಗೊಂದಲ ಮೂಡಿದ ಹಿನ್ನೆಲೆಯಲ್ಲಿ, ಕೊಲಿಜಿಯಂ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಸುಪ್ರೀಂ ಕೋರ್ಟ್‌ಗೆ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಿಸಲು ಒಪ್ಪಿಗೆ ಕೋರಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಅವರು ಕಳುಹಿಸಿದ ಪತ್ರಕ್ಕೆ ಆಕ್ಷೇಪಿಸಿದ್ದವರು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಸ್ ಅಬ್ದುಲ್ ನಜೀರ್ ಎಂದು ಅದು ಬಹಿರಂಗಪಡಿಸಿದೆ.
ಕೊಲಿಜಿಯಂ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಮತ್ತು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಸಿಜೆಐ ಲಲಿತ್ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ಅಕ್ಟೋಬರ್ 7ರಂದು ಮನವಿ ಪತ್ರ ಕಳುಹಿಸಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 30ರ ಸಭೆಯಲ್ಲಿ ಪ್ರಾರಂಭಿಸಲು ಯೋಜಿಸಲಾಗಿದ್ದ ಕಾರ್ಯಗಳನ್ನು ಯಾವುದೇ ಚರ್ಚೆ ಇಲ್ಲದೆ ರದ್ದುಪಡಿಸಲಾಗಿದೆ” ಎಂದು ನಿರ್ಣಯ ತಿಳಿಸಿದೆ.
ಕೊಲಿಜಿಯಂ ನ್ಯಾಯಮೂರ್ತಿಗಳಿಗೆ ವಿತರಿಸಲಾಗಿದ್ದ ಪತ್ರದಲ್ಲಿ ಸಿಜೆಐ ಲಲಿತ್ ಅವರು ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಲು ಕೋರಿದ್ದರು:
ನ್ಯಾ. ರವಿಶಂಕರ್ ಝಾ (ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ)
ನ್ಯಾ. ಸಂಜಯ್ ಕರೋಲ್ (ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ)
ನ್ಯಾ. ಪಿ ವಿ ಸಂಜಯ್ ಕುಮಾರ್ (ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ)
ಹಿರಿಯ ನ್ಯಾಯವಾದಿ ಕೆ ವಿ ವಿಶ್ವನಾಥನ್.
ಸುಪ್ರೀಂ ಕೋರ್ಟ್ ನೇಮಕಕ್ಕೆ ಶಿಫಾರಸು ಮಾಡಬೇಕಾದ ಹೆಸರುಗಳನ್ನು ದೃಢೀಕರಿಸಲು ಕೊಲಿಜಿಯಂ ಸೆಪ್ಟೆಂಬರ್ 30ರಂದು ಸಭೆ ನಡೆಸಬೇಕಿತ್ತು. ಆದರೆ, ಎರಡನೇ ಹಿರಿಯ ನ್ಯಾ. ಚಂದ್ರಚೂಡ್ ಅವರು ಅಂದು ರಾತ್ರಿ 9:10ರವರೆಗೆ ಪ್ರಕರಣಗಳ ವಿಚಾರಣೆ ನಡೆಸಿದ್ದರಿಂದ ಸಭೆ ಸೇರಲಾಗಿರಲಿಲ್ಲ. ಹೀಗಾಗಿ ಪತ್ರ ಮುಖೇನ ಸಿಜೆಐ ಅವರು ಆಯ್ಕೆಗೆ ಸಂಬಂಧಿಸಿದಂತೆ ಉಳಿದ ನ್ಯಾಯಮೂರ್ತಿಗಳ ಒಪ್ಪಿಗೆ ಕೋರಿದ್ದರು.
ಸಿಜೆಐ ಲಲಿತ್ ಅವರು ಪ್ರಸ್ತಾಪಿಸಿದ ಹೆಸರುಗಳಿಗೆ ನ್ಯಾಯಮೂರ್ತಿಗಳಾದ ಕೌಲ್ ಮತ್ತು ಜೋಸೆಫ್ ಒಪ್ಪಿಗೆ ಸೂಚಿಸಿದ್ದರು. ಆದರೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ನಜೀರ್ ಅವರು ಪತ್ರ ಪ್ರಸರಣದ ಮುಖೇನ ಹೆಸರುಗಳನ್ನು ಅಂತಿಮಗೊಳಿಸುವ ವಿಧಾನವನ್ನು ವಿರೋಧಿಸಿದರು ಎಂದು ಕೊಲಿಜಿಯಂ ಹೇಳಿಕೆ ತಿಳಿಸಿದೆ.
ಅಕ್ಟೋಬರ್ 2ರಂದು ಸಿಜೆಐ ಎರಡನೇ ಪತ್ರವನ್ನು ಉದ್ದೇಶಿಸಿ, ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸುತ್ತೋಲೆ ಮೂಲಕ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಮತ್ತು ನೇಮಕ ಮಾಡುವ ಪ್ರಕ್ರಿಯೆಗೆ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಅಬ್ದುಲ್ ನಜೀರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕೊಲಿಜಿಯಂ ಹೇಳಿಕೆ ತಿಳಿಸಿದೆ.
ಸೆಪ್ಟೆಂಬರ್ 26ರಂದು ನಡೆದ ಸಭೆಯಲ್ಲಿ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿಗೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲು ಕೊಲಿಜಿಯಂ ಸರ್ವಾನುಮತದಿಂದ ಒಪ್ಪಿಗೆ ನೀಡಿತ್ತು. ಆದರೆ ಪರಿಗಣನೆಯಲ್ಲಿರುವ ಹತ್ತು ಇತರ ಹೆಸರುಗಳಿಗೆ ಸಂಬಂಧಿಸಿದಂತೆ, ಆಯಾ ನ್ಯಾಯಮೂರ್ತಿಗಳು ನೀಡಿದ ತೀರ್ಪುಗಳ ಸಂಖ್ಯೆಯನ್ನು ಪರಿಶೀಲಿಸುವುದು ಸೂಕ್ತವೆಂದು ಕೊಲಿಜಿಯಂ ಭಾವಿಸಿ ಸಭೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆದರೆ ಸಭೆ ನಡೆಯದ ಕಾರಣ ಸಿಜೆಐ ಪತ್ರ ಬರೆಯುವಂತಾಯಿತು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
[ಹೇಳಿಕೆಯ ಪ್ರತಿಯನ್ನು ಇಲ್ಲಿ ಓದಿ]