Allahabad High Court  aljazeera
ಸುದ್ದಿಗಳು

ಅಲಾಹಾಬಾದ್ ಹೈಕೋರ್ಟ್ ಆವರಣದಿಂದ ಮಸೀದಿ ತೆರವು: ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಹೈಕೋರ್ಟ್ ಆದೇಶ ಜಾರಿಗೊಳಿಸಲು ಕಕ್ಷಿದಾರರಿಗೆ ಮೂರು ತಿಂಗಳ ಕಾಲಾವಕಾಶ ನೀಡಿದ ಪೀಠ. ಪರ್ಯಾಯ ಭೂಮಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಸೂಚನೆ.

Bar & Bench

ತನ್ನ ಆವರಣದಲ್ಲಿದ್ದ ಮಸೀದಿಯನ್ನು ತೆರವುಗೊಳಿಸುವಂತೆ ಅಲಾಹಾಬಾದ್‌ ಹೈಕೋರ್ಟ್‌ ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ವಕ್ಫ್ ಮಸೀದಿ ಹೈಕೋರ್ಟ್ ಮತ್ತು ಹೈಕೋರ್ಟ್‌ ಆಫ್‌ ಜ್ಯೂರಿಕೇಟ್‌ ಅಲಾಹಾಬಾದ್‌ ನಡುವಣ ಪ್ರಕರಣ].

ಹೈಕೋರ್ಟ್‌ ನೀಡಿದ್ದ ಆದೇಶ ಜಾರಿಗೊಳಿಸಲು ಕಕ್ಷಿದಾರರಿಗೆ ಮೂರು ತಿಂಗಳ ಕಾಲಾವಕಾಶ ನೀಡಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಪರ್ಯಾಯ ಭೂಮಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ʼವಕ್ಫ್ ಮಸೀದಿ ಹೈಕೋರ್ಟ್‌ʼಗೆ ಅವಕಾಶ ಕಲ್ಪಿಸಿತು.

“ಆಕ್ಷೇಪ ಎತ್ತಲಾದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ತೋರುತ್ತಿಲ್ಲ. ಆದರೂ ಸಾರ್ವಜನಿಕ ಉದ್ದೇಶಕ್ಕೆ ಅಗತ್ಯ ಇಲ್ಲದಿರುವಂತಹ ಜಮೀನನ್ನು ಕಾನೂನು ರೀತ್ಯಾ ಮತ್ತು ಅರ್ಹತೆಯ ಆಧಾರದಲ್ಲಿ ಪಡೆಯಲು ಕೋರಿ ರಾಜ್ಯ ಸರ್ಕಾರಕ್ಕೆ ವಿವರವಾದ ಅರ್ಜಿ ಸಲ್ಲಿಸಲು ಕಕ್ಷಿದಾರರಿಗೆ ಮುಕ್ತ ಅವಕಾಶವಿದೆ. ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಲಾಗಿದ್ದು ಅರ್ಜಿದಾರರು ಮಸೀದಿಯನ್ನು ತೆರವುಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

ವಕ್ಫ್ ಆಸ್ತಿಯಾದ  ಮಸೀದಿ ಮೂಲತಃ ಹೈಕೋರ್ಟ್‌ಗೆ ಸೇರಿದ್ದ ಭೂಮಿಯಲ್ಲಿದೆ ಎಂದು ವಾದಿಸಿ ಅಭಿಷೇಕ್ ಶುಕ್ಲಾ ಅವರು ಅಲಾಹಾಬಾದ್‌ ಹೈಕೋರ್ಟ್‌ಗೆ ಸಲ್ಲಿಸಿದ್ದರು.

ಅಲಾಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ಬಿ ಭೋಸ್ಲೆ ಮತ್ತು ನ್ಯಾಯಮೂರ್ತಿ ಎಂ ಕೆ ಗುಪ್ತಾ ಅವರಿದ್ದ ವಿಭಾಗೀಯ ಪೀಠ ನವೆಂಬರ್ 8, 2017ರಂದು, “ ಹೈಕೋರ್ಟ್ ಆವರಣದಲ್ಲಿ ವ್ಯಾಜ್ಯದಲ್ಲಿರುವ ನಿವೇಶನದ ಮೇಲಿರುವ ಅನಧಿಕೃತ ನಿರ್ಮಿತಿಗಳು ಮುಂದುವರಿಯಲು ಅನುಮತಿ ನೀಡುವುದಿಲ್ಲ” ಎಂದು ತೀರ್ಪು ನೀಡಿತ್ತು.

ಇಂದು ಮೇಲ್ಮನವಿ ಸಲ್ಲಿಸಿದ್ದ ಮಸೀದಿ ಸಮಿತಿ ಪರ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ʼಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾದ ಕೂಡಲೇ ಮಸೀದಿ ತೆರವು ಕೋರಿ ಅರ್ಜಿ ಸಲ್ಲಿಸಲಾಗಿದೆ. ಅಗ್ನಿಶಾಮಕ ದಳಕ್ಕೆ ಜಾಗ ಅಗತ್ಯವಿದೆ ಎಂದು ಹೈಕೋರ್ಟ್‌ ಹೇಳುತ್ತಿದ್ದು ಈ ತರ್ಕವನ್ನು ಮಸೀದಿಗೆ ಮಾತ್ರವಲ್ಲದೆ ಆವರಣದಲ್ಲಿರುವ ಎಲ್ಲಾ ಆಸ್ತಿಗೂ ಅನ್ವಯಿಸಬೇಕುʼ ಎಂದು ಕೋರಿದರು.

ಇತ್ತ ಉತ್ತರಪ್ರದೇಶ ಸುನ್ನಿ ವಕ್ಫ್‌ ಬೋರ್ಡ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ನಮಗೆ ಬೇರೆ ಜಾಗ ನೀಡಿದರೆ ಅಲ್ಲಿ ನಮಾಜ್‌ಗೆ ಒತ್ತಾಯಿಸುವುದಿಲ್ಲ” ಎಂದರು. ಈ ಎಲ್ಲಾ ಅಂಶಗಳನ್ನೂ ಈ ಹಿಂದೆ ಹೈಕೋರ್ಟ್‌ ಪರಿಗಣಿಸಿತ್ತು ಎಂದು ಪ್ರತಿವಾದಿಗಳ ಪರ ವಕೀಲರು ವಾದಿಸಿದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಕೂಡ ತಮ್ಮ ವಾದ ಮಂಡಿಸಿದರು.